ರಾಷ್ಟ್ರೀಯ

ಫಲ ನೀಡುವುದೇ ಬಿಜೆಪಿ ಚಾಣಕ್ಯ ನಡೆ?

Pinterest LinkedIn Tumblr


ಲಖನೌ: ಇದೇ 23ರಂದು ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ 58 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೇಲ್ಮನೆಯಲ್ಲಿ ಸಂಖ್ಯಾಬಲ ವೃದ್ಧಿಸಿಕೊಳ್ಳಲು ಬಿಜೆಪಿ ಕಸರತ್ತು ನಡೆಸಿದೆ. ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ 10 ಸ್ಥಾನಗಳಿಗೆ ಆಡಳಿತಾರೂಢ ಬಿಜೆಪಿ 11 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಕುತೂಹಲ ಹುಟ್ಟಿಸಿದೆ.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಅಶೋಕ್‌ ಭಾಜಪೇಯಿ, ವಿಜಯ್‌ ಪಾಲ್‌ ಸಿಂಗ್‌ ತೋಮರ್‌, ಸಕಾಳ್‌ ದೀಪ್‌ ರಾಜ್‌ಭರ್‌, ಕಾಂತ ಕರ್ದಮ್‌, ಡಾ.ಅನಿಲ್‌ ಜೈನ್‌, ಜಿ.ವಿ.ಎಲ್‌. ನರಸಿಂಹ ರಾವ್‌, ಹರನಾಥ್‌ ಸಿಂಗ್‌ ಯಾದವ್‌ ಅವರು ಪಕ್ಷದ ಅಭ್ಯರ್ಥಿಗಳೆಂದು ಬಿಜೆಪಿ ಘೋಷಿಸಿತ್ತು. ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಸೋಮವಾರ ಅಂತಿಮ ಕ್ಷಣದಲ್ಲಿ ವಿದ್ಯಾ ಸಾಗರ ಸೋನಕರ್‌, ಸಲೀಲ್‌ ವೈಷ್ಣೋಯಿ ಮತ್ತು ಆಗತಾನೇ ಪಕ್ಷಕ್ಕೆ ಸೇರಿದ ಅನಿಲ್‌ ಅಗರ್ವಾಲ್‌ ಅವರನ್ನು ಅಖಾಡಕ್ಕಿಳಿಸಿತು. ಈ ನಡೆ ರಾಜಕೀಯ ವಲಯದಲ್ಲಿ ಅಚ್ಚರಿ ಹುಟ್ಟಿಸಿದೆ.

404 ಸದಸ್ಯಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಮತ್ತದರ ಮಿತ್ರಪಕ್ಷಗಳ ಶಾಸಕರ ಸಂಖ್ಯಾಬಲ 324. ಇಲ್ಲಿ ರಾಜ್ಯಸಭೆಯ ಅಭ್ಯರ್ಥಿ ಗೆಲುವಿಗೆ ಅಗತ್ಯವಿರುವ ಮತ 37. ಈ ಲೆಕ್ಕಾಚಾರದಲ್ಲಿ ಬಿಜೆಪಿಯ 8 ಅಭ್ಯರ್ಥಿಗಳು ನಿರಾಯಾಸವಾಗಿ ಗೆಲ್ಲುವುದು ಖಚಿತ. ಇದರ ಹೊರತಾಗಿಯೂ ಅದರ ಬಳಿ ಹೆಚ್ಚುವರಿಯಾಗಿ 28 ಮತಗಳು ಉಳಿಯಲಿದ್ದು ಮೂವರು ಪಕ್ಷೇತರರು ಹಾಗೂ ಸಮಾಜವಾದಿ ಪಕ್ಷದ ಒಂದಷ್ಟು ಬಂಡಾಯ ಶಾಸಕರ ಬೆಂಬಲ ಪಡೆದು ಇನ್ನುಳಿದ ಎರಡು ಸ್ಥಾನಗಳನ್ನೂ ಗೆಲ್ಲುವುದು ಕೇಸರಿ ಪಕ್ಷದ ಗುರಿ. ಈ ಲೆಕ್ಕಾಚಾರ ಫಲ ನೀಡಿದರೆ ಸಮಾಜವಾದಿ ಪಕ್ಷದ ಜಯಾ ಬಚ್ಚನ್‌, ಬಿಎಸ್ಪಿಯ ಭೀಮರಾವ್‌ ಅಂಬೇಡ್ಕರ್‌ ಇಬ್ಬರೂ ಸೋಲುವುದು ನಿಶ್ಚಿತ. ಬಿಜೆಪಿಯ ಒಬ್ಬ ಅಭ್ಯರ್ಥಿ ಉಮೇದುವಾರಿಕೆ ಹಿಂಪಡೆಯಲಿದ್ದಾರೆ.

ಸದ್ಯದ ಲೆಕ್ಕದ ಪ್ರಕಾರ ಸಮಾಜವಾದಿ ಪಕ್ಷ 47 ಶಾಸಕರನ್ನು ಹೊಂದಿರುವುದರಿಂದ ಆ ಪಕ್ಷದ ಏಕೈಕ ಅಭ್ಯರ್ಥಿ ಜಯಾ ಬಚ್ಚನ್‌ ಸುಲಭವಾಗಿ ಗೆಲ್ಲಬಲ್ಲರು. ಎಸ್ಪಿಯ ಹೆಚ್ಚುವರಿ 10 ಮತಗಳಷ್ಟೇ ಅಲ್ಲದೇ, ಅನಿಲ್‌ ಅಗರ್ವಾಲ್‌ ಪ್ರಭಾವದಿಂದ ಮತ್ತಷ್ಟು ಮತಗಳನ್ನು ಸೆಳೆದುಕೊಳ್ಳಲು ಸಾಧ್ಯವಾದರೆ ಬಿಜೆಪಿ ಅಭ್ಯರ್ಥಿಗಳ ಹಾದಿ ಸುಗಮವಾಗುತ್ತದೆ. ಬಿಎಸ್ಪಿ 19 ಶಾಸಕರನ್ನು ಹೊಂದಿದೆ. ಕಾಂಗ್ರೆಸ್‌ 7 ಹಾಗೂ ಆರ್‌ಎಲ್‌ಡಿ ಮತ್ತು ನಿಶಾದ್‌ ಪಾರ್ಟಿ ತಲಾ ಒಬ್ಬ ಶಾಸಕರನ್ನು ಹೊಂದಿದೆ. ಬಿಎಸ್ಪಿಯು ತನ್ನ 19 ಶಾಸಕರು ಹಾಗೂ ಎಸ್ಪಿಯ ಹೆಚ್ಚುವರಿ 10, ಕಾಂಗ್ರೆಸ್‌ನ 7, ಆರ್‌ಎಲ್‌ಡಿಯ 1, ನಿಶಾದ್‌ ಪಾರ್ಟಿಯ 1 ಮತ (ಒಟ್ಟು 38) ತನಗೆ ದಕ್ಕುವುದು ನಿಶ್ಚಿತ ಎಂಬ ಇರಾದೆಯಲ್ಲಿ ಬಿಎಸ್ಪಿಯ ಮಾಯಾವತಿ ಇದ್ದಾರೆ.

Comments are closed.