ರಾಷ್ಟ್ರೀಯ

ಪುಟ್ಟ ವಿದ್ಯಾರ್ಥಿ 2ನೇ ಬಾರಿ ದಾಲ್ ಕೇಳಿದ್ದಕ್ಕೆ ಮಾಡಿದ್ದೇನು ಗೊತ್ತಾ

Pinterest LinkedIn Tumblr


ಡಿನ್ ಡೋರಿ(ಮಧ್ಯಪ್ರದೇಶ):ಮಧ್ಯಾಹ್ನದ ಬಿಸಿಯೂಟದಲ್ಲಿ ಹಲ್ಲಿ ಮರಿ ಪತ್ತೆ, ಹಾವಿನಮರಿ ಪತ್ತೆ, ಮಕ್ಕಳು ಅಸ್ವಸ್ಥ ಎಂಬ ಸುದ್ದಿ ಓದಿರುತ್ತೀರಿ. ಆದರೆ ಒಂದನೇ ತರಗತಿಯ ಪುಟ್ಟ ಬಾಲಕನೊಬ್ಬ 2ನೇ ಬಾರಿ ದಾಲ್(ತೊಗರಿಬೇಳೆ ಸಾಂಬಾರ್) ಹಾಕಿ ಎಂದು ಕೇಳಿದ್ದಕ್ಕೆ ಅಡುಗೆ ಕೆಲಸದಾಕೆ ಬಿಸಿ ದಾಲ್ ಅನ್ನು ಬಾಲಕನ ಮುಖದ ಮೇಲೆ ಸುರಿದ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಬಿಸಿ,ಬಿಸಿ ದಾಲ್ ಸಾಂಬಾರ್ ಬಾಲಕನ ಮುಖದ ಮೇಲೆ ಸುರಿದ ಪರಿಣಾಮ ಮುಖ, ಕೆನ್ನೆ, ಎದೆ ಹಾಗೂ ಹಿಂಭಾಗ ಸುಟ್ಟು ಹೋಗಿದ್ದು, ಪ್ರಿನ್ಸ್ ಮೆಹ್ರಾ ಎಂಬ 1ನೇ ತರಗತಿ ವಿದ್ಯಾರ್ಥಿಯನ್ನು ಭೋಪಾಲ್ ನಿಂದ 480 ಕಿಮೀ ದೂರದಲ್ಲಿರುವ ಡಿನ್ ಡೋರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

ಮಧ್ಯಾಹ್ನದ ಊಟದ ವೇಳೆ ಡಿನ್ ಡೋಂರಿ ಪ್ರಾಥಮಿಕ ಶಾಲೆಯಲ್ಲಿ ಪ್ರಿನ್ಸ್ ಮೆಹ್ರಾ 2ನೇ ಬಾರಿ ದಾಲ್ ಹಾಕುವಂತೆ ಕೇಳಿದ್ದ. ಇದರಿಂದ ಕುಪಿತಗೊಂಡ ಕೆಲಸದಾಕೆ ನೆಮಾವತಿ ಬಾಯ್, ಆತನ ಮುಖದ ಮೇಲೆ ಬಿಸಿ ದಾಲ್ ಸುರಿದಿರುವುದಾಗಿ ಬಾಲಕನ ಅಜ್ಜಿ ಆರೋಪಿಸಿದ್ದಾರೆ.

ಈ ಘಟನೆ ಜನವರಿ 23ರಂದು ನಡೆದಿದ್ದು, ಜನವರಿ 24ರಂದು ದೂರು ನೀಡಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ನ್ಯೂಸ್ ಏಜೆನ್ಸಿ ಎಎನ್ ಐ ವರದಿ ಮಾಡಿದೆ.

-ಉದಯವಾಣಿ

Comments are closed.