ರಾಷ್ಟ್ರೀಯ

ಪಾಕ್‌ಗೆ ಹರಿಯುವ ನೀರು ತಡೆದ ಭಾರತ: ಪುಲ್ವಾಮಾ ದಾಳಿಗೆ ಬೆಲೆ ತೆತ್ತ ಪಾಕಿಸ್ತಾನ

Pinterest LinkedIn Tumblr


ಹೊಸದಿಲ್ಲಿ: ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನಕ್ಕೆ ಪಾಠ ಕಲಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿ, ಪಾಕ್‌ ಕಡೆಗೆ ಹರಿಯುವ ಮೂರು ನದಿಗಳ ನೀರನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ಅರ್ಜುನ್ ಮೇಘ್ವಾಲ್ ತಿಳಿಸಿದರು.

ರಾಜಸ್ಥಾನದ ಬಿಕಾನೇರ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಜಲ ಸಂಪನ್ಮೂಲ ಖಾತೆ ರಾಜ್ಯ ಸಚಿವರು, ‘ಪಾಕಿಸ್ತಾನದ ಕಡೆಗೆ ಪೂರ್ವಾಭಿಮುಖ ಹರಿಯುವ ನದಿಗಳ 0.53 ಎಕರೆ ಫೀಟ್‌ ನೀರನ್ನು ತಡೆ ಹಿಡಿಯಲಾಗಿದೆ. ಆ ನೀರನ್ನು ಸಂಗ್ರಹಿಸಿ ಇಡಲಾಗುತ್ತಿದ್ದು, ರಾಜಸ್ಥಾನ ಅಥವಾ ಪಂಜಾಬ್‌ಗೆ ಅಗತ್ಯವಿರುವಾಗ ಕುಡಿಯುವ ಹಾಗೂ ನೀರಾವರಿ ಉದ್ದೇಶಕ್ಕೆ ಬಳಸಿಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.

ಭಾರತದ ಈ ಕ್ರಮದಿಂದ 1960ರ ಸಿಂಧೂ ಜಲ ಒಪ್ಪಂದದ ಉಲ್ಲಂಘನೆಯಾಗಿಲ್ಲ; ಸಟ್ಲೆಜ್, ರಾವಿ ಮತ್ತು ಬಿಯಾಸ್ ನದಿಗಳ ಪೂರ್ವಾಭಿಮುಖ ಹರಿವನ್ನು ನಿಲ್ಲಿಸಿ ಭಾರತ ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಒಪ್ಪಂದದಲ್ಲೇ ಅವಕಾಶವಿದೆ ಎಂದು ಸಚಿವರು ತಿಳಿಸಿದರು.

ಕಳೆದ ತಿಂಗಳು ಪಾಕ್ ಬೆಂಬಲಿತ ಜೈಷೆ ಮೊಹಮ್ಮದ್ ಉಗ್ರರು ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ವಾಹನಗಳ ಮೇಲೆ ಬಾಂಬ್ ದಾಳಿ ನಡೆಸಿ 40 ಯೋಧರನ್ನು ಹತ್ಯೆಗೈದಿದ್ದರು. ಅದಕ್ಕೆ ಪ್ರತೀಕಾರದ ಕ್ರಮವಾಗಿ ಭಾರತ ವೈಮಾನಿಕ ದಾಳಿ ನಡೆಸಿ ಉಗ್ರ ನೆಲೆಗಳನ್ನು ನಾಶಪಡಿಸಿತ್ತು. ಅಲ್ಲದೆ ಪಾಕ್‌ಗೆ ಹರಿಯುವ ನೀರನ್ನೂ ನಿಲ್ಲಿಸುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದರು.

ಸಿಂಧೂ ಜಲ ಒಪ್ಪಂದದ ಅನ್ವಯ, ಪಶ್ಚಿಮ ಕ್ಕೆ ಹರಿಯುವ ಸಿಂಧೂ, ಝೀಲಂ ಮತ್ತು ಚಿನಾಬ್ ನದಿಗಳ ನೀರನ್ನು ಪಾಕ್‌ ಬಳಸಿಕೊಳ್ಳಬಹುದಾಗಿದೆ. ಅದೇ ರೀತಿ ಪೂರ್ವಾಭಿಮುಖ ಹರಿಯುವ ಸಟ್ಲೆಜ್, ರಾವಿ ಮತ್ತು ಬಿಯಾಸ್ ನದಿಗಳ ನೀರನ್ನು ಭಾರತ ಬಳಸಿಕೊಳ್ಳಬಹುದಾಗಿದೆ.

ಪೂರ್ವಾಭಿಮುಖ ಹರಿಯುವ ನದಿಗಳ ನೀರಿನಲ್ಲಿ ಸುಮಾರು 33 ದಶಲಕ್ಷ ಎಕರೆ ಫೀಟ್ (ಎಂಎಎಫ್‌) ನೀರು ತಾಂತ್ರಿಕವಾಗಿ ಭಾರತದ ಪಾಲಿಗೆ ಸೇರುತ್ತದೆ. ಅದರ ಪೈಕಿ ಶೇ 95ರಷ್ಟು ನೀರನ್ನು ನದಿಗಳ ಪ್ರಮುಖ ಅಣೆಕಟ್ಟೆಗಳಲ್ಲೇ ತಡೆಹಿಡಿದು ಬರಗಾಲದ ಪ್ರದೇಶಗಳಿಗೆ ನೀರುಣಿಸಲು ಬಳಸಲಾಗುತ್ತದೆ. ಶೇ 5ರಷ್ಟು ಪಾಲು ಮಾತ್ರ (1.6 ಎಂಎಎಫ್‌) ಕಳೆದ 60 ವರ್ಷಗಳಿಂದಲೂ ಪಾಕಿಸ್ತಾನಕ್ಕೆ ಹರಿಯುತ್ತಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಮ್ಮ ಸರಕಾರ ಪಾಕಿಸ್ತಾನಕ್ಕೆ ಹರಿಯುವ ನೀರಿನ ಪಾಲನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಪೂರ್ವದ ನದಿಗಳ ನೀರನ್ನು ಜಮ್ಮು-ಕಾಶ್ಮೀರ ಹಾಗೂ ಪಂಜಾಬ್‌ನ ನಮ್ಮ ಜನತೆಗೆ ಒದಗಿಸಲಾಗುವುದು’ ಎಂದು ನಿತಿನ್ ಗಡ್ಕರಿ ಕಳೆದ ತಿಂಗಳು ಘೋಷಿಸಿದ್ದರು.

Comments are closed.