ರಾಷ್ಟ್ರೀಯ

ಉತ್ತರ ಪ್ರದೇಶ ಉಪಚುನಾವಣೆಯಲ್ಲಿ ಎಸ್​ಪಿಗೆ ಜಯ, ಬಿಜೆಪಿಗೆ ಮುಖಭಂಗ

Pinterest LinkedIn Tumblr


ನವದೆಹಲಿ: ಉತ್ತರ ಪ್ರದೇಶ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು ಗೋರಖ್​ಪುರ ಹಾಗೂ ಫುಲ್​ಪುರಗಳಲ್ಲಿ ಗೆಲುವು ಸಮಾಜವಾದಿ ಪಕ್ಷದ ಪಾಲಾಗಿದೆ.

19 ವರ್ಷಗಳಿಂದ ಬಿಜೆಪಿ ವಶದಲ್ಲಿದ್ದ, ಯೋಗಿ ಆದಿತ್ಯನಾಥ ಅವರ ಭದ್ರಕೋಟೆ ಎನಿಸಿದ್ದ ಗೋರಖ್​ಪುರ ಸಮಾಜವಾದಿ ಪಕ್ಷಕ್ಕೆ ಸೇರಿದೆ. ಸಮಾಜವಾದಿ ಪಕ್ಷ (ಎಸ್​ಪಿ) ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್​ಪಿ)ದ ರಾಜಕೀಯ ಸಮೀಕರಣದ ಮೈತ್ರಿಯಿಂದಾಗಿ ಬಿಜೆಪಿಗೆ ಸೋಲಾಗಿದೆ.

ಗೋರಖ್​ಪುರದಲ್ಲಿ 25ನೇ ಸುತ್ತಿನ ಮತ ಎಣಿಕೆ ಹೊತ್ತಿಗೆ ಸಮಾಜವಾದಿ ಪಕ್ಷದ ಪ್ರವೀಣ್​ಕುಮಾರ್​ ನಿಶಾದ್​ ಬಿಜೆಪಿಯ ಉಪೇಂದ್ರ ದತ್ತ ಶುಕ್ಲಾ ವಿರುದ್ಧ 22, 594 ಮತಗಳ ಅಂತರದಿಂದ ಮುನ್ನಡೆ ಸಾಧಿಸಿ 3, 77, 146 ಮತ ಗಳಿಸಿದ್ದಾರೆ. ಇನ್ನು ಉಪೇಂದ್ರ ದತ್ತ 3,54,192 ಮತಗಳನ್ನು ಪಡೆದಿದ್ದರು.

ಇನ್ನು ಫುಲ್​ಪುರದಲ್ಲಿ 28ನೇ ಸುತ್ತಿನ ಮತ ಎಣಿಕೆ ಹೊತ್ತಿಗೆ ಸಮಾಜವಾದಿಯ ಪ್ರತಾಪ್​ ಸಿಂಗ್​ ಪಟೇಲ್​ ಬಿಜೆಪಿಯ ಕೌಶಲೇಂದ್ರ ಸಿಂಗ್​ ಪಟೇಲ್​ ಅವರನ್ನು 47, 351 ಮತಗಳ ಅಂತರದಿಂದ ಮಣಿಸಿ 3, 05, 172 ವೋಟುಗಳನ್ನು ಹೊಂದಿದ್ದರು. ಕೌಶಲೇಂದ್ರ ಸಿಂಗ್​ ಪಟೇಲ್​ ಅವರು 2, 57, 821 ಮತ ಗಳಿಸಿದ್ದರು. ಈ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಆಯ್ಕೆಯಾಗಿದ್ದರು.
ಎರಡೂ ಕ್ಷೇತ್ರದ ಗೆಲುವಿನ ನಂತರ ಸಮಾಜವಾದಿ ಪಕ್ಷದ ಮುಖಂಡರು ಭರ್ಜರಿ ವಿಜಯೋತ್ಸವ ಆಚರಿಸಿದ್ದಾರೆ.

ಎಸ್​ಪಿ ಮತ್ತು ಬಿಎಸ್​ಪಿಗೆ ಅಭಿನಂದನೆಗಳು

ಉತ್ತರಪ್ರದೇಶದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆಯ್ಕೆಯಾಗಿದ್ದ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಈ ಐತಿಹಾಸಿಕ ವಿಜಯಕ್ಕಾಗಿ ಎಸ್​ಪಿ ಮತ್ತು ಬಿಎಸ್​ಪಿಗೆ ಅಭಿನಂದನೆಗಳು. ಬಿಜೆಪಿಯೇತರ ಪಕ್ಷಗಳ ಒಗ್ಗಟ್ಟು ಪ್ರಮುಖ ಪಾತ್ರ ವಹಿಸಿದೆ. ಕರ್ನಾಟಕದಲ್ಲಿ ಅಭಿವೃದ್ಧಿ ಕುರಿತು ಕಡಿಮೆ ಭಾಷಣ ಮಾಡುವುದು ಒಳಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್​ನಲ್ಲಿ ಕುಟುಕಿದ್ದಾರೆ.

BJP has suffered humiliating loss in the Lok Sabha seats held by the CM & DyCM of UP. Congratulations to SP & BSP for this historic victory. Unity among the non-BJP parties has played a key role.

Perhaps Yogi Adityanath should spend less time lecturing Karnataka on development.

— Siddaramaiah (@siddaramaiah) March 14, 2018

ಫಲಿತಾಂಶ ಅನಿರೀಕ್ಷಿತ. ಈ ಬಗ್ಗೆ ಪರಾಮರ್ಶೆ ಮಾಡಲಾಗುವುದು. ರಾಜ್ಯದ ಹಾಗೂ ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಎಸ್​​ಪಿ ಮತ್ತು ಬಿಎಸ್​ಪಿಯ ರಾಜಕೀಯ ಮೈತ್ರಿಯನ್ನು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಹಣಿಯಲು ತಂತ್ರಗಾರಿಕೆ ಹೆಣೆಯಲಾಗುವುದು.
| ಯೋಗಿ ಆದಿತ್ಯನಾಥ್​, ಉತ್ತರಪ್ರದೇಶ ಮುಖ್ಯಮಂತ್ರಿ

Comments are closed.