ರಾಷ್ಟ್ರೀಯ

ನೋಟ್ ನಿಷೇಧಿಸಿದ ನಂತರ ಬ್ಯಾಂಕ್’ಗಳಲ್ಲಿ ಅಕ್ರಮ ವ್ಯವಹಾರ: ದೇಶಾದ್ಯಂತ 27 ಅಧಿಕಾರಿಗಳ ಅಮಾನತು

Pinterest LinkedIn Tumblr

bank

ನವದೆಹಲಿ: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಬ್ಯಾಂಕ್ ಸಿಬ್ಬಂದಿ ಅಕ್ರಮವಾಗಿ ಕಪ್ಪು ಹಣ ಬಿಳಿ ಮಾಡಲು ಸಹಕರಿಸುತ್ತಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಅಕ್ರಮದಲ್ಲಿ ಭಾಗಿಯಾದ ಆರೋಪದ ಮೇಲೆ ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕ್ ಗಳ 27 ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಆರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು ಸೇರಿದಂತೆ ಹಲವು ಕಡೆ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು, ದಾಳಿಯ ವೇಳೆ 5.7 ಕೋಟಿ ರುಪಾಯಿ ಹೊಸ ನೋಟುಗಳು ಪತ್ತೆಯಾಗಿವೆ. ಕೆಲವು ಬ್ಯಾಂಕ್ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದು, ಆರ್ ಬಿಐ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳಲಾಗಿದ್ದು, ಸಾರ್ವಜನಿಕ ವಲಯದ ವಿವಿಧ ಬ್ಯಾಂಕ್ ಗಳ 27 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಆರು ಅಧಿಕಾರಿಗಳನ್ನು ಸೂಕ್ಷ್ಮವಲ್ಲದ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಪ್ರಾಮಾಣಿಕ ಹಣಕಾಸು ವ್ಯವಹಾರಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಯತ್ನಿಸುತ್ತಿದ್ದು, ಒಂದು ವೇಳೆ ಕಾನೂನ ಬಾಹಿರ ಮತ್ತು ಅಕ್ರಮ ವ್ಯವಹಾರಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

Comments are closed.