ಬೆಂಗಳೂರು: ಆರೋಪಿಗಳ ಹೆಜ್ಜೆ ಗುರುತಿನ ಬೆನ್ನತ್ತಿ ಕಳ್ಳ-ಖದೀಮರನ್ನು ಪತ್ತೆ ಮಾಡುವ ಪೊಲೀಸ್ ಶ್ವಾನಗಳ ನಿವೃತ್ತ ಜೀವನ ಜೈಲು ಕೈದಿಗಳಿಗಿಂತ ಹೀನಾಯ. ವಯಸ್ಸಾದ ನಂತರ ಪ್ರಾಣಿದಯಾ ಸಂಘಕ್ಕೆ ಸೇರುವ ಈ ಸಾಹಸಿ ಶ್ವಾನಗಳು ಬೋನಿನಲ್ಲಿ ಬಂಧಿಯಾಗಿ, ಕೊರಗಿ ಕೊರಗಿ ಪ್ರಾಣಬಿಡುತ್ತವೆ. ಇವುಗಳ ಕರುಣಾಜನಕ ಸ್ಥಿತಿ ಕಂಡು ಕೊನೆಗೂ ಕಣ್ಣು ತೆರೆದಿರುವ ಪೊಲೀಸ್ ಇಲಾಖೆ, ಪ್ರಾಣಿದಯಾ ಸಂಘಕ್ಕೆ ಕಳುಹಿಸುವ ಪದ್ಧತಿ ರದ್ದುಗೊಳಿಸಿ ಮನೆ ಭಾಗ್ಯ ದಯಪಾಲಿಸಿದೆ.
ಪೊಲೀಸ್ ತನಿಖೆಗೆ ಸಹಕರಿಸಲಾಗದ, ಮೂಳೆ ಮುರಿದ ಹಾಗೂ ವಯಸ್ಸಾದ ನಾಯಿಗಳನ್ನು ಇನ್ಮುಂದೆ ಪ್ರಾಣಿಪ್ರಿಯರು ಅಥವಾ ತರಬೇತಿ ಸಿಬ್ಬಂದಿಯೇ (ಹ್ಯಾಂಡ್ಲರ್ಸ್) ತೆಗೆದುಕೊಂಡು ಸಾಕಬಹುದೆಂಬ ನಿಯಮ ರೂಪಿಸಿರುವ ಇಲಾಖೆ, ಜೂ.17ರಂದು ಅಧಿಸೂಚನೆ ಹೊರಡಿಸಿದೆ. ಜತೆಗೆ ನಾಯಿ ಸಾಕಲು ಬೇಕಾಗುವ ಆರ್ಥಿಕ ವೆಚ್ಚ ನೀಡುವ ಬಗ್ಗೆಯೂ ಚಿಂತನೆ ನಡೆಸಿದೆ. ಬೆಂಗಳೂರು ಸೇರಿ ರಾಜ್ಯದಲ್ಲಿ 280 ಪೊಲೀಸ್ ನಾಯಿಗಳಿವೆ. ಪ್ರತಿ ನಾಯಿ ನೋಡಿಕೊಳ್ಳಲು ಇಬ್ಬರು ಸಿಬ್ಬಂದಿ ನಿಯೋಜಿಸಲಾಗಿದೆ.
ಇಲಾಖೆ ಸುಪರ್ದಿಯಲ್ಲಿರುವಷ್ಟೂ ದಿನ ಪ್ರತಿ ನಾಯಿಗೆ ಪೌಷ್ಟಿಕ ಆಹಾರ ಸೇರಿ ತಿಂಗಳಿಗೆ 20ರಿಂದ 30 ಸಾವಿರ ರೂ. ಖರ್ಚು ಮಾಡಲಾಗುತ್ತದೆ. ಇಲಾಖೆಯಲ್ಲಿ ಇರುವವರೆಗೆ ‘ರಾಜ ವೈಭೋಗ’ದಿಂದಿರುವ ಶ್ವಾನಗಳು ನಿವೃತ್ತಿಯಾದ ನಂತರ ಪ್ರಾಣಿದಯಾ ಸಂಘದ ಬೋನಿನಲ್ಲಿ ಇರಬೇಕಾಗುತ್ತದೆ.
ಯಾವ ತಳಿ ನಾಯಿ ಗಳಿವೆ?: ಆಲ್ಸೇಷಿ ಯನ್, ಡಾಬರ್ವುನ್ ಹಾಗೂ ಲ್ಯಾಬ್ರಡಾರ್ ತಳಿಗಳ ನಾಯಿಗಳನ್ನು ಇಲಾಖೆ ಯಲ್ಲಿ ಸಾಕಲಾಗುತ್ತಿದೆ. ಬೆಂಗಳೂರಲ್ಲಿ 65 ನಾಯಿಗಳಿದ್ದು, ನೋಡಿಕೊಳ್ಳಲು 150 ಸಿಬ್ಬಂದಿ ಇದ್ದಾರೆ. ಸಣ್ಣ ಮರಿಯಿಂದಲೆ ಪೊಲೀಸ್ ತರಬೇತಿ ನೀಡಲಾಗುತ್ತದೆ. ಕ್ರೖೆಂ ಪ್ರಕರಣಗಳ ತನಿಖೆಗೆ ಸಹಕಾರಿಯಾಗುವ ಜತೆಗೆ ರಾಷ್ಟ್ರಮಟ್ಟದ ಪ್ರದರ್ಶನಗಳಲ್ಲೂ ಪಾಲ್ಗೊಳ್ಳುವ ಮೂಲಕ ರಾಜ್ಯಕ್ಕೆ ಪ್ರಶಸ್ತಿ ತಂದುಕೊಟ್ಟ ಶ್ವಾನಗಳೂ ಇವೆ. ಇಂಥ ನಾಯಿಗಳಿಗೆ ಕೊನೆಗಾಲದಲ್ಲಿ ಸೂಕ್ತ ಆಸರೆ ನೀಡಬೇಕಾದ ಅಗತ್ಯವಿದೆ ಎಂದು ಹಿರಿಯ ಅಧಿಕಾರಿಗಳು ಅಭ್ರಿಪಾಯಪಟ್ಟಿದ್ದಾರೆ.
ತಡರಾತ್ರಿವರೆಗೂ ಕೆಲಸ
ವಿವಿಐಪಿ ಭದ್ರತೆ, ಬಸ್, ರೈಲು ನಿಲ್ದಾಣ, ವಿಮಾನ ನಿಲ್ದಾಣ, ಜನಸಂದಣಿ ಪ್ರದೇಶಗಳಲ್ಲಿ ಪ್ರತಿನಿತ್ಯ ಶ್ವಾನದಳದ ಮೂಲಕ ಪರಿಶೀಲನೆ ಮಾಡಲಾಗುತ್ತದೆ. ಹೀಗಾಗಿ ಬೆಳಗ್ಗೆ 5.30ರಿಂದ ತಡರಾತ್ರಿವರೆಗೂ ಭದ್ರತಾ ಕೆಲಸಕ್ಕೆ ನಾಯಿಗಳನ್ನು ಬಳಸಿಕೊಳ್ಳಲಾಗುತ್ತದೆ. ಬೆಂಗಳೂರಲ್ಲಿ ವಿವಿಐಪಿ ಸಭೆ-ಸಮಾರಂಭಗಳಿದ್ದರೆ ಭದ್ರತೆಗೆ ದಾವಣಗೆರೆ, ತುಮಕೂರು, ಕೋಲಾರ, ರಾಮನಗರ ಮತ್ತಿತರ ಭಾಗಗಳಿಂದ ಪೊಲೀಸ್ ಡಾಗ್ಗಳನ್ನು ಕರೆಸಲಾಗುತ್ತದೆ ಎಂದು ಎಡಿಜಿಪಿ ಭಾಸ್ಕರ ರಾವ್ ತಿಳಿಸಿದರು.
ಶ್ವಾನ ಪಡೆದವರು ಪಾಲಿಸಬೇಕಾದ ಷರತ್ತು
ಶ್ವಾನ ಸಾಕುವುದು ಕಷ್ಟವಾದರೆ ವಾಪಸ್ ಇಲಾಖೆಗೇ ಕೊಡಬೇಕು
ಯಾವುದೇ ಕಾರಣಕ್ಕೂ ತನಿಖಾ ಕಾರ್ಯಗಳಿಗೆ ಬಳಸುವಂತಿಲ್ಲ
ನಾಯಿ ಮೇಲೆ ಹಲ್ಲೆ ನಡೆಸುವುದು, ಸಾಯಿಸುವುದು ಮಾಡಬಾರದು
ತರಬೇತಿ ಸಿಬ್ಬಂದಿ ಜತೆ ನಾಯಿಗಳು ಭಾವನಾತ್ಮಕ ಸಂಬಂಧ ಹೊಂದಿರುತ್ತವೆ. ಹಠಾತ್ತನೆ ಬೇರ್ಪಡಿಸಿ ಪ್ರಾಣಿದಯಾ ಸಂಘಕ್ಕೆ ಕಳುಹಿಸಿದರೆ ಹ್ಯಾಂಡ್ಲರ್ನಿಂದ ದೂರಾದ ಕೊರಗಿನಲ್ಲೇ ಕೊನೆಯುಸಿರೆಳೆಯುತ್ತವೆ. ಇದನ್ನು ತಪ್ಪಿಸಲು ತರಬೇತಿ ನೀಡಿದ ಸಿಬ್ಬಂದಿ ಅಥವಾ ಪ್ರಾಣಿ ಪ್ರಿಯರಿಗೆ ಸಾಕಿ ಕೊಳ್ಳಲು ಶ್ವಾನಗಳನ್ನು ನೀಡಲು ಇಲಾಖೆ ನಿರ್ಧರಿಸಿದೆ.
| ಭಾಸ್ಕರರಾವ್ ಎಡಿಜಿಪಿ (ಅಪರಾಧ)
ಪ್ರತಿ ವರ್ಷ 25 ಶ್ವಾನ ಸಾವು
ಇಲಾಖೆ ತೊರೆದು ಪ್ರಾಣಿದಯಾ ಸಂಘ ಸೇರುವ ಶ್ವಾನಗಳು 10-15 ದಿನದಲ್ಲೇ ಕೊರಗುತ್ತ ಕಣ್ಮುಚ್ಚುತ್ತವೆ. ಇದೇ ರೀತಿ ಪ್ರತಿವರ್ಷ 25 ನಾಯಿಗಳು ಮೃತಪಡುತ್ತಿವೆ ಎಂದು ಶ್ವಾನ ದಳದ ಮೇಲ್ವಿಚಾರಕರೂ ಆಗಿರುವ ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಅಪರಾಧ) ಭಾಸ್ಕರರಾವ್ ‘ವಿಜಯವಾಣಿ’ಗೆ ಮಾಹಿತಿ ನೀಡಿದರು.
Comments are closed.