ರಾಷ್ಟ್ರೀಯ

ಫಡ್ನವೀಸ್​ ಆಶ್ವಾಸನೆ ನಂತರ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಅಣ್ಣಾ ಹಜಾರೆ

Pinterest LinkedIn Tumblr


ನವದೆಹಲಿ: ಭ್ರಷ್ಟಾಚಾರ ನಿರ್ಮೂಲನೆಗಾಗಿ ಕೇಂದ್ರದಲ್ಲಿ ಲೋಕಪಾಲ್ ಹಾಗೂ ಪ್ರತಿ ರಾಜ್ಯಗಳಲ್ಲೂ ಲೋಕಾಯುಕ್ತ ಜಾರಿಗೆ ತರುವಂತೆ ಆಗ್ರಹಿಸಿ, ಅಣ್ಣಾ ಹಜಾರೆ ಕಳೆದ ಏಳು ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಇಂದು ಅಂತ್ಯಗೊಳಿಸಿದರು. ತಮ್ಮ ಬೇಡಿಕೆ ಈಡೇರಿಸುವ ಭರವಸೆಯನ್ನು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ನೀಡಿದ ನಂತರ ಅಣ್ಣಾ ಹಜಾರೆ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದರು.

ದೇವೇಂದ್ರ ಫಡ್ನವೀಸ್​ ಮತ್ತು ಇತರೆ ಕೆಲ ಸಚಿವರೊಂದಿಗೆ ನಡೆದ ಮಾತುಕತೆ ನನಗೆ ಸಮಾಧಾನಕರವಾಗಿದೆ. ಹೀಗಾಗಿ ನನ್ನ ಉಪವಾಸ ಸತ್ಯಾಗ್ರಹವನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ ಎಂದು ಹಜಾರೆ ಹೇಳಿದ್ದಾರೆ.

ಇಂದು ಮಧ್ಯಾಹ್ನ ಅಹಮದ್​ನಗರದಲ್ಲಿರುವ ಅಣ್ಣಾ ಹಜಾರೆ ಅವರ ಸ್ವಗ್ರಾಮ ರಾಲೆಂಗಣ ಸಿದ್ದಿಗೆ ತೆರಳಿದ ಫಡ್ನವೀಸ್​, ಹೋರಾಟಗಾರರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಆಶ್ವಾಸನೆ ನೀಡಿದರು. ಲೋಕಪಾಲ್​ ನೇಮಕಕ್ಕೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಫಡ್ನವೀಸ್​ ಹೇಳಿದರು.

ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್, ಸುಭಾಷ್​ ಭಮ್ರೆ ಹಾಗೂ ಮಹಾರಾಷ್ಟ್ರ ರಾಜ್ಯ ಸರ್ಕಾರದ ಸಚಿವ ಗಿರೀಶ್ ಮಹಾಜನ್​ ಅವರು ಕೂಡ ಈ ವೇಳೆ ಹಾಜರಿದ್ದು, ಹಜಾರೆ ಅವರೊಂದಿಗೆ ಮಾತುಕತೆ ನಡೆಸಿದರು.

ಅಣ್ಣಾ ಹಜಾರೆ ಅವರು ಸೋಮವಾರ, ಅಧಿಕಾರಕ್ಕಾಗಿ ಬಿಜೆಪಿ ನಾಯಕರು 2014ರಲ್ಲಿ ಅಂದಿನ ಆಡಳಿತಾರೂಢ ಸರ್ಕಾರದ ವಿರುದ್ಧ ತಿರುಗಿಬಿದ್ದು, ಲೋಕಪಾಲ್​ ಜಾರಿಗೆ ಆಗ್ರಹಿಸಿದ್ದರು. ಈಗಲೂ ಮತಕ್ಕಾಗಿ ಅದೇ ಭಾವೋದ್ವೇಗವನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.

ಅಂದು ಲೋಕಪಾಲ್​ ಮತ್ತು ಲೋಕಾಯುಕ್ತ ಜಾರಿಗೆ ಆಗ್ರಹಿಸಿ ನಾನು ರಾಮಲೀಲಾ ಮೈದಾನದಲ್ಲಿ ಆರಂಭಿಸಿದ ಹೋರಾಟಕ್ಕೆ ಇಡೀ ದೇಶವೇ ಕೈ ಜೋಡಿಸಿತು. ಇದರಿಂದಾಗಿ ಕಾಂಗ್ರೆಸ್​ ಅಧಿಕಾರ ಕಳೆದುಕೊಂಡು, ಬಿಜೆಪಿ ಅಧಿಕಾರಕ್ಕೆ ಬಂತು. ಜನರಿಂದ ಅಧಿಕಾರ ಪಡೆದ ಬಿಜೆಪಿ ಜನರಿಗೆ ದ್ರೋಹ ಬಗೆಯಿತು ಎಂದು ಕೇಂದ್ರ ಸರ್ಕಾರದ ವಿರುದ್ಧ ಅಣ್ಣಾ ಹಜಾರೆ ಗುಡುಗಿದ್ದರು.

ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್​ ಅವರಂತಹ ನಾಯಕರು ಸಂಸತ್ತಿನಲ್ಲಿ ಲೋಕಪಾಲ್​, ಲೋಕಾಯುಕ್ತಕ್ಕಾಗಿ ಸಂಸತ್ತಿನದಲ್ಲಿ ಧ್ವನಿ ಎತ್ತಿದ್ದರು. ಆದರೆ, ಅವರೇ ಅಧಿಕಾರಕ್ಕೆ ಬಂದ ನಂತರ ಅದರ ಬಗ್ಗೆ ಮಾತನ್ನೇ ಆಡಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಸೋಮವಾರ ಎಂಎನ್​ಎಸ್​ ಮುಖ್ಯಸ್ಥ ರಾಜ್​ ಠಾಕ್ರೆ ಮತ್ತು ಜಲ ಸಂರಕ್ಷಕ ರಾಜೇಂದ್ರ ಸಿಂಗ್​ ಅವರು ಹಜಾರೆ ಅವರನ್ನು ಭೇಟಿಯಾಗಿ ತಮ್ಮ ಹೋರಾಟಕ್ಕೆ ಬೆಂಬಲ ಮುಂದುವರೆಸುವ ಭರವಸೆ ನೀಡಿದ್ದರು.

ಉಪಯೋಗವಿಲ್ಲದ ಸರ್ಕಾರಕ್ಕೆ ಅಣ್ಣಾ ಹಜಾರೆ ಪ್ರಾಣ ಕಳೆದುಕೊಳ್ಳುವುದು ಬೇಡ ಎಂದು ಠಾಕ್ರೆ ಹೇಳಿದ್ದರು.

Comments are closed.