ಬೆಂಗಳೂರು: ಈ ಬಾರಿ ಮತದಾನ ಮಾಡಲು ನಿಮ್ಮ ಬಳಿ ವೋಟರ್ ಐಡಿ ಇರಬೇಕಿಲ್ಲ. ಯಾಕೆ ಗೊತ್ತೇ? ಪ್ರತೀ ಬಾರಿ ಮತದಾರ ಮತಗಟ್ಟೆಯ ಅಧಿಕಾರಿಗೆ ತನ್ನ ವೋಟರ್ ಐಡಿ ತೋರಿಸಬೇಕಿತ್ತು. ಅದಾದ ನಂತರ ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ ಎಂಬುದನ್ನು ನೋಡಿದ ನಂತರ ಚುನಾವಣಾಧಿಕಾರಿ ಮತಹಾಕಲು ಅನುಮತಿ ನೀಡುತ್ತಿದ್ದರು. ಆದರೆ ಈ ಬಾರಿ ವೋಟರ್ ಐಡಿ ಇಲ್ಲದಿದ್ದರೂ ನೀವು ಮತಹಾಕಬಹುದು. ಹೇಗೆ? ಉತ್ತರ ಇಲ್ಲಿದೆ.
ಭಾನುವಾರ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಸುನೀಲ್ ಅರೋರಾ ಪತ್ರಿಕಾಗೋಷ್ಠಿ ನಡೆಸಿ ಚುನಾವಣಾ ದಿನಾಂಕ ಘೋಷಿಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಮಾಧ್ಯಮಗೋಷ್ಠಿ ನಡೆಸಿದರು. ಗೋಷ್ಠಿಯಲ್ಲಿ ಚುನಾವಣೆಯ ರೂಪುರೇಷೆಗಳ ಬಗ್ಗೆ ಮಾತನಾಡಿದ ಸಂಜೀವ್ ಕುಮಾರ್ ಈ ಬಾರಿ ಮತದಾನದ ವೇಳೆ ವೋಟರ್ ಐಡಿ ತೋರಿಸುವುದು ಕಡ್ಡಾಯವಲ್ಲ ಎಂಬ ಮಾಹಿತಿ ನೀಡಿದ್ದಾರೆ.
ವೋಟರ್ ಪಟ್ಟಿಯಲ್ಲಿ ಮತದಾರನ ಹೆಸರಿದ್ದರೆ ಸಾಕು ಜತೆಗೆ ಗುರುತಿನ ಚೀಟಿ ಯಾವುದಾದರೂ ಒಂದನ್ನು ತೋರಿಸಬೇಕು. ಗುರುತಿನ ಚೀಟಿಯಲ್ಲಿರುವ ಹೆಸರು, ಭಾವಚಿತ್ರ ಮತ್ತು ವೋಟರ್ ಪಟ್ಟಿಯಲ್ಲಿರುವ ಹೆಸರಿಗೂ ಹೊಂದಿಕೆಯಾದರೆ ಮತದಾನ ಮಾಡಬಹುದು. ಈ ಹಿಂದೆ ವೋಟರ್ ಐಡಿ ಕಳುವಾದರೆ ಅಥವಾ ತರುವುದನ್ನು ಮರೆತಿದ್ದರೆ ಮತದಾನ ಮಾಡಲು ಆಗುತ್ತಿರಲಿಲ್ಲ. ಆದರೀಗ ಚುನಾವಣಾ ಆಯೋಗದ ಹೊಸ ನೀತಿಯಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.
ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್ಪೋರ್ಟ್, ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್, ರೇಷನ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್, ಕೇಂದ್ರ/ರಾಜ್ಯ ಸರ್ಕಾರಿ ನೌಕರರ ಐಡಿ ಕಾರ್ಡ್, ನರೇಗಾ ಉದ್ಯೋಗ ಕಾರ್ಡ್, ಕಾರ್ಮಿಕ ಇಲಾಖೆಯಿಂದ ನೀಡಿದ ಹೆಲ್ತ್ ಇನ್ಶೂರೆನ್ಸ್ ಕಾರ್ಡ್, ಪಿಂಚಣಿ ಕಾರ್ಡ್, ಶಾಸಕ, ಸಂಸದರ ಐಡಿ ಕಾರ್ಡ್ಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ನೀವು ಮತ ಹಾಕಬಹುದು. ಇದರಿಂದ ಮರೆಗುಳಿಗಳಿಗೆ ಅಥವಾ ಚುನಾವಣೆ ಹತ್ತಿರವಿದೆ ಎಂಬ ಕ್ಷಣದಲ್ಲಿ ವೋಟರ್ ಐಡಿ ಕಳೆದುಕೊಂಡವರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಸಹಕಾರಿಯಾಗಲಿದೆ.
Comments are closed.