ರಾಷ್ಟ್ರೀಯ

‘ಬೆಂಗಳೂರು ಬಂದ್‌ ಸವಾಲು’ ಸ್ವೀಕರಿಸಲು ಬಿಜೆಪಿ ರೆಡಿ

Pinterest LinkedIn Tumblr

ಸುಭಾಷ್‌ ಹೂಗಾರ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿಯ ದಿನವೇ ‘ಬೆಂಗಳೂರು ಬಂದ್‌’ಗೆ ಕರೆ ನೀಡಿರುವ ಕನ್ನಡಪರ ಸಂಘಟನೆಗಳ ಸವಾಲನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಈ ಬಂದ್‌ನಿಂದ ಉದ್ಭವಿಸಬಹುದಾದ ಸ್ಥಿತಿಯ ಹೊರತಾಗಿಯೂ ಫೆ.4ರಂದು ಪ್ರಧಾನಿ ಭಾಗವಹಿಸಲಿರುವ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭವನ್ನು ಅಭೂತಪೂರ್ವಗೊಳಿಸಲು ತಯಾರಿ ಆರಂಭಿಸಿದೆ.

ರಾಜ್ಯ ವಿಧಾನಸಭೆ ಚುನಾವಣೆ ಸಮೀಪವಾಗುತ್ತಿದ್ದಂತೆ ಕರ್ನಾಟಕದ ಮೇಲೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಗಮನ ಕೂಡ ಹೆಚ್ಚಾಗಿದ್ದು, ಪಕ್ಷದ ದೈನಂದಿನ ಚಟುವಟಿಕೆಗಳ ಮೇಲೂ ನಿಗಾ ಇರಿಸಿದ್ದಾರೆ ಎನ್ನಲಾಗಿದೆ.

ಈ ನಡುವೆ ಮಹದಾಯಿ ವಿಚಾರವಾಗಿ ಪ್ರಧಾನಿ ಮಧ್ಯಸ್ಥಿಕೆ ಆಗ್ರಹಿಸಿ ಅವರ ರ‍್ಯಾಲಿಯ ದಿನದಂದೇ ಬಂದ್‌ ಕರೆ ನೀಡಿರುವುದರ ಹಿಂದೆ ಕಾಂಗ್ರೆಸ್‌ ಪಕ್ಷದ ಹುನ್ನಾರವಿದೆ ಎಂಬ ಅಭಿಪ್ರಾಯ ಹೊಂದಿರುವ ಅಮಿತ್‌ ಶಾ ಅವರು, ಪ್ರಧಾನಿ ರ‍್ಯಾಲಿ ಕುರಿತಂತೆ ಚರ್ಚಿಸಲು ದಿಲ್ಲಿಯಲ್ಲಿ ಭಾನುವಾರ ಸಂಜೆ ಪಕ್ಷದ ಹಿರಿಯ ನಾಯಕರ ಜತೆ ಮಹತ್ವದ ಸಭೆ ನಡೆಸಿದ್ದು, ಆ ಸಭೆಯ ಮುಂದುವರಿದ ಭಾಗವಾಗಿ ಸೋಮವಾರವೂ ಕೇಂದ್ರ ಸಚಿವ ಅನಂತಕುಮಾರ್‌ ನಿವಾಸದಲ್ಲಿ ಮತ್ತೊಂದು ಸಭೆ ನಡೆಯಿತು.

ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ರಾಜ್ಯ ಉಸ್ತುವಾರಿ ಪಿ. ಮುರಳಿಧರ ರಾವ್‌, ರಾಷ್ಟ್ರೀಯ ಸಹ ಸಂಘಟನಾ ಕಾರ‍್ಯದರ್ಶಿ ಬಿ.ಎಲ್‌.ಸಂತೋಷ್‌, ರಾಜ್ಯ ಚುನಾವಣಾ ಉಸ್ತುವಾರಿ ಹೊತ್ತಿರುವ ಸಚಿವರಾದ ಪ್ರಕಾಶ್‌ ಜಾವಡೇಕರ್‌ ಮತ್ತು ಪಿಯೂಷ್‌ ಗೋಯಲ್‌ ಭಾಗವಹಿಸಿದ ಭಾನುವಾರದ ಸಭೆಯಲ್ಲಿ ಮಹದಾಯಿ ವಿಷಯದಲ್ಲಿ ಪಕ್ಷಕ್ಕೆ ಉಂಟಾಗಿರುವ ಇಕ್ಕಟ್ಟಿನಿಂದ ನಿಧಾನಕ್ಕೆ ಹೊರಗೆ ಬರುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತಾದರೂ ಫೆ.4ರ ಪ್ರಧಾನಿ ರ‍್ಯಾಲಿ ಯಶಸ್ವಿಗೊಳಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ತೀರ್ಮಾನಿಸಲಾಯಿತು ಎಂದು ಮೂಲಗಳು ಹೇಳಿವೆ.

ಪಕ್ಷದ ರಾಜ್ಯ ನಾಯಕರ ನಡುವೆ ಇರುವ ಭಿನ್ನಾಭಿಪ್ರಾಯಗಳಿಂದಲೂ ಪಕ್ಷದ ಮೇಲೆ ಮೋಡ ಕವಿದಂಥ ವಾತಾವರಣಕ್ಕೆ ಕಾರಣವಾಗಿವೆ. ಎಷ್ಟೋ ಬಾರಿ ಮಾಧ್ಯಮಗಳಲ್ಲಿ ಈ ಗುಂಪುಗಾರಿಕೆಯೇ ಹೆಚ್ಚು ಚರ್ಚೆಯಾಗಿ ಸಕಾರಾತ್ಮಕ ಅಂಶಗಳೆಲ್ಲ ಗೌಣವಾಗುತ್ತಿವೆ. ಈ ಕಾರಣಕ್ಕಾಗಿ ಪಕ್ಷದ ನಾಯಕರು ತಮ್ಮ ಭಿನ್ನಾಭಿಪ್ರಾಯಗಳನ್ನು ಯಾವುದೇ ಕಾರಣಕ್ಕೂ ಬಹಿರಂಗವಾಗಿ ವ್ಯಕ್ತ ಮಾಡಬಾರದು, ಏನೇ ಸಮಸ್ಯೆ ಇದ್ದರೂ ಪಕ್ಷದ ವೇದಿಕೆಯಲ್ಲಿ ಮಾತ್ರ ಚರ್ಚೆಯಾಗಬೇಕು ಎಂದು ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಪ್ರಧಾನಿ ರ‍್ಯಾಲಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಅಮಿತ್‌ ಶಾ ನೀಡಿರುವ ಸೂಚನೆಗಳನ್ನು ಈ ಎಲ್ಲ ನಾಯಕರಿಗೆ ಸಂತೋಷ್‌ ಮತ್ತು ಅನಂತಕುಮಾರ್‌ ವಿವರಿಸಿದರು ಎನ್ನಲಾಗಿದ್ದು, ಪ್ರತಿಯೊಬ್ಬ ನಾಯಕರ ಜವಾಬ್ದಾರಿ ಏನೇನು ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಗೊತ್ತಾಗಿದೆ.

Comments are closed.