ರಾಷ್ಟ್ರೀಯ

ಉತ್ತರ ಬಂಗಾಳ ವಿವಿ ಕ್ಯಾಂಪಸ್‌ನಲ್ಲಿ ದೆವ್ವದ ಕಾಟ !

Pinterest LinkedIn Tumblr

ಪ.ಬಂಗಾಳ: ಉತ್ತರ ಬಂಗಾಳ ವಿಶ್ವವಿದ್ಯಾಲಯದ ಸಾಲ್ ಅರಣ್ಯ ಪ್ರದೇಶದಲ್ಲಿ ಬಿಳಿ ಬಟ್ಟೆ ತೊಟ್ಟ ದೆವ್ವ ಓಡಾಡುತ್ತಿದೆ ಎಂಬ ಸುದ್ದಿ ಹಬ್ಬಿದೆ. ಇದಕ್ಕೆ ಸಂಬಂಧಿಸಿದ ಫೋಟೋವೊಂದನ್ನು ಜನವರಿ 22ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಬಳಿಕ ಅದು ವೈರಲ್ ಆಗಿ ದೆವ್ವದ ಸುದ್ದಿ ಇನ್ನಷ್ಟು ಹಬ್ಬಿತ್ತು.

ಈ ಘಟನೆಯ ಬಳಿಕ ಆ ರಸ್ತೆಯಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಓಡಾಡುವುದನ್ನೇ ಬಿಟ್ಟಿದ್ದರು. ರಾತ್ರಿಹೊತ್ತು ಅಲ್ಲಿನ ಅಕ್ಕಪಕ್ಕದ ಮನೆಗಳಿಗೂ ವಿಚಿತ್ರ ಸದ್ದುಗಳು ಕೇಳಿಸುತ್ತಿದ್ದ ಕಾರಣ ಜನ ಇನ್ನಷ್ಟು ಭಯಬೀತಗೊಂಡಿದ್ದರು. ಆದರೆ ಮಾನವಶಾಸ್ತ್ರದ ವಿದ್ಯಾರ್ಥಿಗಳು ಮಾತ್ರ ಈ ದೆವ್ವಕ್ಕೆ ಸೊಪ್ಪುಹಾಕುತ್ತಿರಲಿಲ್ಲ.

ಈ ದೆವ್ವದ ಸುದ್ದಿ ಹಬ್ಬಿದ ಕಾರಣ ಜನ ಅದನ್ನು ನೋಡಲು ವಿವಿ ಕ್ಯಾಂಪಸ್‌ಗೆ ತಂಡೋಪತಂಡವಾಗಿ ಆಗಮಿಸಲು ಆರಂಭಿಸಿದರು. ಈ ದೆವ್ವವನ್ನು ರಾತ್ರಿ ಹೊತ್ತು ನೋಡಬೇಕೆಂದು ಜನ ಬರತೊಡಗಿದರು. ದೆವ್ವ ನೋಡಲು ಬರುತ್ತಿದ್ದ ಜನರನ್ನು ನಿಯಂತ್ರಿಸಲು ವಿವಿ ಆಡಳಿತ ಮಂಡಳಿ ಬೇಸತ್ತು, 7 ಮಂದಿ ಸೆಕ್ಯುರಿಟಿ ಗಾರ್ಡ್‌ಗಳನ್ನೂ ನೇಮಿಸಿತು. ಈ ಬಗ್ಗೆ ಮತಿಗಾರ ಪೊಲೀಸ್ ಠಾಣೆಗೂ ವರದಿ ನೀಡಿತು.

ಈ ಬಗ್ಗೆ ವಿವಿ ಆಡಳಿತ ಮಂಡಳಿ ನೀಡಿರುವ ಸ್ಪಷ್ಟೀಕರಣ ಈ ರೀತಿ ಇದೆ. ‘ಈ ಚಿತ್ರ ನಕಲಿ. ಮೊಬೈಲ್ ಅಪ್ಲಿಕೇಷನ್ ಬಳಸಿ ಈ ದೆವ್ವದ ಫೋಟೋ ಚಿತ್ರೀಕರಿಸಲಾಗಿದೆ’ ಎಂದಿದೆ. ಅಷ್ಟೇ ಅಲ್ಲದೆ ಸಾಲ್ ಅರಣ್ಯ ಪ್ರದೇಶಕ್ಕೆ ಹೋಗಿ ಅದೇ ಜಾಗದಲ್ಲಿ ಇದೇ ರೀತಿಯ ಫೋಟೋ ಮತ್ತು ವಿಡಿಯೋವನ್ನು ತೆಗೆದು ತೋರಿಸಿದೆ.

ಸೆಕ್ಯುರಿಟಿ ಅಧಿಕಾರಿ ಹಾಗೂ ಇತಿಹಾಸ ಅಧ್ಯಾಪಕರಾಗಿರುವ ಸುದಶ್ ಲಮ ಹೇಳುವುದೇನೆಂದರೆ, ‘ಈ ಫೋಟೋ ಯಾರು ಅಪ್‍ಲೋಡ್ ಮಾಡಿದರು ಎಂದು ಗೊತ್ತಾಗಿಲ್ಲ. ಅವರ ಉದ್ದೇಶವೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಈಗ ಸೆಕ್ಯುರಿಟಿಗಳು ತುಂಬಾ ಸಮಸ್ಯೆಗಳನ್ನು ಎದುರಿಸುವಂತಾಗಿದೆ’ ಎಂದಿದ್ದಾರೆ.

ಹಾಸ್ಟೆಲ್ ವಿದ್ಯಾರ್ಥಿ ಸಿಮ್ರಾನ್ ಪರ್ವೀನ್ ಹೇಳುವುದೇನೆಂದರೆ, ‘ನಾವು ಭಯಭೀತರಾಗಿದ್ದೆವು. ಇದು ನಿಜವೋ ಸುಳ್ಳೋ ನಮಗೆ ಗೊತ್ತಿಲ್ಲ’ ಎಂದಿದ್ದಾರೆ. ಈ ಬಗ್ಗೆ ವಿವಿ ಆಡಳಿತ ಮಂಡಳಿ ತನಿಖೆ ಮಾಡಿ ಈ ಕೃತ್ಯ ಮಾಡಿರುವುದು ಯಾರು ಎಂಬುದನ್ನು ಪತ್ತೆ ಹಚ್ಚಬೇಕು ಎಂದಿದ್ದಾರೆ ಕಾರ್ಯದರ್ಶಿ (ಡಾರ್ಜಿಲಿಂಗ್) ಪ್ರಬೀರ್ ಪಾಂಡಾ.

Comments are closed.