ರಾಷ್ಟ್ರೀಯ

ಶಬರಿಮಲೆ ವಿವಾದ: ರಾಜಕೀಯ ಹಿಂಸಾಚಾರ, ಕಣ್ಣೂರು ಉದ್ವಿಗ್ನ

Pinterest LinkedIn Tumblr


ಕಣ್ಣೂರು: ಶಬರಿಮಲೆ ವಿವಾದದ ವಿಚಾರದಲ್ಲಿ ಬಿಜೆಪಿ-ಆರೆಸ್ಸೆಸ್‌ ಮತ್ತು ಆಡಳಿತಾರೂಢ ಸಿಪಿಎಂ ನಡುವಣ ಘರ್ಷಣೆಗಳು ಕೇರಳಾದ್ಯಂತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಕಣ್ಣೂರು ಜಿಲ್ಲೆಯಲ್ಲಿ ಶನಿವಾರ ಹಲವು ಎದುರಾಳಿ ನಾಯಕರ ಮನೆಗಳು, ಅಂಗಡಿಗಳ ಮೇಲೆ ದಾಳಿಗಳು ನಡೆದಿವೆ.

ಕಣ್ಣೂರು ಮಾತ್ರವಲ್ಲ, ನೆರೆಯ ಕೋಯಿಕ್ಕೋಡ್ ಜಿಲ್ಲೆಯ ಪೆರಂಬ್ರ, ಮಲಪ್ಪುರಂ ಹಾಗೂ ಪತ್ತನಂತಿಟ್ಟ ಜಿಲ್ಲೆಯ ಅಡೂರ್‌ನಲ್ಲಿ ಶುಕ್ರವಾರ ತಡರಾತ್ರಿ ಹಾಗೂ ಶನಿವಾರ ಬೆಳಗಿನ ಜಾವದ ವೇಳೆ ಹಲವಾರು ಹಿಂಸಾತ್ಮಕ ದಾಳಿಗಳು ನಡೆದ ವರದಿಯಾಗಿದೆ.

ಸಿಪಿಎಂ ಶಾಸಕ ಎ.ಎನ್‌. ಶಂಸೀರ್‌ ನಿವಾಸ, ಸಿಪಿಎಂ ಕಣ್ಣೂರು ಜಿಲ್ಲಾ ಮಾಜಿ ಕಾರ್ಯದರ್ಶಿ ಪಿ. ಶಶಿ ಹಾಗೂ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ವಿ. ಮುರಳೀಧರನ್ ಅವರ ನಿವಾಸಗಳಿಗೆ ಬಾಂಬ್ ಎಸೆದ ಕೃತ್ಯಗಳು ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಗಳಲ್ಲಿ ಯಾರಿಗೂ ಗಾಯಗಳಾಗಿಲ್ಲ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆರೆಸ್ಸೆಸ್‌ ವಿರುದ್ಧ ಕಿಡಿಕಾರಿದ್ದಾರೆ. ಸಂಘಪರಿವಾರ ಜನರಲ್ಲಿ ಭೀತಿ ಹುಟ್ಟಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಈ ನಡುವೆ ರಾಜ್ಯಪಾಲ ಪಿ. ಸದಾಶಿವಂ ಅವರು ಕೇರಳದ ಕಾನೂನು ಸುವ್ಯವಸ್ಥೆ ಕುರಿತು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಸ್ವತಃ ರಾಜ್ಯಪಾಲರೇ ಟ್ವೀಟ್ ಮಾಡಿದ್ದಾರೆ.

Briefed Hon’ble Union Home Minister @HMOIndia Shri. Rajnath Singh about the law and order situation in Kerala in the last two days #kerala

— Kerala Governor (@KeralaGovernor) 1546700764000

ಪ್ರತಿಪಕ್ಷ ಕಾಂಗ್ರೆಸ್‌ ಕೂಡ ಎಡರಂಗ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಆರೆಸ್ಸೆಸ್‌ ಪ್ರತಿಭಟನೆಗಳನ್ನು ತಡೆಯುವಲ್ಲಿ ಎಡರಂಗ ಸರಕಾರ ವಿಫಲವಾಗಿದ್ದೇಕೆ ಎಂದು ಪ್ರಶ್ನಿಸಿದೆ.

ಈ ನಡುವೆ, ಪತ್ತನಂತಿಟ್ಟ ಜಿಲ್ಲೆಯ ಅಡೂರ್‌ನಲ್ಲಿ ಕಂದಾಯ ವಿಭಾಗಾಧಿಕಾರಿ ಕರೆದ ಸರ್ವಪಕ್ಷ ಶಾಂತಿಸಭೆಯನ್ನು ಬಿಜೆಪಿ ಬಹಿಷ್ಕರಿಸಿದೆ.

ಶಬರಿಮಲೆ ಕರ್ಮ ಸಮಿತಿಯ ಸದಸ್ಯ ಚಂದ್ರನ್ ಉಣ್ಣಿತಾನ್ ಸಾವಿಗೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಬಿಜೆಪಿ ದೂರಿದೆ.

‘ಆರೆಸ್ಸೆಸ್‌ ಹಿಂಸಾಚಾರಗಳನ್ನು ರಾಜ್ಯ ಸರಕಾರ ಸರ್ವಶಕ್ತಿಯಿಂದ ಹತ್ತಿಕ್ಕಲಿದೆ. ರಾಜ್ಯದ ಶಾಂತಿ ಮತ್ತು ಸಹನೆಯನ್ನು ಅವರು ಹಾಳುಗೆಡಹುತ್ತಿದ್ದಾರೆ. ಜನರ ಮನಸ್ಸಲ್ಲಿ ಭೀತಿ ಬಿತ್ತುವುದೇ ಆರೆಸ್ಸೆಸ್ ಅಜೆಂಡಾ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಚ್ಚರಿಸಿದ್ದಾರೆ.

ಶಬರಿಮಲೆ ತಂತ್ರಿಯನ್ನು ‘ಬ್ರಾಹ್ಮಣ ರಾಕ್ಷಸ’ ಎಂದ ಸಚಿವ ಜಿ. ಸುಧಾಕರನ್:
ಈ ನಡುವೆ ಶಬರಿಮಲೆ ದೇಗುಲದ ಪ್ರಧಾನ ತಂತ್ರಿಗಳನ್ನು ‘ಬ್ರಾಹ್ಮಣ ರಾಕ್ಷಸ’ ಎಂದು ಬಣ್ಣಿಸುವ ಮೂಲಕ ಸಿಪಿಎಂ ಮುಖಂಡ ಹಾಗೂ ಸಚಿವ ಜಿ. ಸುಧಾಕರನ್ ಹೊಸ ವಿವಾದ ಸೃಷ್ಟಿಸಿದ್ದಾರೆ.

ಮುಟ್ಟಾಗುವ ವಯಸ್ಸಿನ ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಿದ ಹಿನ್ನೆಲೆಯಲ್ಲಿ ದೇವಾಲಯದ ಬಾಗಿಲು ಮುಚ್ಚಿ ಶುದ್ಧೀಕರಣ ಪ್ರಕ್ರಿಯೆ ನೆರವೇರಿಸಿದ ಹಿನ್ನೆಲೆಯಲ್ಲಿ ತಂತ್ರಿಗಳನ್ನು ‘ಬ್ರಾಹ್ಮಣ ರಾಕ್ಷಸ’ ಎಂದು ಸಿಪಿಎಂ ನಾಯಕ ಬಣ್ಣಿಸಿದ್ದಾರೆ.

ಕನಕದುರ್ಗಾ (44) ಮತ್ತು ಬಿಂದು (42) ಎಂಬ ಇಬ್ಬರು ಮಹಿಳೆಯರು ಬುಧವಾರ ನಸುಕಿನ ವೇಳೆ ಶಬರಿಮಲೆ ದೇಗುಲ ಪ್ರವೇಶಿಸಿ ಶತಮಾನಗಳಿಂದ ಆಚರಿಸುತ್ತಾ ಬಂದಿರುವ ಸಂಪ್ರದಾಯವನ್ನು ಮುರಿದಿದ್ದರು.

ಈ ಘಟನೆ ಹಿನ್ನೆಲೆಯಲ್ಲಿ ತಂತ್ರಿಗಳಾದ ಕಂಡರಾರು ರಾಜೀವರ್ ದೇಗುಲದ ಗರ್ಭಗುಡಿಯನ್ನು ಮುಚ್ಚಿ ಶುದ್ಧೀಕರಣ ಕ್ರಿಯೆಗಳನ್ನು ನೆರವೇರಿಸಿದ್ದರು.

ಎಲ್‌ಡಿಎಫ್‌ ಸರಕಾರವೇ ಹೊಣೆ:
ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಹಿಂಸಾಚಾರಗಳಿಗೆ ಪೂರ್ವಗ್ರಹಪೀಡಿತ ಹಿಂದೂ ವಿರೋಧಿ ನಡೆ ಅನುಸರಿಸುತ್ತಿರುವ ಎಲ್‌ಡಿಎಫ್ ಸರಕಾರವೇ ಹೊಣೆ ಎಂದು ದಿಲ್ಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ವಕ್ತಾರ ಜಿ.ಎಲ್. ನರಸಿಂಹ ರಾವ್ ಆರೋಪಿಸಿದ್ದಾರೆ. ಎಲ್‌ಡಿಎಫ್ ಸರಕಾರ ಸಂವೇದನಾರಹಿತ ಕ್ರಮಗಳಿಂದ ಅಮಾಯಕ ಅಯ್ಯಪ್ಪ ಭಕ್ತರು ಹಿಂಸಾಚಾರಕ್ಕೆ ಗುರಿಯಾಗಿದ್ದಾರೆ, ಅಲ್ಲದೆ ಪ್ರಾಣವನ್ನೂ ಕಳೆದುಕೊಂಡರು ಎಂದು ಅವರು ಹೇಳಿದ್ದಾರೆ.

ನಿಷೇಧಾಜ್ಞೆ ವಿಸ್ತರಣೆ:
ಜನವರಿ 14ರಂದು ನಡೆಯುವ ಮಕರವಿಳಕ್ಕು ಉತ್ಸವ ಮುಗಿಯುವ ವರೆಗೂ ನಿಷೇಧಾಜ್ಞೆ ಮುಂದುವರಿಸಿ ಪತ್ತನಂತಿಟ್ಟ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಇದುವರೆಗೆ 1,286 ಹಿಂಸಾಚಾರ ಪ್ರಕರಣಗಳು ದಾಖಲಾಗಿದ್ದು, 3,282 ಮಂದಿಯನ್ನು ಬಂಧಿಸಲಾಗಿದೆ. 487 ಮಂದಿಯನ್ನು ರಿಮಾಂಡ್‌ಗೆ ಕಳುಹಿಸಲಾಗಿದ್ದರೆ, 2795 ಮಂದಿಗೆ ಜಾಮೀನು ನೀಡಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಲೋಕನಾಥ್ ಬೆಹರಾ ತಿಳಿಸಿದ್ದಾರೆ.

Comments are closed.