ಹದಿಹರೆಯದಲ್ಲಿ ಇದ್ದಂಥ ದೇಹವನ್ನೇ ನೆನೆದು ಕೊರಗುವುದು ಮತ್ತು ಅದಕ್ಕಾಗಿ ಒದ್ದಾಡುವುದು ಸರಿಯಲ್ಲ. ಬದಲಿಗೆ ವಯಸ್ಸಿಗೆ ತಕ್ಕ ಬದಲಾವಣೆಯನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು.
ಸಾಮಾನ್ಯವಾಗಿ ಮಹಿಳೆಯರು ಒಟ್ಟಿಗೆ ಸೇರಿದಾಗಲೆಲ್ಲ ಬಹು ರ್ಚಚಿತವಾಗುವ ವಿಷಯಗಳಲ್ಲಿ ಒಂದು ತೂಕ. ಅದರಲ್ಲೂ ಮದುವೆಯ ನಂತರ ಇದ್ದಕ್ಕಿದ್ದಂತೆ ತೂಕದಲ್ಲಿ ಶೇಕಡಾ ಎಂಭತ್ತರಷ್ಟು ಗಣನೀಯ ಏರಿಕೆ ಮಹಿಳೆಯರಲ್ಲಿ ಕಂಡುಬರುತ್ತದೆ. ಹಾಗೆ ನೋಡಿದರೆ ಬರೀ ಮಹಿಳೆಯರಷ್ಟೇ ಅಲ್ಲ, ದಂಪತಿಯಲ್ಲಿ ಅಂದರೆ ಮಹಿಳೆ-ಪುರುಷ ಇಬ್ಬರಲ್ಲೂ ಮದುವೆಯಾದ ಐದು ವರ್ಷಗಳಲ್ಲಿ ಐದರಿಂದ ಹತ್ತು ಕೆಜಿ ತೂಕ ಏರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಹಾಗಾದರೆ ಕಾರಣಗಳೇನು?
ಮದುವೆಯ ನಂತರ ಮಹಿಳೆಯಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗುತ್ತವೆ. ಇನ್ನೊಬ್ಬ ವ್ಯಕ್ತಿಯೊಡನೆ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಕೂಡಿ ಬಾಳಬೇಕಾದ ಸಮಯ. ಹೀಗಾಗಿ ಈ ಸಮಯದಲ್ಲಿ ಹಾಮೋನುಗಳ ಪ್ರಭಾವದಿಂದ ತೂಕದಲ್ಲಿ ಏರಿಕೆಯಾಗಬಹುದು ಎಂಬುದು ಸಾಮಾನ್ಯ ನಂಬಿಕೆಯಾಗಿದೆ. ಆದರೆ, ವೈದ್ಯರ ಪ್ರಕಾರ ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಬದಲಾಗಿ ದಂಪತಿಗಳ ಜೀವನಶೈಲಿಯಲ್ಲಿ ಆಗುವ ಬದಲಾವಣೆ ತೂಕದ ಸಮಸ್ಯೆಗೆ ಪ್ರಮುಖ ಕಾರಣ. ಸಾಮಾನ್ಯವಾಗಿ ಹುಡುಗಿಯರು ಹರೆಯದ ಹೊಸ್ತಿಲಲ್ಲಿ ಕಾಲಿಟ್ಟಾಗ ದೇಹದ ನಾನಾ ಭಾಗಗಳಲ್ಲಿ ಕೊಬ್ಬು ಶೇಖರಣೆಯಾಗುತ್ತದೆ. ನಂತರ ಕಾಲೇಜು-ಕೆಲಸ ಹೀಗೆ ನಿಯಮಿತ ವ್ಯಾಯಾಮಕ್ಕೆ ಸಮಯ ಸಿಗುವುದಿಲ್ಲ. ಆದರೆ, ಮದುವೆಯ ಸಂದರ್ಭ ಬರುವ ಮುನ್ನವೇ ಪಾಲಕರು ಹಿರಿಯರಿಂದ ತೆಳ್ಳಗಾಗಲು ಉಪದೇಶ. ಏಕೆಂದರೆ ಯುವತಿ ಎಂದೊಡನೆ ತೆಳ್ಳಗೆ, ಬಳುಕುತ್ತ ಸುಂದರವಾಗಿರಬೇಕು ಎಂಬುದು ಸಮಾಜ ಅಪೇಕ್ಷಿಸುವ, ಮಹಿಳೆಯರೂ ಸ್ವತಃ ನಂಬಿರುವ ಮಾನದಂಡ. ಹೀಗಾಗಿ ‘ಫಿಗರ್’ ಚೆನ್ನಾಗಿಡಲು ಎಲ್ಲ ರೀತಿಯ ವ್ಯಾಯಾಮ ಮತ್ತು ಡಯೆಟಿಂಗ್ ನಡೆಯುತ್ತದೆ. ಅದರೆ ಮದುವೆಯಾಗಿ, ಸಂಸಾರ ಹೂಡಿದೊಡನೆ ಈ ಎಲ್ಲಕ್ಕೂ ಪೂರ್ಣ ವಿರಾಮ. ಏಕೆಂದರೆ ವ್ಯಾಯಾಮದ ಉದ್ದೇಶವಿದ್ದದ್ದು ಮದುವೆಗೆ ಮಾತ್ರ! ಸಹಜವಾಗಿಯೇ ಈಗ ತೂಕದಲ್ಲಿ ಏರಿಕೆ.
ಮದುವೆಯಾದ ಬಳಿಕ ಕೌಟುಂಬಿಕ ಜವಾಬ್ದಾರಿಗಳು ಹೆಚ್ಚುತ್ತವೆ. ಒಬ್ಬರೇ ಇದ್ದಾಗ ಇಷ್ಟ ಬಂದಂತೆ ಕಳೆಯುತ್ತಿದ್ದ ಸಮಯಕ್ಕೂ, ಈಗ ಜತೆಯಾಗಿ ಸಮಯ ಹೊಂದಿಸುವುದಕ್ಕೂ ವ್ಯತ್ಯಾಸವಿದೆ. ಹೊಸ ಜವಾಬ್ದಾರಿಗಳು ತಲೆಗೇರಿದಂತೆ ವ್ಯಾಯಾಮಕ್ಕಾಗಿ ಸಮಯ ಇಲ್ಲವಾಗಬಹುದು. ಪರಿಣಾಮ ತೂಕದಲ್ಲಿ ಹೆಚ್ಚಳ.
ಇದೆಲ್ಲದರ ಜತೆ ನಮ್ಮ ಮಾನಸಿಕ ಆರೋಗ್ಯಕ್ಕೂ ದೇಹಕ್ಕೂ ಅತ್ಯಂತ ನಿಕಟ ಸಂಬಂಧವಿದೆ. ಮದುವೆಯಂಥ ಸಂಬಂಧದಲ್ಲಿ ತಾನೀಗ ಸುರಕ್ಷಿತ, ಹೇಗಿದ್ದರೂ ಪರವಾಗಿಲ್ಲ, ಪ್ರೀತಿಸುವವರು ಇದ್ದಾರೆ ಎಂಬ ಉಲ್ಲಾಸದಿಂದ, ಹೆಚ್ಚು ಆಹಾರ ಸೇವಿಸಲಾಗುತ್ತದೆ. ಒಬ್ಬರೇ ತಿನ್ನುವುದಕ್ಕಿಂತ ಇಬ್ಬರು ಜತೆಯಾಗಿ ಕುಳಿತು, ಕೈಯಾರೆ ಮಾಡಿದ ಹೊಸ ರುಚಿ ತಿನ್ನುವಾಗ ನಾಲ್ಕು ತುತ್ತು ಹೆಚ್ಚಿಗೆಯೇ ಒಳ ಸೇರುತ್ತದೆ. ಹಾಗೇ ಮದುವೆಯಾದ ಹೊಸದರಲ್ಲಿ ತಿರುಗಾಟದ ಜತೆ ಹೊರಗಿನ ಕುರುಕಲು-ಸಿಹಿ-ಐಸ್ಕ್ರೀಂನಂಥ ಪದಾರ್ಥಗಳ ಸೇವನೆ ಹೆಚ್ಚಿರುತ್ತದೆ. ಮನೆಯಲ್ಲಿ ಒಟ್ಟಾಗಿ ಟಿ.ವಿ ಮುಂದೆ ಕುಳಿತು ಚಿಪ್ಸ್, ಪಾಪ್ಕಾರ್ನ್ ತಿನ್ನುತ್ತ ಸಮಯ ಕಳೆಯುವುದೂ ಇದೆ. ಇದಕ್ಕೆ ವ್ಯತಿರಿಕ್ತವಾಗಿ ಮದುವೆಯ ನಂತರ ಕೆಲವು ಬಾರಿ ಹೆಚ್ಚಿನ ಕೆಲಸ, ಭಿನ್ನಾಭಿಪ್ರಾಯ, ಹೊಂದಾಣಿಕೆಯ ಸಮಸ್ಯೆ ಇವುಗಳಿಂದಾಗಿ ಒತ್ತಡ ಹೆಚ್ಚಬಹುದು. ಅದನ್ನು ಸಮರ್ಥವಾಗಿ ಎದುರಿಸಲಾಗದೆ, ಬೇರೇನೂ ತೋಚದೆ ಆಗಾಗ್ಗೆ ತಿನ್ನುವುದರ ಮೂಲಕ ಅದಕ್ಕೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ. ಒಟ್ಟಿನಲ್ಲಿ ಎಲ್ಲದರ ಪರಿಣಾಮ ಒಂದೇ, ಅತಿ ತೂಕ!
ಹಾಗೆಯೇ ಇಂದು ಯುವತಿಯರು ಓದು ಮುಗಿಸಿ, ಉದ್ಯೋಗಕ್ಕೆ ಸೇರಿ ಆರ್ಥಿಕವಾಗಿ ಸ್ವತಂತ್ರರಾಗಿ ನಂತರ ಮದುವೆಯತ್ತ ಮನಸ್ಸು ಮಾಡುತ್ತಾರೆ. ಆ ಹೊತ್ತಿಗೆ ವಯಸ್ಸು ಮೂವತ್ತರ ಸಮೀಪದಲ್ಲಿರುತ್ತದೆ. ಮೂವತ್ತರ ನಂತರ ದೇಹದ ಜೈವಿಕ ಕ್ರಿಯೆಗಳು ನಡೆಯುವ ಗತಿ ನಿಧಾನವಾಗುವ ಸಂದರ್ಭ. ಹೀಗಾಗಿ ಸಹಜವಾಗಿಯೇ ತೂಕ ಹೆಚ್ಚುವ ಕಾಲ ಅದಾಗಿದೆ.
ಹೀಗಿದ್ದರೆ ಚೆನ್ನ
1. ವೈವಾಹಿಕ ಜೀವನವನ್ನು ಆನಂದಿಸುತ್ತಲೇ ತೂಕದ ಬಗ್ಗೆಯೂ ಗಮನ ಹರಿಸಲು ಸಾಧ್ಯವಿಲ್ಲವೇ? ಸಾಧ್ಯವಿದೆ. ಅದಕ್ಕಾಗಿ ಕೆಲವು ಸಲಹೆಗಳು.
2.ಅನಗತ್ಯ ಕೊಬ್ಬಿಲ್ಲದ ದೇಹ ನೋಡಲು ಸುಂದರವಾಗಿ ಕಾಣುತ್ತದೆ ನಿಜ. ಆದರೆ ಸರಿಯಾದ ತೂಕ ಉತ್ತಮ ಆರೋಗ್ಯಕ್ಕೆ ಅವಶ್ಯಕ ಎಂಬುದನ್ನು ನೆನಪಿನಲ್ಲಿಡಬೇಕು. ಅಂದರೆ ಯಾರನ್ನೋ ಮೆಚ್ಚಿಸಲು ಅಲ್ಲ, ನಮ್ಮ ಆರೋಗ್ಯದ ಸಲುವಾಗಿ ಅನಗತ್ಯ ಕೊಬ್ಬು ದೂರದಲ್ಲಿಡುವುದು ಒಳ್ಳೆಯದು.
3. ವ್ಯಾಯಾಮವೆಂದರೆ ಮದುವೆಯ ಸಮಯಕ್ಕೆ ಚಂದ ಕಾಣಿಸಲು ಆಗಾಗ್ಗೆ ಮಾಡುವ ಚಟುವಟಿಕೆಯಲ್ಲ. ಬದಲಿಗೆ ನಮ್ಮ ಆರೋಗ್ಯಕ್ಕಾಗಿ ನಿತ್ಯವೂ ಮಾಡಬೇಕಾದ ದಿನಚರಿಯ ಭಾಗ. ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ವಯಸ್ಸು ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯಾಯಾಮ ಬೇಕೇ ಬೇಕು.
4.ಮದುವೆಯಾದ ನಂತರ ಪತಿ-ಪತ್ನಿ ಇಬ್ಬರೂ ದಿನವೂ ಒಟ್ಟಾಗಿ ನಡಿಗೆ, ಸೈಕಲ್, ಈಜು, ಕುಣಿತ ಹೀಗೆ ಯಾವುದಾದರೊಂದು ವ್ಯಾಯಾಮ ಮಾಡಿದಲ್ಲಿ ಸಾಂಗತ್ಯ ಮತ್ತು ಆರೋಗ್ಯ ಎರಡೂ ದೊರೆಯುತ್ತದೆ.
5. ನಾವು ತಿನ್ನುವ ಆಹಾರ ನಾಲಿಗೆಗೆ ರುಚಿ ಕೊಡುವುದರ ಜತೆ ಆರೋಗ್ಯಕ್ಕೂ ಹಿತಕರವಾಗಿದ್ದರೆ ಅದೆಷ್ಟು ಒಳ್ಳೆಯದು! ಕಡಿಮೆ ಕ್ಯಾಲರಿಯ ಆರೋಗ್ಯಕರ ಚಾಟ್, ಸಿಹಿತಿಂಡಿಗಳನ್ನು ಪತಿ-ಪತ್ನಿಯರು ಒಟ್ಟಾಗಿ ಮಾಡಿ ತಿಂದರೆ ಖರ್ಚೂ ಕಡಿಮೆ, ಖುಷಿಯೂ ಹೆಚ್ಚು!
6. ಮದುವೆಯ ಸಂಬಂಧದಲ್ಲಿ ಪತಿ-ಪತ್ನಿ ಪರಸ್ಪರರನ್ನು ಗೌರವಿಸಿ, ಕಲಿಯುತ್ತ ತಿದ್ದುತ್ತ ಮುನ್ನಡೆಯಬೇಕು, ಮುನ್ನಡೆಸಬೇಕು. ಹೊಂದಾಣಿಕೆಯ ಸೂತ್ರ ಅನುಸರಿಸುತ್ತಲೇ ಮುಕ್ತ ಸಂವಾದಕ್ಕೆ ಅವಕಾಶವಿರಲಿ. ಹಾಗೆಯೇ ಸಂಗಾತಿಯ ಜೀವನಶೈಲಿಯಲ್ಲಿ ದೋಷವಿದ್ದರೆ ಅದನ್ನು ನಯವಾಗಿ ತಿದ್ದಿ, ತಾವೂ ಸರಿಯಾದುದನ್ನು ಅನುಸರಿಸುವುದು ಮುಖ್ಯ.
ಒಟ್ಟಿನಲ್ಲಿ ಸಂಗಾತಿಯೊಡನೆ ಸವಿಮಾತು, ಆಪ್ತ ಒಡನಾಟ, ಹಿತ-ಮಿತ ಆಹಾರ, ನಿಯಮಿತ ವ್ಯಾಯಾಮ ಇವುಗಳಿಂದ ಕೂಡಿದ ಆರೋಗ್ಯಕರ ಜೀವನಶೈಲಿ ಅನುಸರಿಸಿದಲ್ಲಿ ದೇಹ ಹಗುರ, ಬದುಕೂ ಸುಂದರ!

Comments are closed.