ಅಂತರಾಷ್ಟ್ರೀಯ

ಬಿಕ್ಕಟ್ಟಿನ ಕಿಡಿ ಹೊತ್ತಿಸಿದ ಕಚ್ಚಾತೈಲದ ಸಮಗ್ರ ವರದಿ

Pinterest LinkedIn Tumblr


ಕಚ್ಚಾತೈಲದ ಉತ್ಪಾದನೆಯನ್ನು ದಿನಕ್ಕೆ 12 ಲಕ್ಷ ಬ್ಯಾರೆಲ್​ಗಳಷ್ಟು ಕಡಿತಗೊಳಿಸಲು ಒಪೆಕ್ ರಾಷ್ಟ್ರಗಳು ನಿರ್ಧರಿಸಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ಮತ್ತೊಂದೆಡೆ, ಅಮೆರಿಕ ಹೆಚ್ಚಿನ ಪ್ರಮಾಣದಲ್ಲಿ ತೈಲ ರಫ್ತಿಗೆ ಒಲವು ತೋರಿದ್ದು, ಈ ಎಲ್ಲ ಬೆಳವಣಿಗೆಗಳು ಮತ್ತು ಒಟ್ಟಾರೆಯಾಗಿ ಭಾರತದ ಮೇಲಾಗುವ ಪರಿಣಾಮಗಳ ಕುರಿತ ಅವಲೋಕನ ಇಲ್ಲಿದೆ.

ಭಾರತ ಮತ್ತು ಇರಾನ್ ನಡುವಿನ ಕಚ್ಚಾತೈಲ ವ್ಯವಹಾರವನ್ನು ರೂಪಾಯಿ ಮೂಲಕವೇ ನಡೆಸುವ ಒಪ್ಪಂದಕ್ಕೆ ಉಭಯ ದೇಶಗಳು ಇತ್ತೀಚೆಗಷ್ಟೇ ಸಹಿಹಾಕಿದ್ದು ಗೊತ್ತಿರುವಂಥದ್ದೇ. ಇರಾನ್​ನಿಂದ ಭಾರತ ಪ್ರತಿದಿನ 3 ಲಕ್ಷ ಬ್ಯಾರೆಲ್​ನಷ್ಟು ಕಚ್ಚಾತೈಲ ಆಮದುಮಾಡಿಕೊಳ್ಳುತ್ತಿದ್ದು, ಇದರ ಮೊತ್ತ ಯುಕೋ ಬ್ಯಾಂಕ್ ಮೂಲಕ ಪಾವತಿಯಾಗಲಿದೆ. ಅಮೆರಿಕ ಹೇರಿರುವ ನಿರ್ಬಂಧದ ಹಿನ್ನೆಲೆಯಲ್ಲಿ ಬಹುತೇಕ ಪಾಶ್ಚಾತ್ಯ ಬ್ಯಾಂಕ್ ಸೇವೆಗಳು ಇರಾನ್​ನಲ್ಲಿ ರದ್ದಾಗಿರುವ ಕಾರಣ ಈ ಒಡಂಬಡಿಕೆಗೆ ಸಹಿಬಿದ್ದಿದೆ. ನಿರ್ಬಂಧದ ಬಳಿಕ 3 ತಿಂಗಳವರೆಗೆ ಇರಾನ್ ಜತೆಗಿನ ಕೆಲ ವ್ಯವಹಾರಗಳನ್ನು ಭಾರತ ಮುಂದುವರಿಸಬಹುದಾಗಿದೆ.

ಆದರೆ, ತೈಲೋತ್ಪಾದನೆಯನ್ನು ಕಡಿತಗೊಳಿಸಲು ‘ಒಪೆಕ್’ ಒಕ್ಕೂಟದ ರಾಷ್ಟ್ರಗಳು ಬಹುತೇಕ ನಿರ್ಧರಿಸಿದ್ದು, ಇದು ಕಟ್ಟುನಿಟ್ಟಾಗಿ ಜಾರಿಯಾದಲ್ಲಿ ತೈಲೋತ್ಪನ್ನ-ಅವಲಂಬಿತ ರಾಷ್ಟ್ರಗಳಿಗೆ, ಅದರಲ್ಲೂ ನಿರ್ದಿಷ್ಟವಾಗಿ ಭಾರತದ ಮೇಲಾಗುವ ಪರಿಣಾಮಗಳೇನು ಎಂಬುದರ ಕಡೆಗೊಂದು ಕಿರುನೋಟ ಹರಿಸುವುದು ಅಗತ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ‘ಒಪೆಕ್’ ಸ್ವರೂಪದ ಕುರಿತಾದ ಅರಿವೂ ಅಗತ್ಯ.

ಏನಿದು ಒಪೆಕ್?: ಪೆಟ್ರೋಲಿಯಂ ರಫ್ತುಮಾಡುವ ರಾಷ್ಟ್ರಗಳ ಸಂಘಟನೆ ‘ಒಪೆಕ್’ (Organization of Petroleum Exporting Countries- OPEC). ಇರಾನ್, ಇರಾಕ್, ಕುವೈತ್, ಸೌದಿ ಅರೇಬಿಯಾ ಮತ್ತು ವೆನೆಜುವೆಲಾದಂಥ ಐದು ಆರಂಭಿಕ ಸದಸ್ಯರಾಷ್ಟ್ರಗಳಿಂದ ಸ್ಥಾಪಿಸಲ್ಪಟ್ಟ ಈ ಒಕ್ಕೂಟದ ತೆಕ್ಕೆಯಲ್ಲಿ ಪ್ರಸ್ತುತ 15 ರಾಷ್ಟ್ರಗಳಿವೆ (ಮಿಕ್ಕ 10 ರಾಷ್ಟ್ರಗಳೆಂದರೆ, ಅಲ್ಜೀರಿಯಾ, ಅಂಗೋಲ, ಈಕ್ವೆಡಾರ್, ಭೂಮಧ್ಯರೇಖೆಯ ಗಿನಿ ಗಣರಾಜ್ಯ, ಗಬೊನ್, ಲಿಬಿಯಾ, ನೈಜೀರಿಯಾ, ಕತಾರ್, ಕಾಂಗೊ ಗಣರಾಜ್ಯ ಮತ್ತು ಸಂಯುಕ್ತ ಅರಬ್ ಗಣರಾಜ್ಯ; ಈ ಪೈಕಿ ಕತಾರ್ ಒಕ್ಕೂಟದಿಂದ ಹೊರಬರಲು ನಿರ್ಧರಿಸಿದೆ). ಆಸ್ಟ್ರಿಯಾದ ವಿಯೆನ್ನಾದಲ್ಲಿ ಇದರ ಕೇಂದ್ರಕಚೇರಿಯಿದೆ. ‘ಬಳಕೆದಾರ ರಾಷ್ಟ್ರಗಳಿಗೆ ಪರಿಣಾಮಕಾರಿಯಾಗಿ, ಮಿತವ್ಯಯಕಾರಿಯಾಗಿ ಮತ್ತು ನಿಯತವಾಗಿ ಪೆಟ್ರೋಲಿಯಂ ಸರಬರಾಜು ಮಾಡುವ, ಪೆಟ್ರೋಲಿಯಂ ಉತ್ಪಾದಕರಿಗೆ ಏಕಪ್ರಕಾರದಲ್ಲಿ ಆದಾಯ ಹರಿದುಬರುವಂತೆ ಮಾಡುವ ಹಾಗೂ ಪೆಟ್ರೋಲಿಯಂ ಉದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ಯಥೋಚಿತ ಪ್ರತಿಫಲ ದೊರಕಿಸಿಕೊಡುವಂತಾಗುವ ನಿಟ್ಟಿನಲ್ಲಿ, ತನ್ನ ಸದಸ್ಯರಾಷ್ಟ್ರಗಳ ಪೆಟ್ರೋಲಿಯಂ ಕಾರ್ಯನೀತಿಗಳನ್ನು ಪರಸ್ಪರ ಸುಸಂಘಟಿತವಾಗಿಸುವುದು ಮತ್ತು ಏಕರೂಪತೆಯನ್ನು ತರುವುದು’ ಈ ಒಕ್ಕೂಟದ ಧ್ಯೇಯವೆನ್ನಬಹುದು.

ಬಿಕ್ಕಟ್ಟಿನ ಸ್ವರೂಪ: ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಆಗುತ್ತಿರುವ ಕಚ್ಚಾತೈಲ ಪೂರೈಕೆಯ ಪ್ರಮಾಣ ಮಿತಿಮೀರಿರುವುದರಿಂದ ಸಹಜವಾಗಿಯೇ ದರದಲ್ಲಿ ನಿರಂತರ ಇಳಿಕೆಯಾಗುತ್ತಿದೆ ಮತ್ತು ಅಮೆರಿಕದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ತೈಲದ ಉತ್ಪಾದನೆ ಆಗುತ್ತಿದೆ. ಹೀಗಾಗಿ ಉತ್ಪಾದನೆ ಪ್ರಮಾಣ ತಗ್ಗಿಸಬೇಕಾದ ಅನಿವಾರ್ಯತೆಯಿದೆ ಎಂಬುದು ಒಪೆಕ್ ಸದಸ್ಯ ರಾಷ್ಟ್ರಗಳ ಅಭಿಮತ. ಆದರೆ ಈ ನಿರ್ಧಾರಕ್ಕೆ ಮತ್ತೊಂದು ತೈಲೋತ್ಪಾದಕ ರಾಷ್ಟ್ರ ರಷ್ಯಾ ವತಿಯಿಂದ ಪ್ರತಿಕೂಲ ಅಭಿಪ್ರಾಯ ವ್ಯಕ್ತವಾಗಿತ್ತು; ದಿನಕ್ಕೆ 12 ಲಕ್ಷ ಬ್ಯಾರಲ್​ಗಳಷ್ಟು ತೈಲೋತ್ಪಾದನೆಯನ್ನು ತಗ್ಗಿಸಬೇಕೆಂಬ ಒಪೆಕ್ ರಾಷ್ಟ್ರಗಳ ಆಶಯಕ್ಕೆ ಅತಿಹೆಚ್ಚು ತೈಲ ಉತ್ಪಾದಿಸುವ ರಾಷ್ಟ್ರವಾದ ರಷ್ಯಾ ಒಪ್ಪಿಗೆ ನೀಡಿರಲಿಲ್ಲ. ಆದರೀಗ ಹೊಸ ಬೆಳವಣಿಗೆಯೊಂದರ ಅನುಸಾರ ರಷ್ಯಾ ಈ ನಿಲುವಿಗೆ ಸಮ್ಮತಿಸಿದೆ.

ತೈಲೋತ್ಪಾದನೆಯಲ್ಲಿ ಪಾರಮ್ಯ ಮೆರೆಯುತ್ತಿರುವ ಸೌದಿ ಅರೇಬಿಯಾ, ಉತ್ಪಾದನೆ ತಗ್ಗಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರೆ, ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಇಂಧನ ದೊರಕಬೇಕು ಎಂದಾದಲ್ಲಿ ಉತ್ಪಾದನೆ ತಗ್ಗಿಸಬಾರದು ಎಂಬ ಒತ್ತಡ-ಒತ್ತಾಯ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಹೊಮ್ಮಿದೆ.

ಬೆಲೆ ಇಳಿಕೆಗೆ ಕಸರತ್ತು: ಭಾರತದಲ್ಲಿ ಇತ್ತೀಚೆಗೆ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಅನಿಶ್ಚಿತತೆ ತಲೆದೋರಿ, ಅತಿರೇಕ ಎಂಬಷ್ಟರ ಮಟ್ಟಿಗೆ ಏರಿಕೆಯಾದಾಗ, ಸಹಜವಾಗಿಯೇ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತವಾಗಿತ್ತು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯ ಗ್ರಾಹಕರ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಗಾಗಿ ಸೌದಿ ಅರೇಬಿಯಾ ಜತೆ 4 ಸಲ ಮಾತುಕತೆ ನಡೆಸಿರುವುದು ಮಾತ್ರವಲ್ಲದೆ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ (ಉದಾಹರಣೆಗೆ ಜಿ-20 ಶೃಂಗಸಭೆಯಲ್ಲಿ) ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂಬುದಿಲ್ಲಿ ಸ್ಮರಣಾರ್ಹ.

ದೂರ ಸರಿಯಲಿರುವ ಕತಾರ್: ಈ ಮಧ್ಯೆ, ‘ಒಪೆಕ್’ ಒಕ್ಕೂಟದಿಂದ ತಾನು ಹೊರನಡೆಯುವುದಾಗಿ ಸದಸ್ಯರಾಷ್ಟ್ರಗಳಲ್ಲೊಂದಾದ ಕತಾರ್ ಹೇಳಿಕೊಂಡಿದ್ದು, 2019ರ ಜನವರಿಯಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ ಎನ್ನಲಾಗಿದೆ. ಒಪೆಕ್ ಸಂಘಟನೆಯಲ್ಲಿ ತಾನು ‘ನಾಮ್​ಕೆ-ವಾಸ್ತೆ’ ರೀತಿಯಲ್ಲಿರುವುದು, ನೀತಿ-ನಿಯಮಾವಳಿಗಳನ್ನು ರೂಪಿಸುವ ನಿಟ್ಟಿನಲ್ಲಿ ತನಗೆ ಮಹತ್ವವನ್ನು ನೀಡದಿರುವುದು, ಹಾಗೂ ಮಹತ್ವದ ತೀರ್ಮಾನ ಕೈಗೊಳ್ಳುವ ಸಂದರ್ಭದಲ್ಲಿ ಸೌದಿ ಅರೇಬಿಯಾದಂಥ ಪ್ರಭಾವಿ ಹಾಗೂ ಅತಿದೊಡ್ಡ ತೈಲೋತ್ಪಾದಕ ದೇಶಕ್ಕೇ ಮಣೆಹಾಕುತ್ತಿರುವುದು ಕತಾರ್​ನ ಈ ನಿಲುವಿಗೆ ಕಾರಣ. ಇದಲ್ಲದೆ, ತೈಲೋದ್ಯಮದ ನಿರ್ವಹಣೆ ಮತ್ತು ಭವಿಷ್ಯ ರೂಪಣೆಯೆಡೆಗೆ ಇನ್ನಷ್ಟು ಒತ್ತು ನೀಡುವುದರ ಜತೆಗೆ, ದೇಶದಲ್ಲಿ ಪ್ರಕೃತಿದತ್ತವಾಗಿ ದಕ್ಕುತ್ತಿರುವ ನಿಕ್ಷೇಪಗಳನ್ನು ಪರಿಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲೆಂದು ಇಂಥ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕತಾರ್ ಇಂಧನ ಸಚಿವ ಸಾದ್ ಅಲ್ ಕಾಬಿ ಹೇಳಿಕೊಂಡಿದ್ದಾರೆ.

ಸೌದಿ ಸಮರ್ಥನೆ: ಜಾಗತಿಕ ಕಚ್ಚಾತೈಲದ ಬೇಡಿಕೆಯ ಪೈಕಿ ಮೂರನೇ ಒಂದರಷ್ಟು ಭಾಗವನ್ನು ಪೂರೈಸುವ ರಾಷ್ಟ್ರ ಸೌದಿ ಅರೇಬಿಯಾ. ಈ ದೇಶದ ಪಾಲಿಗೆ ಕಚ್ಚಾತೈಲವೇ ಅತಿದೊಡ್ಡ ಸಂಪನ್ಮೂಲ. ಉತ್ಪಾದನೆ ಹೆಚ್ಚಾದಂತೆ ಬೆಲೆ ಇಳಿಯುವುದು ಸಹಜ ಬೆಳವಣಿಗೆ. ಆದರೆ ಸೌದಿ ಪಾಲಿಗೆ ಹೀಗೆ ಬೆಲೆ ಕುಸಿಯುವುದು ಶಾಪವಾಗಿ ಪರಿಣಮಿಸುತ್ತದೆ. ಆದ್ದರಿಂದ ತೈಲೋತ್ಪಾದನೆ ಕಡಿತಗೊಳಿಸಿ, ಕೃತಕ ಅಭಾವ ಸೃಷ್ಟಿಸಿ, ಬೆಲೆಯೇರಿಸಿ ತನ್ನ ವರಮಾನವನ್ನು ಹೆಚ್ಚಿಸಿಕೊಳ್ಳುವುದು ಸೌದಿ ತಂತ್ರ. ಹೀಗಾಗೇ ತೈಲೋತ್ಪಾದನೆ ಕುಸಿತದ ನಿರ್ಧಾರಕ್ಕೆ ಅದು ನೀರೆರೆದಿದೆ ಹಾಗೂ ಮಾರುಕಟ್ಟೆಯಲ್ಲಿ ದರವನ್ನು ಸ್ಥಿರಗೊಳಿಸಲೆಂದು ಭಾರಿ ಪ್ರಮಾಣದಲ್ಲಿ ತೈಲೋತ್ಪಾದನೆಯನ್ನು ಅದು ಕಡಿತಗೊಳಿಸಲಿದೆ ಎಂಬುದು ಲಭ್ಯಮಾಹಿತಿ.

ಭಾರತದ ಮೇಲಾಗುವ ಪರಿಣಾಮಗಳು: ಅಂತಾರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲಿ ಸಣ್ಣ ಸಂಚಲನವಾದರೂ, ಅನಪೇಕ್ಷಿತ ಬೆಳವಣಿಗೆಗಳಾದರೂ ಭಾರತದ ಮಾರುಕಟ್ಟೆಯ ಮೇಲೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅನೇಕ ವ್ಯತಿರಿಕ್ತ ಪರಿಣಾಮಗಳಾಗುವುದು ಖರೆ. ತೈಲೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಂತಾಗುವ ವಾತಾವರಣ ಮತ್ತು ಅಗತ್ಯ ನಿಕ್ಷೇಪ ನಮ್ಮಲ್ಲಿ ಗಮನಾರ್ಹ ಪ್ರಮಾಣದಲ್ಲಿ ಇಲ್ಲದಿರುವುದು ಇಲ್ಲಿನ ಕಹಿವಾಸ್ತವ. ಹೀಗಾಗಿ, ತೈಲಸಂಪನ್ಮೂಲ ಉತ್ಪಾದನೆ/ಆಮದು ಚಟುವಟಿಕೆಗಳಲ್ಲಾಗುವ ಯಾವುದೇ ವ್ಯತ್ಯಯ ಅಥವಾ ಕೊರತೆಯು ಸರಕು ಸಾಗಣೆ ವಲಯದಿಂದ ಮೊದಲ್ಗೊಂಡು ಉತ್ಪಾದನಾ ವಲಯ, ಸೇವಾಕ್ಷೇತ್ರ ಸೇರಿದಂತೆ ದೇಶದ ಒಂದಿಡೀ ಆರ್ಥಿಕತೆಯ ಮೇಲೆ ಪರಿಣಾಮವಾಗುತ್ತದೆ. ಪೆಟ್ರೋಲ್/ಡೀಸೆಲ್​ನಂಥ ಇಂಧನಗಳನ್ನು ಅವಲಂಬಿಸಿದ ವಾಹನಗಳಿಗೆ ಪ್ರತಿಯಾಗಿ ವಿದ್ಯುತ್ ಚಾಲಿತ ವಾಹನಗಳ ಬಳಕೆಯು ಇನ್ನೂ ಶೈಶವಾವಸ್ಥೆಯಲ್ಲಿರುವುದು ಮತ್ತು ವಿದ್ಯುತ್ ಮರುಪೂರಣದ ವ್ಯವಸ್ಥೆಯಿನ್ನೂ ಸಮರ್ಪಕವಾಗಿ ಗರಿಗೆದರಿರುವುದು, ಪೆಟ್ರೋಲ್/ಡೀಸೆಲ್ ಮೇಲಿನ ಅತಿರೇಕದ ಅವಲಂಬನೆಗೆ ಕಾರಣವಾಗಿವೆ ಎನ್ನಲಡ್ಡಿಯಿಲ್ಲ.

ದಾಳ ಉರುಳಿಸಿದ ಅಮೆರಿಕ

ಇರಾನ್ ಜತೆಗೆ ಒಂದಲ್ಲ ಒಂದು ಕಾರಣಕ್ಕೆ ಮುನಿಸಿಕೊಳ್ಳುವುದನ್ನೇ ಪರಿಪಾಠವಾಗಿಸಿಕೊಂಡಿರುವ ಅಮೆರಿಕ, ಅದರ ಮೇಲೆ ನಿರ್ಬಂಧ ಹೇರುವ ವಿಷಯದಲ್ಲಿನ ಬಿಗಿಪಟ್ಟನ್ನು ಸಡಿಲಿಸಿಲ್ಲ. ತೈಲೋ ತ್ಪಾದನೆಯನ್ನು ತಗ್ಗಿಸಬೇಕು ಎಂಬ ‘ಒಪೆಕ್’ ಒಕ್ಕೂಟದ ಸದಸ್ಯರಾಷ್ಟ್ರಗಳ ನಿಲುವಿಗೆ ಕೆಂಡಾಮಂಡಲವಾದ ಅಮೆರಿಕ, ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಇಂಧನ ದಕ್ಕುವಂತಾಗಬೇಕು ಎಂದಾದಲ್ಲಿ ಇಂಥ ನಿಲುವಿನಿಂದ ಹಿಂದೆ ಸರಿಯಬೇಕು ಎಂಬ ತನ್ನ ಒತ್ತಡತಂತ್ರಕ್ಕೆ ಒಪೆಕ್ ರಾಷ್ಟ್ರಗಳು ಸೊಪು್ಪಹಾಕುವಂತೆ ಕಾಣದಿದ್ದಾಗ, ವಿಶಿಷ್ಟ ಕಾರ್ಯತಂತ್ರವನ್ನೇ ಮೆರೆದಿದೆ. ಇದೇ ಮೊದಲಬಾರಿಗೆ ತಾನು ವಾಡಿಕೆಯಂತೆ ಆಮದುಮಾಡಿಕೊಳ್ಳುವುದಕ್ಕಿಂತ ಹೆಚ್ಚಿನ ಪ್ರಮಾಣದ ಕಚ್ಚಾತೈಲ ಮತ್ತು ಇಂಧನವನ್ನು ಕಳೆದ ವಾರ ಅದು ರಫ್ತುಮಾಡಿದೆ. ಕಳೆದ ವಾರವೊಂದರಲ್ಲೇ ದಿನವೊಂದಕ್ಕೆ ನಿವ್ವಳ 2,11,000 ಬ್ಯಾರೆಲ್​ನಷ್ಟು ಪ್ರಮಾಣದಲ್ಲಿ ರಫ್ತುಸಾಧನೆಗೈದಿದೆ. ತೀರಾ ಇತ್ತೀಚಿನವರೆಗೂ ಅಮೆರಿಕದ ರಫ್ತಾಗುತ್ತಿದ್ದ ತೈಲೋತ್ಪನ್ನಗಳಲ್ಲಿ ಗ್ಯಾಸೋಲಿನ್ ಮತ್ತು ಡೀಸೆಲ್​ನ ಪಾರಮ್ಯವೇ ಹೆಚ್ಚಿತ್ತು; ಆದರೆ ಅಮೆರಿಕದಲ್ಲಿ ಜೇಡಿ-ಪದರಗಲ್ಲುಗಳ ಸ್ತರದ ಆವಿಷ್ಕಾರವಾಗುತ್ತಿದ್ದಂತೆ ಚಿತ್ರಣ ಸಂಪೂರ್ಣ ಬದಲಾಗಿ, ತೈಲನಿಕ್ಷೇಪದ ಕೊರೆಯುವಿಕೆ ಮತ್ತು ಹೊರಸೆಳೆಯುವಿಕೆಯಲ್ಲಿ ಕ್ರಾಂತಿಯೇ ಆಗಿಹೋಯಿತು. ಪರಿಣಾಮ, ಅಮೆರಿಕದ ಒಟ್ಟಾರೆ ತೈಲೋತ್ಪಾದನಾ ಪ್ರಮಾಣವು ದಿನವೊಂದಕ್ಕೆ 11.7 ದಶಲಕ್ಷ ಬ್ಯಾರೆಲ್​ಗಳಷ್ಟು ದಾಖಲಾರ್ಹ ಪ್ರಮಾಣ ಮುಟ್ಟುವಂತಾಯಿತು.

ಕಚ್ಚಾತೈಲ ಉತ್ಪಾದನೆ ಕಡಿತ, ಬೆಲೆ ಏರಿಕೆ ಸಾಧ್ಯತೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ತೈಲೋತ್ಪಾದನೆ ಕಡಿತಗೊಳಿಸುವ ಒಪೆಕ್ ರಾಷ್ಟ್ರಗಳ ನಿರ್ಧಾರಕ್ಕೆ ರಷ್ಯಾ ಆರಂಭದಲ್ಲಿ ತೊಡರುಗಾಲು ಹಾಕಿತ್ತು; ಆದರೀಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಈ ನಿಲುವಿಗೆ ಅಂಗೀಕಾರದ ಮುದ್ರೆ ಒತ್ತಿರುವುದರಿಂದ, ಉತ್ಪಾದನೆ ಕಡಿತದ ನಿಲುವಿಗೆ ಅಧಿಕೃತತೆ ಬಂದಂತಾಗಿದೆ. ಮುಂಬರುವ ಏಪ್ರಿಲ್ ವೇಳೆಗೆ ಈ ನಿರ್ಧಾರದ ಮರುಪರಿಶೀಲನೆಯಾಗಲಿದೆ ಎಂಬುದು ಲಭ್ಯಮಾಹಿತಿ. ಉತ್ಪಾದನೆ ತಗ್ಗಿಸುವ ಘೋಷಣೆಯಾಗುತ್ತಿದ್ದಂತೆ, ಜಾಗತಿಕ ತೈಲಬೆಲೆಗಳಲ್ಲಿ ಶೇ. 4ರಷ್ಟು ಹೆಚ್ಚಳವಾಗಿದೆ. ಭಾರತದಲ್ಲಿ ಕೆಲ ತಿಂಗಳಿಂದ ಏರುಗತಿಯಲ್ಲಿದ್ದ ತೈಲಬೆಲೆ ಕೆಲ ದಿನಗಳಿಂದ ಇಳಿಕೆಯಾಗುತ್ತಿತ್ತು. ಆದರೆ ಈಗ ಮತ್ತೆ ಏರುವ ಸಾಧ್ಯತೆ ಕಂಡುಬಂದಿದೆ.

ಭಾರತಕ್ಕೆ ತಲೆನೋವು

# ತನ್ನ ತೈಲೋತ್ಪನ್ನ ಅಗತ್ಯಗಳ ಪೈಕಿ ಶೇ. 80ರಷ್ಟನ್ನು ಆಮದು ಮಾಡಿಕೊಳ್ಳುವ ಭಾರತಕ್ಕೆ ಒಪೆಕ್ ಸದಸ್ಯ ರಾಷ್ಟ್ರಗಳಿಂದ ದಕ್ಕುತ್ತಿರುವ ಪೂರೈಕೆ ಹೀಗಿದೆ- ಶೇ. 82ರಷ್ಟು ಕಚ್ಚಾತೈಲ, ಶೇ. 75ರಷ್ಟು ನಿಸರ್ಗಾನಿಲ ಮತ್ತು ಶೇ. 97ರಷ್ಟು ಎಲ್​ಪಿಜಿ.

# ಸಾರ್ವತ್ರಿಕ ಚುನಾವಣೆ ಸನ್ನಿಹಿತವಾಗಿರುವಾಗಲೇ ಉತ್ಪಾದನೆಯಲ್ಲಿ ಕಡಿತ ಮಾಡುವ ಒಪೆಕ್ ನಿರ್ಧಾರದಿಂದ ದರ ಹೆಚ್ಚಳವಾದರೆ ಬಿಜೆಪಿಗೆ ತಲೆನೋವಾಗಬಹುದು.

# 2018-19ರ ಹಣಕಾಸು ವರ್ಷದ ಕೊನೆಯ ತ್ರೖೆಮಾಸಿಕದಲ್ಲಿ ತೈಲಬೆಲೆಗಳು ಹೀಗೆ ಏರುವುದರಿಂದಾಗಿ ಸರ್ಕಾರದ ಮತ್ತೊಮ್ಮೆ ಒತ್ತಡಕ್ಕೆ ಸಿಲುಕಲಿದ್ದು, ಅದರ ಸಾಮಾಜಿಕ ಖರ್ಚುವೆಚ್ಚದ ಸಾಮರ್ಥ್ಯದ ಮೇಲೆ ಮಿತಿ ಹೇರಲಿದೆ ಹಾಗೂ ಚುನಾವಣಾ ಸಂದರ್ಭದಲ್ಲಿ ಈ ಬೆಳವಣಿಗೆ ವ್ಯತಿರಿಕ್ತವಾಗಿ ಪರಿಣಮಿಸಬಹುದು.

# ರೂಪಾಯಿ ಮೌಲ್ಯ ಮತ್ತೊಮ್ಮೆ ಅಡಕತ್ತರಿಯಲ್ಲಿ ಸಿಲುಕಿ ತಗ್ಗಬಹುದು.

Comments are closed.