ಕರ್ನಾಟಕ

ಎಪ್ರಿಲ್‌ ಅಂತ್ಯಕ್ಕೆ ಎಸೆಸೆಲ್ಸಿ , ಪಿಯು ಫ‌ಲಿತಾಂಶ?

Pinterest LinkedIn Tumblr


ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಮಾ. 17 ಮತ್ತು ಎಸೆಸೆಲ್ಸಿ ಪರೀಕ್ಷೆ ಎಪ್ರಿಲ್‌ 6ಕ್ಕೆ ಮುಗಿಯಲಿದ್ದು, ಈ ಎರಡೂ ಪರೀಕ್ಷೆಗಳ ಫ‌ಲಿತಾಂಶ ಎಪ್ರಿಲ್‌ 3ನೇ ಅಥವಾ 4ನೇ ವಾರದಲ್ಲಿ ಹೊರಬೀಳುವ ಸಾಧ್ಯತೆಯಿದೆ. ಎಸೆಸೆಲ್ಸಿ ಬೋರ್ಡ್‌ ಹಾಗೂ ಪಿಯು ಇಲಾಖೆ ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿವೆ.

ಎಸೆಸೆಲ್ಸಿ ಪರೀಕ್ಷೆ ಮಾ. 23ರಿಂದ ಎ. 6ರ ತನಕ ನಡೆಯಲಿದೆ. ದ್ವಿತೀಯ ಪಿಯು ಪರೀಕ್ಷೆ ಈ ವಾರಾಂತ್ಯದಲ್ಲಿ ಪೂರ್ಣಗೊಳ್ಳಲಿದೆ. ಮಾ. 24ರಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳ ಉತ್ತರಪತ್ರಿಕೆ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಲಿದೆ. ಸುಮಾರು 6.90 ಲಕ್ಷ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ 20 ಸಾವಿರ ಉಪನ್ಯಾಸಕರ ನಿಯೋಜನೆ ಮಾಡಲಾಗಿದೆ. ಪರೀಕ್ಷೆ ಮುಗಿಯುತ್ತಿದ್ದಂತೆ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಲು ಮೌಲ್ಯಮಾಪಕರಿಗೆ ಇಲಾಖೆಯಿಂದ ಪತ್ರವನ್ನು ಕಳುಹಿಸಲಾಗಿದೆ.

ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರತ್ಯೇಕವಾಗಿ ನಡೆಯಲಿದೆ. ಪಿಯು ಉತ್ತರಪತ್ರಿಕೆ ಮೌಲ್ಯ ಮಾಪನಕ್ಕಾಗಿಯೇ 52 ಕೇಂದ್ರಗಳನ್ನು ರಾಜ್ಯಾದ್ಯಂತ ತೆರೆಯಲಾಗುತ್ತದೆ. ಎ. 18 ಮತ್ತು 19ರಂದು ಎಂಜಿನಿಯ ರಿಂಗ್‌ ಸಹಿತ ವಿವಿಧ ವೃತ್ತಿಪರ ಕೋರ್ಸ್‌ ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದೆ. ಸಿಇಟಿ ಮುಗಿದ ತತ್‌ಕ್ಷಣವೇ ದ್ವಿತೀಯ ಪಿಯು ಫ‌ಲಿತಾಂಶ ಪ್ರಕಟಿಸಲಾಗುತ್ತದೆ.

ಒಮ್ಮೊಮ್ಮೆ ಎಸೆಸೆಲ್ಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಅಷ್ಟರೊಳಗೆ ಪೂರ್ಣಗೊಂಡಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯು ಫ‌ಲಿತಾಂಶ ಒಂದೇ ದಿನ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ. ಮೇ ತಿಂಗಳಲ್ಲಿ ಚುನಾವಣೆ ನಡೆಯುವುದರಿಂದ ಬಹುತೇಕ ಶಿಕ್ಷಕ ಹಾಗೂ ಉಪನ್ಯಾಸಕರು ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿರುತ್ತಾರೆ ಮತ್ತು ನೀತಿ ಸಂಹಿತೆಯೂ ಜಾರಿಯಲ್ಲಿರುತ್ತದೆ. ಹೀಗಾಗಿಯೇ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆ, ಮೌಲ್ಯಮಾಪನ ಮತ್ತು ಫ‌ಲಿತಾಂಶ ಸಹಿತ ಎಲ್ಲ ಪ್ರಕ್ರಿಯೆಗಳು ಎಪ್ರಿಲ್‌ ಅಂತ್ಯದೊಳಗೆ ಪೂರ್ಣವಾಗಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾ.23ರಂದು ಆರಂಭವಾಗುವ ಎಸೆಸೆಲ್ಸಿ ಪರೀಕ್ಷೆಗೆ 9.6 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಸುಮಾರು 60 ಸಾವಿರ ಶಿಕ್ಷಕರನ್ನು ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ನಿಯೋಜನೆ ಮಾಡಲಾಗುತ್ತದೆ. ಮೌಲ್ಯಮಾಪನ ಕೇಂದ್ರಗಳನ್ನು ಈಗಾಗಲೇ ಗೊತ್ತುಮಾಡಿದ್ದು, ಪರೀಕ್ಷೆ ಮುಗಿದ ಒಂದು ವಾರದೊಳಗೆ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಲಿದೆ. ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳನ್ನು ಆನ್‌ಲೈನ್‌ ಮೂಲಕವೇ ನೋಂದಣಿ ಮಾಡಿಸಲಾಗಿದೆ.

ಮೌಲ್ಯಮಾಪನ ಬಹಿಷ್ಕಾರ
ವೇತನ ತಾರತಮ್ಯ ನಿವಾರಣೆ ಸಹಿತ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸರಕಾರಿ ಪಿಯು ಕಾಲೇಜು ಪ್ರಾಂಶುಪಾಲರ ಸಂಘವು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ. ಆದರೆ ಸರಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸರಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮೌಲ್ಯಮಾಪನ ಬಹಿಷ್ಕಾರದ ಎಚ್ಚರಿಕೆ ಯನ್ನೂ ಸಂಘ ನೀಡಿದೆ. ಪ್ರಾಂಶುಪಾಲರ ಸಂಘವು ಮೌಲ್ಯಮಾಪನ ಬಹಿಷ್ಕಾರ ಮಾಡಿದರೆ, ಸರಕಾರಿ ಪಿಯು ಕಾಲೇಜು ಉಪನ್ಯಾಸಕರೂ ಮೌಲ್ಯಮಾಪನ ಬಹಿಷ್ಕಾರ ಮಾಡಲಿದ್ದಾರೆ.

-ಉದಯವಾಣಿ

Comments are closed.