ರಾಷ್ಟ್ರೀಯ

ಶಬರಿಮಲೆ ದೇಗುಲ ಪ್ರವೇಶಕ್ಕೆ ಅಡ್ಡಿ ಪಡಿಸಲು ಯಾರಿಗೂ ಅವಕಾಶ ನೀಡುವುದಿಲ್ಲ: ಕೇರಳ ಪೊಲೀಸ್ ವರಿಷ್ಠಾಧಿಕಾರಿ; 500 ಮಂದಿ ಬಂಧನ

Pinterest LinkedIn Tumblr

ತಿರುವನಂತಪುರಂ: ವ್ಯಾಪಕ ಪ್ರತಿಭಟನೆ ಹೊರತಾಗಿಯೂ ಶಬರಿಮಲೆ ದೇಗುಲ ಪ್ರವೇಶಕ್ಕೆ ಅಡ್ಡಿ ಪಡಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಕೇರಳ ಪೊಲೀಸ್ ವರಿಷ್ಠಾದಿಕಾರಿ ಲೋಕನಾಥ್ ಬೆಹೆರಾ ಹೇಳಿದ್ದಾರೆ.

ಶಬರಿಮಲೆ ಯಾತ್ರೆಯ ಆರಂಭಿಕ ಸ್ಥಳ ನಿಳಕ್ಕಲ್ ಬೇಸ್ ಕ್ಯಾಂಪ್ ನಲ್ಲಿ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆ ಹಿನ್ನಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಳಕ್ಕಲ್ ನಲ್ಲಿ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಶಬರಿಮಲೆ ಪ್ರವೇಶಕ್ಕೆ ಯಾರಿಗೂ ಅಡ್ಡಿಪಡಿಸಲು ಬಿಡುವುದಿಲ್ಲ. ದೇಗುಲ ಪ್ರವೇಶಕ್ಕೆ ಅಡ್ಡಿ ಪಡಿಸಿದ ಸುಮಾರು 500 ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಇನ್ನು ನಿಳಕ್ಕಲ್ ನಲ್ಲಿ ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡದಂತಿದ್ದು, 10 ರಿಂದ 50 ವರ್ಷ ವಯಸ್ಸಿನೊಳಗಿನ ಮಹಿಳೆಯರು ದೇಗುಲ ಪ್ರವೇಶ ಮಾಡದಂತೆ ತಡೆಯಲು ಶಿವಸೇನೆ, ಹಿಂದೂ ಮಕ್ಕಳ್ ಕಚ್ಚಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಹಿಂದೂಪರ ಸಂಘಟನೆಗಳು ಪಣ ತೊಟ್ಟಿದ್ದು, ಬೇಸ್ ಕ್ಯಾಂಪ್ ನಲ್ಲಿ ಮೊಕ್ಕಾಂ ಹೂಡಿವೆ. ಅಂತೆಯೇ ಒಂದು ವೇಳೆ ಪೊಲೀಸರು ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಟ್ಟರೆ ತಾವು ಸಜೀವವಾಗಿ ದಹಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶಿವಸೇನೆ ಮಹಿಳಾ ಘಟಕ ಎಚ್ಚರಿಕೆ ನೀಡಿದೆ.

ಇನ್ನು ನಿಳಕ್ಕಲ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಕೇರಳ ಬಿಜೆಪಿ ರಾಜ್ಯಾದ್ಯಕ್ಷ ಪಿಎಸ್ ಶ್ರೀಧರನ್ ಪಿಳ್ಳೈ ಬೆಂಬಲ ನೀಡುವುದರೊಂದಿಗೆ ಪ್ರತಿಭಟನಾಕಾರರ ಹೋರಾಟಕ್ಕೆ ಮತ್ತಷ್ಟು ಕಾವು ದೊರೆತಂತಾಗಿದೆ. ಅಂತೆಯೇ ರಾಜ್ಯ ಬಿಜೆಪಿಯ ನೂರಾರು ಕಾರ್ಯಕರ್ತರು ನಿಳಕ್ಕಲ್ ಗೆ ದೌಡಾಯಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಒಟ್ಟಾರೆ ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡಿದ ಸುಪ್ರೀಂ ಕೋರ್ಟ್ ತೀರ್ಪು ಇದೀಗ ಮತ್ತೊಂದು ಸುತ್ತಿನ ಪ್ರತಿಭಟನೆಗೆ ನಾಂದಿ ಹಾಡಿದಂತಾಗಿದೆ.

Comments are closed.