ರಾಷ್ಟ್ರೀಯ

ಮದುವೆಯಲ್ಲಿ ಕನ್ಯಾದಾನ ಮಾಡಲು ನಿರಾಕರಿಸಿದ ತಂದೆ

Pinterest LinkedIn Tumblr


ಕೊಲ್ಕತಾ: ಅಲ್ಲಿ ಮದುವೆ ನಡೆಯುತ್ತಿತ್ತು. ಮಗಳ ಮದುವೆಯೆಂದ ಮೇಲೆ ಕೇಳಬೇಕೆ? ಅಮ್ಮ-ಅಪ್ಪನ ಸಂಭ್ರಮವಂತೂ ಹೇಳತೀರದು. ಅರೇಂಜ್​ ಮ್ಯಾರೇಜ್​ ಆಗಿದ್ದರಿಂದ ಎಲ್ಲವೂ ಸಂಪ್ರದಾಯಬದ್ಧವಾಗಿ ನಡೆಯುತ್ತಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅದು ಕೂಡ ಬೇರೆಲ್ಲ ಮದುವೆಯಲ್ಲಿ ಒಂದಾಗಿಬಿಡುವ ಸಾಧ್ಯತೆಯಿತ್ತು. ಆದರೆ, ಹಾಗಾಗಲಿಲ್ಲ…

ಸಂಪ್ರದಾಯಬದ್ಧವಾಗಿ ಕೊಲ್ಕತಾದಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಪುರುಷ ಪುರೋಹಿತರ ಬದಲಾಗಿ ಮಹಿಳಾ ಪುರೋಹಿತರು ಮಂತ್ರ ಹೇಳುತ್ತಿದ್ದರು. ವಧುವಿನ ತಂದೆ ಪ್ರಗತಿಪರನಾಗಿದ್ದು, ತನ್ನ ಮಗಳ ಮದುವೆಯಲ್ಲಿ ಹೆಣ್ಣುಮಕ್ಕಳಿಗೂ ಮಂತ್ರ ಹೇಳಲು ಅವಕಾಶ ನೀಡಬೇಕೆಂದು ಈ ವ್ಯವಸ್ಥೆ ಮಾಡಿಸಿದ್ದರು. ಅಂದಹಾಗೆ, ಆ ಮದುವೆಯಲ್ಲಿ ಮಹಿಳಾ ಪುರೋಹಿತರು ಮಾತ್ರ ವಿಶೇಷವಾಗಿರಲಿಲ್ಲ. ಸಂಪ್ರದಾಯದಂತೆ ಮದುವೆ ನಡೆಯುವಾಗ ‘ಕನ್ಯಾದಾನ’ ಮಾಡುವ ಘಟ್ಟ ಬಂದಿತು. ಆದರೆ, ವಧುವಿನ ಅಪ್ಪ ಅದಕ್ಕೆ ಸುತಾರಾಂ ಒಪ್ಪಲೇ ಇಲ್ಲ!

ಪ್ರತಿಯೊಬ್ಬ ಅಪ್ಪನಿಗೂ ತನ್ನ ಮಗಳ ಮದುವೆಯ ಬಗ್ಗೆ ಕನಸಿರುತ್ತದೆ. ತಾನು ಪ್ರೀತಿಯಿಂದ ಬೆಳೆಸಿದ ಮಗಳ ಮದುವೆಯನ್ನು ಹಾಗೆ ಮಾಡಬೇಕು, ಹೀಗೆ ಮಾಡಬೇಕೆಂದು ಆತ ಬಯಸುವುದು ಸಹಜ. ಆದರೆ, ಕೊಲ್ಕತಾದಲ್ಲಿ ಮದುವೆಯಾಗುತ್ತಿದ್ದ ವಧುವಿನ ತಂದೆ ತನ್ನ ಪ್ರಗತಿಪರ ಚಿಂತನೆಯನ್ನು ಮದುವೆಯಲ್ಲೂ ತರಲು ಹೋಗಿ ಈಗ ಸುದ್ದಿಯಾಗಿದ್ದಾರೆ. ‘ಮಗಳನ್ನು ಧಾರೆ ಎರೆದುಕೊಡುವ ಶಾಸ್ತ್ರಕ್ಕೆ ಕನ್ಯಾದಾನ ಎಂದು ಹೇಳುವುದು ಸರಿಯಲ್ಲ. ಈ ಶಾಸ್ತ್ರವನ್ನು ನಾನು ನೆರವೇರಿಸುವುದಿಲ್ಲ. ದಾನ ಮಾಡಲು ನನ್ನ ಮಗಳ ಆಸ್ತಿಯಲ್ಲ’ ಎಂದು ಹೇಳಿ ಕನ್ಯಾದಾನ ನೆರವೇರಿಸುವುದಿಲ್ಲ ಎಂದು ಹೇಳಿದ್ದಾರೆ.

ಕನ್ಯಾದಾನ ನೆರವೇರಿಸಲು ಒಪ್ಪದ ತಂದೆ ಮದುವೆಯ ಬಗ್ಗೆ ಭಾಷಣವೊಂದನ್ನು ಮಾಡಿದ್ದು, ನನ್ನ ಮಗಳು ಜಮೀನಲ್ಲ. ಹೀಗಾಗಿ, ಆಕೆಯನ್ನು ದಾನ ಮಾಡಲು ನನಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆ ಮದುವೆಗೆ ಹೋಗಿದ್ದ ಅತಿಥಿಯೊಬ್ಬರು ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದು, ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಆ ಅತಿಥಿ ಈ ಬಗ್ಗೆ ಟ್ವೀಟ್​ ಕೂಡ ಮಾಡಿದ್ದು, ನಾನು ಹೋಗಿದ್ದ ಮದುವೆಯಲ್ಲಿ ಮಹಿಳಾ ಪುರೋಹಿತರು ಮಂತ್ರ ಪಠಿಸುತ್ತಿದ್ದರು. ಅಲ್ಲದೆ, ವಧುವನ್ನು ಇಂಥವರ ಮಗಳು ಎಂದು ಕರೆಯುವಾಗ ಅಮ್ಮನ ಹೆಸರನ್ನು ಮೊದಲು ಹೇಳಿ ನಂತರ ಅಪ್ಪನ ಹೆಸರು ಹೇಳುತ್ತಿದ್ದರು. ಹಾಗೇ, ಕನ್ಯಾದಾನ ಮಾಡಲು ಆಕೆ ಆಸ್ತಿಯಲ್ಲ ಎಂದು ಹೇಳಿದರು. ಅವರ ವರ್ತನೆ ನನ್ನನ್ನು ಇಂಪ್ರೆಸ್​ ಮಾಡಿದೆ ಎಂದು ಟ್ವೀಟ್​ ಮಾಡಿದ್ದಾರೆ. ಈ ಟ್ವೀಟ್​ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

Comments are closed.