ನವದೆಹಲಿ: ನಿಮ್ಮಲ್ಲಿರುವ ಕಪ್ಪುಹಣವನ್ನು ಬದಲಾಯಿಸಲು ಬೇರೆಯವರ ಖಾತೆಗೆ ಹಣ ಹಾಕಿದ್ದೀರಾ? ಹಾಗಾದರೆ ನೀವೂ ಅಪಾಯಕ್ಕೆ ಸಿಲುಕೋದು ಖಚಿತ. ನಿಮ್ಮ ಪರಿಚಿತರು, ಸಂಬಂಧಿಕರು, ತೀರಾ ಆಪ್ತರ ಖಾತೆಗೆ ಹಣ ಹಾಕಿದರೆ ನೀವು ಜೈಲಿಗೆ ಹೋಗೋದು ಗ್ಯಾರಂಟಿ.
ಹೌದು. ಕಪ್ಪು ಹಣ ಹೊಂದಿದ್ದ ವ್ಯಕ್ತಿಗಳು ಬೇನಾಮಿ ವ್ಯಕ್ತಿಗಳ ಖಾತೆಗೆ ಹಣ ಜಮೆ ಮಾಡಿ ಸಿಕ್ಕಿಬಿದ್ದರೆ ಅವರ ವಿರುದ್ಧ ಬೇನಾಮಿ ವರ್ಗಾವಣೆ ಕಾಯ್ದೆ 1998 ಅಡಿ ಪ್ರಕರಣ ದಾಖಲಿಸಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಈ ಕಾಯ್ದೆ ಅಡಿ ಪ್ರಕರಣ ದಾಖಲಾದರೆ ಗರಿಷ್ಟ 7 ವರ್ಷ ಜೈಲು ಶಿಕ್ಷೆ ಆಗುವ ಸಾಧ್ಯತೆಯಿದೆ.
500, 1 ಸಾವಿರ ರೂ. ಚಲಾವಣೆ ನಿಷೇಧವಾದ ಬಳಿಕ ದೇಶದ ಹಲವು ಕಡೆ 200 ಕೋಟಿ ರೂ. ಹಣ ಅಕ್ರಮವಾಗಿ ಬೇನಾಮಿ ಖಾತೆಗೆ ಜಮೆ ಆಗಿದೆ. ಈ ಖಾತೆಯನ್ನು ಆದಾಯ ಇಲಾಖೆ ಪರಿಶೀಲಿಸಿದಾಗ 30 ಪ್ರಕರಣಗಳು ಸಂಶಯಾಸ್ಪದವಾಗಿದ್ದು ಮತ್ತಷ್ಟು ತನಿಖೆ ಆರಂಭವಾಗಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಬಹಳಷ್ಟು ಜನರು ಬೇರೊಬ್ಬರ ಖಾತೆಗೆ ಹಣವನ್ನು ಜಮೆ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ತನಿಖೆ ವೇಳೆ ಜಮೆಯಾದ ಹಣದ ಮೂಲದ ಬಗ್ಗೆ ಸರಿಯಾದ ಮಾಹಿತಿ ಸಿಗದೇ ಇದ್ದರೆ ಹಣವನ್ನು ಜಮೆ ಮಾಡಿದ ವ್ಯಕ್ತಿಗೂ ಖಾತೆಯನ್ನು ಹೊಂದಿದ ವ್ಯಕ್ತಿಗೆ 1 ರಿಂದ 7 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಲು ಈ ಕಾಯ್ದೆ ಅಡಿ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಕಪ್ಪು ಹಣವನ್ನು ಬದಲಾವಣೆ ಮಾಡಲು ಕೆಲವೆಡೆ ಜನ ಧನ್ ಅಕೌಂಟ್ ಬಳಸುತ್ತಿದ್ದಾರೆ, ಇನ್ನು ಕೆಲವೆಡೆ ಪರಿಚಿತರ ಅಕೌಂಟ್ ಬಳಕೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟಲು ಕೇಂದ್ರ ಹಣಕಾಸು ಸಚಿವಾಲಯ ಕಠಿಣ ಕ್ರಮಗಳನ್ನು ಕೈಗೊಂಡಿದೆ.