ರಾಷ್ಟ್ರೀಯ

ರಾಮ ಮಂದಿರ ವಿವಾದ: ದಿನ ಚೆನ್ನೈನಲ್ಲಿ ನಾಲ್ಕು ದಿನ ಸಂಘ ಪರಿವಾರದ ಚಿಂತನ ಮಂಥನ ಸಭೆ

Pinterest LinkedIn Tumblr


ಚೆನ್ನೈ: ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಷಯದಲ್ಲಿ ಸಮಚಿತ್ತದ ನಡೆ ಪ್ರದರ್ಶಿಸುತ್ತಿರುವ ಆರ್‌ಎಸ್‌ಎಸ್‌, ಬಿಜೆಪಿ ಮತ್ತು ವಿಎಚ್‌ಪಿ ಒಳಗೊಂಡು ತನ್ನ ಪರಿವಾರದ 30 ಸಂಘಟನೆಗಳ ಜತೆ ಚೆನ್ನೈನಲ್ಲಿ ನಾಲ್ಕು ದಿನಗಳ ಚಿಂತನ ಮಂಥನ ಸಭೆ ನಡೆಸಲು ಮುಂದಾಗಿದೆ.

ಭಾನುವಾರದಿಂದ ಚಿಂತನಗೋಷ್ಠಿ ಆರಂಭಗೊಳ್ಳಲಿದೆ. ರಾಷ್ಟ್ರೀಯತೆಯ ಗುರಿ ಸಾಧನೆ ದಿಸೆಯಲ್ಲಿ ಎಲ್ಲರಿಗೂ ಅವರದ್ದೇ ಆದ ವೈಯಕ್ತಿಕ ಜವಾಬ್ದಾರಿಗಳಿವೆ. ಇವುಗಳನ್ನು ನಿಭಾಹಿಸುವ ಹಾದಿಯಲ್ಲಿ ಮುಖ್ಯ ಎನಿಸುವ ಸಾಮರ್ಥ್ಯ‌, ದೌರ್ಬಲ್ಯ, ಅವಕಾಶ, ಆಪತ್ತಿನಂತ ಅಂಶಗಳ ಕುರಿತು ವಿಶ್ಲೇಷಿಸಲಾಗುವುದು. ಇದು ಸಂಘಟನಾತ್ಮಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಲಾಗುತ್ತಿರುವ ಸಭೆ ಎಂದು ಆರ್‌ಎಸ್‌ಎಸ್‌ ತಿಳಿಸಿದೆ.

ಸಂಘಟನೆ ದೃಷ್ಟಿಯಿಂದ ಇದೊಂದು ನಿಯಮಿತ ವ್ಯಾಯಾಮ ಎಂದೇ ಆರ್‌ಎಸ್‌ಎಸ್‌ ಹೇಳಿದ್ದರೂ ಅದರ ಹಿಂದಿನ ಗಹನ ಸಂಗತಿ ಅಯೋಧ್ಯೆ ಆಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಅಯೋಧ್ಯೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಿದ ಮಾತುಗಳಿಗೆ ಪ್ರತಿಯಾಗಿ ವಿಎಚ್‌ಪಿ ನೀಡಿದ ಖಾರವಾದ ಹೇಳಿಕೆ ಎಂತಹ ಸಂಗತಿಗಳು ಈ ಸಭೆಯಲ್ಲಿ ಪ್ರಸ್ತಾಪಗೊಳ್ಳುವ ಸಾಧ್ಯತೆ ಇದೆ.

ರಾಮ ಮಂದಿರ ವಿಷಯದಲ್ಲಿ ತರಾತುರಿಯಲ್ಲಿ ಸುಗ್ರೀವಾಜ್ಞೆ ಜಾರಿಗೊಳಸಲಾಗದು. ಅದಕ್ಕೆ ಕೋರ್ಟ್‌ ತೀರ್ಪಿನವರೆಗೆ ಕಾಯಬೇಕಾಗುತ್ತದೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರಧಾನಿ ಸ್ಪಷ್ಟನೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ವಿಎಚ್‌ಪಿ, ”ಮಂದಿರಕ್ಕಾಗಿ ಹಿಂದುಗಳು ಅನಂತಕಾಲ ಕಾಯಲು ಸಾಧ್ಯವಿಲ್ಲ,” ಎಂದಿತ್ತು. ಇಂತಹ ಸಂದರ್ಭಗಳಲ್ಲಿ ಕಾಯ್ದುಕೊಳ್ಳಬೇಕಾದ ತಾಳ್ಮೆ ಕುರಿತು ಪರಿವಾರದ ಗೋಷ್ಠಿಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

50 ಹಿರಿಯ ಕಾರ್ಯಕಾರಿಣಿ ಸದಸ್ಯರು ಪಾಲ್ಗೊಳ್ಳುವ ಈ ಸಭೆಯಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು, ಆಯಾ ಸಂಘಟನೆಗಳು ನಿರ್ವಹಿಸಬೇಕಾದ ಜವಾಬ್ದಾರಿಗಳ ಕುರಿತು ವಿವರಿಸಲಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿನ ಬಿಜೆಪಿ ಸೋಲಿನ ಕುರಿತೂ ಸಭೆಯಲ್ಲಿ ಪರಾಮರ್ಶೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Comments are closed.