ರಾಷ್ಟ್ರೀಯ

ವಜ್ರದ ವ್ಯಾಪಾರೋದ್ಯಮಿ 472 ಹೆಣ್ಮಕ್ಕಳ ಹೆಮ್ಮೆಯ ಡ್ಯಾಡ್

Pinterest LinkedIn Tumblr

19-mass-wedding-webಅಹಮದಾಬಾದ್: ಅಪ್ಪಂದಿರ ದಿನದಂದು ಇಲ್ಲಿನ ವ್ಯಾಪಾರೋದ್ಯಮಿ ಮಹೇಶ ಸಾವನಿ ಅವರಿಗೆ ಅವರು ಮದುವೆ ಮಾಡಿಕೊಟ್ಟ 472 ಮಂದಿ ಹೆಣ್ಮಕ್ಕಳಿಂದ ಶುಭಾಶಯಗಳು ಬರುತ್ತವೆ. ಈ ಹೆಣ್ಮಕ್ಕಳೆಲ್ಲಾ ವಾಸ್ತವವಾಗಿ ಅವರ ಮಕ್ಕಳೇನಲ್ಲ, ಆದರೆ ಅಪ್ಪಂದಿರನ್ನು ಕಳಕೊಂಡ ಹೆಣ್ಮಕ್ಕಳು. ಕಳೆದ ಹಲವಾರು ವರ್ಷಗಳಿಂದ ಅಪ್ಪಂದಿರನ್ನು ಕಳೆದುಕೊಂಡಿರುವ ಹೆಣ್ಮಕ್ಕಳಿಗೆ ಮದುವೆ ಮಾಡಿಕೊಟ್ಟಿರುವ ಸಾವನಿ ಈ ಹೆಣ್ಮಕ್ಕಳ ಪಾಲಿಗೆ ಪಿತೃ ಸಮಾನ.

ಈಗ 47ರ ಹರೆಯಲ್ಲಿರುವ ಸಾವನಿ ಅವರಿಗೆ 10 ವರ್ಷದ ತನ್ನ ಸಹೋದರ ಮೃತನಾದಾಗ ಆತನ ಹೆಣ್ಮಕ್ಕಳ ‘ಕನ್ಯಾದಾನ’ವನ್ನು ನೆರವೇರಿಸಬೇಕಾದ ಪ್ರಸಂಗ ಬಂದಿತ್ತು. ಈ ಘಟನೆ ಅವರ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿದುಬಿಟ್ಟಿತು. ಅಪ್ಪಂದಿರು ಇಲ್ಲದ ಹೆಣ್ಮಕ್ಕಳ ಮದುವೆಯನ್ನು ಯಾರು ನೆರವೇರಿಸುತ್ತಾರೆ ಎಂಬ ಚಿಂತನೆಯನ್ನು ಹುಟ್ಟುಹಾಕಿತು. 2008ರಿಂದ ಇಂತಹ ಅಪ್ಪಂದಿರು ಇಲ್ಲದ ಹೆಣ್ಮಕ್ಕಳ ಮದುವೆಗೆ ನೆರವಾಗುವ ಕಾಯಕವನ್ನು ಅವರು ಆರಂಭಿಸಿದರು. ಅಂದಿನಿಂದ ಪ್ರತಿವರ್ಷವೂ ಇಂತಹ ಹೆಣ್ಮಕ್ಕಳ ಸಾಮೂಹಿಕ ಮದುವೆಗಳನ್ನು ಸಂಘಟಿಸಿದರು.

ಭಾವನಗರದ ರಪಾರ್ದ ಗ್ರಾಮದ ನಿವಾಸಿಯಾದ ಸಾವನಿ ವಾಸ್ತವವಾಗಿ ವಜ್ರದ ವ್ಯಾಪಾರಿ. ಅವರ ತಂದೆ ವಲ್ಲಭಭಾಯಿ ಅವರು 40 ವರ್ಷಗಳ ಹಿಂದೆ ಈ ನಗರಕ್ಕೆ ಬಂದು ನೆಲೆಸಿ, ವಜ್ರದ ಪಾಲಿಶ್ ಕೆಲಸ ಶುರುಮಾಡಿದ್ದರು. ಕ್ರಮೇಣ ಅವರೇ ಸ್ವಂತ ವಜ್ರದ ಅಂಗಡಿ ತೆರೆದಿದ್ದರು. ಈಗ ಸಾವನಿ ಕುಟುಂಬ ಎಷ್ಟು ಶ್ರೀಮಂತ ಎಂದರೆ ಪ್ರತಿಯೊಬ್ಬ ಹೆಣ್ಮಗಳ ಮದುವೆಗೂ 4 ಲಕ್ಷ ರೂಪಾಯಿ ವೆಚ್ಚ ಮಾಡುತ್ತದೆ. ಅವರ ನೆರವಿನಿಂದ ಮದುವೆಯಾಗಿ ಗೃಹಸ್ತಾಶ್ರಮ ಸೇರಿರುವ ಹೆಣ್ಮಕ್ಕಳೆಲ್ಲಾ ಅವರನ್ನು ತಮ್ಮ ತಂದೆಗಿಂತಲೂ ಮಿಗಿಲು ಎಂದೇ ಭಾವಿಸಿ ಗೌರವಿಸುತ್ತಾರೆ.

Comments are closed.