ರಾಷ್ಟ್ರೀಯ

‘ವಂಶವಾಹಿ ಮಾನಸಿಕ ಸಮಸ್ಯೆ’ ಎಂದು ವ್ಯಾಖ್ಯಾನಿಸಿ ಸಲಿಂಗಿಗಳಿಗೆ ವೈದ್ಯನಿಂದ ‘ಶಾಕ್‌ ಟ್ರೀಟ್‌ಮೆಂಟ್‌’!

Pinterest LinkedIn Tumblr


ಹೊಸದಿಲ್ಲಿ: ಸಲಿಂಗಕಾಮವನ್ನು ‘ವಂಶವಾಹಿ ಮಾನಸಿಕ ಸಮಸ್ಯೆ’ ಎಂದು ವ್ಯಾಖ್ಯಾನಿಸಿ, ಸಲಿಂಗಿಗಳಿಗೆ ವೈದ್ಯರೊಬ್ಬರು ವಿದ್ಯುತ್‌ ಶಾಕ್‌ ಟ್ರೀಟ್‌ಮೆಂಟ್‌ ನೀಡುತ್ತಿದ್ದ ಪ್ರಕರಣ ದಿಲ್ಲಿಯಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿನ ಡಾ. ಕೆ.ಪಿ. ಗುಪ್ತಾ ಅವರನ್ನು ವೈದ್ಯಕೀಯ ನಿಯಮಾವಳಿಗಳ ಉಲ್ಲಂಘನೆ ಆರೋಪದ ಮೇಲೆ ಮೆಡಿಕಲ್‌ ಕೌನ್ಸಿಲ್‌ನಿಂದಲೂ ಅಮಾನತುಗೊಳಿಸಲಾಗಿದೆ. ಈ ಸಂಬಂಧ ಮೆಡಿಕಲ್‌ ಕೌನ್ಸಿಲ್‌ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ದಿಲ್ಲಿ ಕೋರ್ಟ್‌ ವೈದ್ಯ ಗುಪ್ತಾ ಅವರಿಗೆ ಸಮನ್ಸ್‌ ಜಾರಿ ಮಾಡಿದೆ. ಅವರು ಮೆಡಿಕಲ್‌ ಕೌನ್ಸಿಲ್‌ನಿಂದ ಅಮಾನತುಗೊಂಡ ಬಳಿಕವೂ ವೃತ್ತಿ ಮುಂದುವರಿಸುವ ಮೂಲಕ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತೀಯ ವೈದ್ಯಕೀಯ ಕೌನ್ಸಿಲ್‌ ಕಾಯಿದೆ ಉಲ್ಲಂಘನೆಗಾಗಿ ಆರೋಪಿ ವೈದ್ಯನಿಗೆ ಗರಿಷ್ಠ ಒಂದು ವರ್ಷ ಜೈಲುಶಿಕ್ಷೆಯಾಗುವ ಸಾಧ್ಯತೆಯಿದೆ.

ಡಾ. ಗುಪ್ತಾ ತಮ್ಮನ್ನು ವೈದ್ಯ ಎಂದು ಹೇಳಿಕೊಂಡು 2016ರಿಂದಲೂ ಇಂತಹ ವಿಚಿತ್ರ ಚಿಕಿತ್ಸೆ ನೀಡುತ್ತಿದ್ದಾರೆ. ಅವರನ್ನು ಅಮಾನತುಗೊಳಿಸಿದ ಬಳಿಕವೂ ಅವರು ನಿಯಮಬಾಹಿರ ಚಿಕಿತ್ಸೆ ಮುಂದುವರಿಸಿದ್ದಾರೆ ಎಂದು ಮೆಡಿಕಲ್‌ ಕೌನ್ಸಿಲ್‌ ಕೋರ್ಟ್‌ಗೆ ನೀಡಿದ ದೂರಿನಲ್ಲಿ ತಿಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್‌ ಮ್ಯಾಜಿಸ್ಪ್ರೇಟ್‌ ಅಭಿಲಾಷ್‌ ಮಲ್ಹೋತ್ರಾ ಅವರು, ‘ಪರಿವರ್ತನೆ ಚಿಕಿತ್ಸೆ’ ಹೆಸರಲ್ಲಿ ಗುಪ್ತಾ ನೀಡುತ್ತಿರುವ ಚಿಕಿತ್ಸೆಯನ್ನು ಶಾಸನಬದ್ಧವಾಗಿ ಅಥವಾ ವೈದ್ಯಶಾಸ್ತ್ರದಲ್ಲಿ ಅನುಮೋದಿಸಲಾಗಿಲ್ಲ ಎಂದು ಹೇಳಿದ್ದಾರೆ.

ಗುಪ್ತಾ ಸೇರಿದಂತೆ ದಿಲ್ಲಿಯ ಕೆಲವು ವೈದ್ಯರು ಸಲಿಂಗಕಾಮವನ್ನು ಶಮನ ಮಾಡಲು ‘ಪರಿವರ್ತನೆ ಚಿಕಿತ್ಸೆ’ ಹೆಸರಿನಲ್ಲಿ ವಿದ್ಯುತ್‌ ಶಾಕ್‌ ಮತ್ತು ಹಾರ್ಮೊನ್‌ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಅಂಜಲಿ ಗೋಪಾಲನ್‌ ಎಂಬುವವರು ಮೆಡಿಕಲ್‌ ಕೌನ್ಸಿಲ್‌ಗೆ ಮಾಹಿತಿ ನೀಡಿದ್ದರು.

Comments are closed.