ರಾಷ್ಟ್ರೀಯ

ಜುಲೈ 7 ರಿಂದ ಪ್ರಧಾನಿ ಮೋದಿ 4 ಆಫ್ರಿಕಾ ರಾಷ್ಟ್ರಗಳ ಪ್ರವಾಸ

Pinterest LinkedIn Tumblr

modi11

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜುಲೈ 7 ರಿಂದ 11 ರವರೆಗೆ ದಕ್ಷಿಣ ಆಫ್ರಿಕಾ, ಮೊಜಾಂಬಿಕ್, ತಾಂಜೇನಿಯಾ ಮತ್ತು ಕೀನ್ಯಾದ ಪ್ರವಾಸಕ್ಕೆ ತೆರಳಲಿದ್ದಾರೆ.

ನೈಸರ್ಗಿಕ ಸಂಪನ್ಮೂಲಗಳು ಹೆಚ್ಚಾಗಿರುವ ಆಫ್ರಿಕಾ ರಾಷ್ಟ್ರಗಳಲ್ಲಿ ಚೀನಾ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಫ್ರಿಕಾ ರಾಷ್ಟ್ರಗಳ ಪ್ರವಾಸಕ್ಕೆ ಮಹತ್ವ ಬಂದಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಜೂನ್ನಲ್ಲಿ ಆಫ್ರಿಕಾ ರಾಷ್ಟ್ರಗಳಿಗೆ ಭೇಟಿ ನೀಡಿ ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಮಹತ್ವದ ಮಾತುಕತೆ ನಡೆಸಿದ್ದರು.

ನಾಲ್ಕು ರಾಷ್ಟ್ರಗಳ ಪ್ರವಾಸದಿಂದ ಭಾರತ ಮತ್ತು ಆಫ್ರಿಕಾ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.

ಭಾರತ ಮತ್ತು ಆಫ್ರಿಕಾ ರಾಷ್ಟ್ರಗಳ ನಡುವೆ ಪ್ರಸ್ತುತ 75 ಬಿಲಿಯನ್ ಡಾಲರ್ ವಹಿವಾಟು ನಡೆಯುತ್ತಿದೆ. ಜತೆಗೆ ಭಾರತ 7.4 ಬಿಲಿಯನ್ ಡಾಲರ್ ಅನುದಾನದೊಂದಿಗೆ ಆಫ್ರಿಕಾದ 41 ರಾಷ್ಟ್ರಗಳಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ. ಕಳೆದ 4 ವರ್ಷಗಳಲ್ಲಿ 41 ರಾಷ್ಟ್ರಗಳಲ್ಲಿ ಸುಮಾರು 140 ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಜುಲೈ 7 ರಂದು ಮೋದಿ ಮೊಜಾಂಬಿಕ್ಗೆ ಭೇಟಿ ನೀಡಲಿದ್ದು, ನಂತರ ಜುಲೈ 8 ಮತ್ತು 9 ರಂದು ದಕ್ಷಿಣ ಆಫ್ರಿಕಾಗೆ ತೆರಳಲಿದ್ದಾರೆ. ಜುಲೈ 10 ರಂದು ತಾಂಜೇನಿಯಾಗೆ ಭೇಟಿ ನೀಡಲಿರುವ ಮೋದಿ ಜುಲೈ 11 ರಂದು ಕೀನ್ಯಾಗೆ ಭೇಟಿ ನೀಡಿ ಭಾರತಕ್ಕೆ ವಾಪಸ್ಸಾಗಲಿದ್ದಾರೆ.

Comments are closed.