ರಾಷ್ಟ್ರೀಯ

ಬಿಹಾರದಲ್ಲಿ ಪವಾಡ ! 15 ದಿನಗಳ ಸಮಾಧಿ ಮುಗಿಸಿ ಹೊರಬಂದ ಬಾಬಾ

Pinterest LinkedIn Tumblr

Bihar Baba-700ಪಟ್ನಾ : ಸ್ವಯಂಘೋಷಿತ ದೇವಮಾನವನೊಬ್ಬ ಹದಿನೈದು ಅಡಿ ಆಳದ ಗುಂಡಿಯೊಂದರಲ್ಲಿ ಹದಿನೈದು ದಿನಗಳ ಸಮಾಧಿ ಸಾಧನೆಯನ್ನು ಕೈಗೊಂಡು ಬಳಿಕ ಆರೋಗ್ಯ ಮತ್ತು ಚೈತನ್ಯಶಾಲಿಯಾಗಿ ಹೊರಬಂದಿರುವ “ಪವಾಡ’ದ ಘಟನೆ ಬಿಹಾರದ ಮಾಧೇಪುರ ಜಿಲ್ಲೆಯಿಂದ ವರದಿಯಾಗಿದೆ.

ಬಿಹಾರದ ಮಾಧೇಪುರ ಜಿಲ್ಲೆಯ ಚೌಸಾ ಪೊಲೀಸ್‌ ಠಾಣೆ ವ್ಯಾಪ್ತಿಗೆ ಒಳಪಡುವ ಭಾಟ್‌ಗಾಮಾ ಗ್ರಾಮದಲ್ಲಿ ಕಳೆದ ಫೆ.28ರಂದು ಪ್ರಮೋದ್‌ ಬಾಬಾ ಅವರು ಸಮಾಧಿ ಸಾಧನೆಯನ್ನು ಆರಂಭಿಸಿದ್ದರು ಎಂದು ಅವರು ಭಕ್ತರು ಹೇಳಿಕೊಂಡಿದ್ದಾರೆ.

ನೆಲದಲ್ಲಿ 15 ಅಡಿ ಆಳ, 10 ಅಡಿ ಉದ್ದ ಮತ್ತು 10 ಅಡಿ ಅಗಲದ ಗುಂಡಿಯನ್ನು ತೋಡಲಾಗಿ ಅದರೊಳಗೆ ಹಾಸಿಗೆಯನ್ನು ಇರಿಸಿ ಅದರ ಮೇಲೆ ಕುಳಿತುಕೊಂಡು ಪ್ರಮೋದ್‌ ಬಾಬಾ ಸಮಾಧಿಯನ್ನು ಕೈಗೊಂಡಿದ್ದರು. ಬಾಬಾ ಅವರ ದೇಹವನ್ನು ಬಟ್ಟೆಯಿಂದ ಮುಚ್ಚಿ ಬಳಿಕ ಅದರ ಮೇಲ್ಭಾಗದಲ್ಲಿ ಮಣ್ಣನ್ನು ಹಾಕಲಾಗಿತ್ತು ಎಂದು ಅವರ ಅನುಯಾಯಿಗಳು ಹೇಳಿದ್ದಾರೆ.

ಆದರೆ ಸ್ಥಳೀಯಾಡಳಿತೆಯ ಯಾವೊಬ್ಬ ಅಧಿಕಾರಿಯೂ ಪ್ರಮೋದ್‌ ಬಾಬಾ ಹೀಗೆ ಫೆ.28ರಂದು ಸಮಾಧಿ ಕೈಗೊಂಡದ್ದನ್ನು ಕಂಡಿಲ್ಲ. ಆದರೆ ಬಾಬಾ ಸಮಾಧಿ ಕೈಗೊಂಡ ಸುದ್ದಿಯನ್ನು ತಿಳಿದು ಅದೇ ದಿನ ಅನೇಕ ಉನ್ನತ ಸರಕಾರಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದಿದ್ದರು ಮಾತ್ರವಲ್ಲದೇ ತಮ್ಮ ಜತೆಗೆ ವೈದ್ಯಕೀಯ ತಂಡವೊಂದನ್ನೂ ಕರೆ ತಂದಿದ್ದರು.

ಆದರೆ ಬಾಬಾ ಅನುಯಾಯಿಗಳು “ನಮ್ಮ ಗುರುವಿನ ಸಮಾಧಿ ಸಾಧನೆಗೆ ಅಡ್ಡಿಪಡಿಸಬೇಡಿ’ ಎಂದು ಅಧಿಕಾರಿಗಳನ್ನು ಹಾಗೂ ವೈದ್ಯಕೀಯ ತಂಡದವರನ್ನು ತಡೆದಿದ್ದರು.

ಸಮಾಧಿಯಿಂದ ಹೊರ ಬಂದ ಬಳಿಕ ಬಾಬಾ ಅವರನ್ನು ವೈದ್ಯಕೀಯ ತಂಡದವರು ಪರೀಕ್ಷಿಸಿದ್ದಾರೆ. ಬಾಬಾ ಆರೋಗ್ಯದಿಂದಿದ್ದು ಚೈತನ್ಯಶಾಲಿಯಾಗಿರುವುದನ್ನು ಕಂಡುಕೊಳ್ಳಲಾಗಿದೆ ಎಂದು ಮಾಧೇಪುರ ಪೊಲೀಸ್‌ ಸುಪರಿಂಟೆಂಡೆಂಟ್‌ ವಿಕಾಸ್‌ ಕುಮಾರ್‌ ತಿಳಿಸಿದ್ದಾರೆ.
-ಉದಯವಾಣಿ

Write A Comment