ರಾಷ್ಟ್ರೀಯ

ಕಾಸ್ ಗಂಜ್ ಗಲಭೆ; ಅಯ್ಯೋ ನಾನ್ ಸತ್ತಿಲ್ಲ, ಹಿಂಸಾಚಾರ ನಡೆಸ್ಬೇಡಿ!

Pinterest LinkedIn Tumblr


ಕಾಸಗಂಜ್‌: ಕಾಸ್‌ಗಂಜ್‌ ಹಿಂಸೆ ಹೆಚ್ಚಲು ಕಾರಣರಾಗಿದ್ದ ರಾಹುಲ್‌ ಉಪಾಧ್ಯಾಯ ಎಂಬವರ ಸಾವಿನ ಸುದ್ದಿ ಕೇವಲ ವದಂತಿ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ ಒಂದು ದಿನದ ತರುವಾಯ ರಾಹುಲ್‌ ಉಪಾಧ್ಯಾಯ ಸ್ವತಃ “ನಾನು ಸತ್ತಿಲ್ಲ; ಜೀವಂತ ಇದ್ದೇನೆ’ ಎಂದು ಹೇಳಿದ್ದಾರೆ.

“ಕಾಸ್‌ಗಂಜ್‌ ಹಿಂಸೆಯಲ್ಲಿ ನಾನು ಮೃತಪಟ್ಟಿರುವುದಾಗಿ ಸಾಮಾಜಿಕ ಜಾಲ ತಾಣದಲ್ಲಿ ಹಬ್ಬಿಕೊಂಡ ವದಂತಿಯ ಬಗ್ಗೆ ನನ್ನೋರ್ವ ಸ್ನೇಹಿತ ನನಗೆ ತಿಳಿಸಿದ. ಕಾಸ್‌ಗಂಜ್‌ನಲ್ಲಿ ದೊಂಬಿ, ಹಿಂಸೆ ಭುಗಿಲೆದ್ದಾಗ ನಾನು ಅಲ್ಲಿ ಇರಲಿಲ್ಲ; ನಾನು ನನ್ನ ಗ್ರಾಮಕ್ಕೆ ಹೋಗಿದ್ದೆ. ನಾನು ಸತ್ತಿದ್ದೇನೆ ಎಂಬ ವದಂತಿಗಳು ಕೇವಲ ಸುಳ್ಳು; ನಾನು ಜೀವಂತ ಇದ್ದೇನೆ ಮತ್ತು ಆರೋಗ್ಯದಿಂದ ಇದ್ದೇನೆ’ ಎಂದು ರಾಹುಲ್‌ ಹೇಳಿದ್ದಾರೆ.

ಈ ನಡುವೆ ರಾಹುಲ್‌ ಸಾವಿನ ವದಂತಿಯನ್ನು ಹರಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಆಲಿಗಢ ವಲಯದ ಇನ್ಸ್‌ಪೆಕ್ಟರ್‌ ಜನರಲ್‌ ಸಂಜೀವ್‌ ಗುಪ್ತಾ ತಿಳಿಸಿದ್ದಾರೆ.

ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕಾಸ್‌ಗಂಜ್‌ನಲ್ಲಿ ಭುಗಿಲೆದ್ದಿದ್ದ ಹಿಂಸೆಗೆ ರಾಹುಲ್‌ ಉಪಾಧ್ಯಾಯ ಅವರೊಂದಿಗೆ ಚಂದನ್‌ ಗುಪ್ತಾ ಎಂಬವರು ಹಿಂಸೆಗೆ ಬಲಿಯಾಗಿದ್ದಾರೆ ಎಂಬ ವದಂತಿ ತೀವ್ರವಾಗಿ ಹರಡಿತ್ತು.

ರಾಹುಲ್‌ ಅವರ ಸಾವಿನ ವದಂತಿಯಿಂದ ಕೋಪೋದ್ರಿಕ್ತರಾಗಿದ್ದ ಜನಸಮೂಹ ಮೂರು ದಿನಗಳ ಕಾಲ ಕಾಸ್‌ಗಂಜ್‌ನಲ್ಲಿ ಹಿಂಸೆ, ದೊಂಬಿ ನಡೆಸಿತ್ತು. ಮೊನ್ನೆ ಭಾನುವಾರ ಈ ಸಂಬಂಧ 30 ಮಂದಿಯನ್ನು ಕೊಲೆ ಆಪಾದನೆ ಮೇಲೆ ಬಂಧಿಸಲಾಗಿತ್ತು. ಅಲ್ಲದೆ ಸುಮಾರು 51 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ಗಣರಾಜ್ಯೋತ್ಸವ ದಿನದಂದು ತಿರಂಗ ಯಾತ್ರೆ ನಡೆಯುತ್ತಿದ್ದ ವೇಳೆ ಎರಡು ಸಮುದಾಯಗಳ ನಡುವೆ ಉಂಟಾಗಿದ್ದ ಸಂಘರ್ಷಕ್ಕೆ ಒಬ್ಬ ಬಲಿಯಾಗಿ ಇನ್ನಿಬ್ಬರು ಗಾಯಗೊಂಡಿದ್ದರು.

-ಉದಯವಾಣಿ

Comments are closed.