ಕರ್ನಾಟಕ

ಸರಕಾರಿ ಶಾಲೆಗಳಲ್ಲಿ ಚಲನಚಿತ್ರ ಪ್ರದರ್ಶನ ನಿಷಿದ್ಧ

Pinterest LinkedIn Tumblr


ಬೆಂಗಳೂರು : ಸರಕಾರಿ ಶಾಲೆಗಳಲ್ಲಿ ಯಾವುದೇ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಸರಕಾರಿ ಶಾಲೆಗಳಲ್ಲಿ ನಾನಾ ಚಿತ್ರ ನಿರ್ಮಾಣ ಸಂಸ್ಥೆಯವರು ನಿರ್ಮಿಸಿರುವ ಚಲನಚಿತ್ರಗಳನ್ನು ರಿಯಾಯಿತಿ ದರದಲ್ಲಿ ಪ್ರದರ್ಶಿಸಲು ಅನುಮತಿ ಕೋರಿ ಪ್ರಸ್ತಾವನೆಗಳು ಸಲ್ಲಿಕೆಯಾಗುತ್ತಿವೆ. ಅಲ್ಲದೆ, ನಕಲಿ ಅನುಮತಿ ಪತ್ರಗಳನ್ನು ಪಡೆದು ಶಾಲಾ ಮುಖ್ಯಸ್ಥರಿಗೆ ತೋರಿಸಿ ಒತ್ತಾಯಪೂರ್ವಕವಾಗಿ ಮಕ್ಕಳಿಗೆ ಚಿತ್ರ ತೋರಿಸಲು ಮುಂದಾಗುತ್ತಿರುವುದನ್ನು ಇಲಾಖೆ ಗಮನಿಸಿದೆ.

ಉಪ ನಿರ್ದೇಶಕರು ತಮ್ಮ ಹಂತದಲ್ಲಿ ಸ್ವೀಕೃತಗೊಂಡ ಪ್ರಸ್ತಾವನೆಗಳನ್ನು ಪರಿಗಣಿಸಿ ತಾವೇ ಅನುಮತಿ ನೀಡುತ್ತಿರುವುದು ಕೂಡ ಇಲಾಖೆಯ ಗಮನಕ್ಕೆ ಬಂದಿದೆ. ಅಲ್ಲದೆ, ಉಪ ನಿರ್ದೇಶಕರಿಂದ ಪಡೆದ ಅನುಮತಿ ಪತ್ರಗಳಧಿ ಮೇರೆಗೆ ಚಿತ್ರ ನಿರ್ಮಾಣ ಸಂಸ್ಥೆಯವರು ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಕೋರಿ ನಿರ್ದೇಶಕರ ಕಚೇರಿಗೆ ಪ್ರಸ್ತಾವನೆ ಸಲ್ಲಿಸುತ್ತಿದ್ದಾರೆ. ಇದು ಇಲಾಖೆಗೆ ಮುಜುಗರ ಉಂಟು ಮಾಡುವ ಪ್ರಸಂಗ ಎಂದು ಇಲಾಖೆಯ ನಿರ್ದೇಶಕ (ಪ್ರಾಥಮಿಕ ಶಿಕ್ಷಣ) ಜಯಕುಮಾರ್‌ ಹೊರಡಿಸಿರುವ ಸುತ್ತೋಲೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಹುಪಾಲು ಮಕ್ಕಳು ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಈ ಹಿನ್ನೆಲೆಯಲ್ಲಿ ಸರಕಾರ ಉಚಿತ ಪ್ರೋತಾಹದಾಯಕ ಯೋಜನೆಗಳನ್ನು ಜಾರಿಗೊಳಿಸಿದೆ. ಆದಾಗ್ಯೂ ರಿಯಾಯಿತಿ ದರ ನಿಗದಿಪಡಿಸಿ ಒತ್ತಾಯಪೂರ್ವಕವಾಗಿ ಶುಲ್ಕ ವಸೂಲಿ ಮಾಡಿ ಚಲನಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡುವುದು ಸೂಕ್ತವಲ್ಲ. ಮಕ್ಕಳ ಸುರಕ್ಷತೆ/ ಶೈಕ್ಷಣಿಕ ದೃಷ್ಟಿಯಿಂದ ಯಾವುದೇ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

Comments are closed.