ಕರ್ನಾಟಕ

ಉಪಚುನಾವಣೆಯಲ್ಲಿ ಗೆದ್ದಿದ್ದ ಮೂವರು ನೂತನ ಶಾಸಕರ ಪ್ರಮಾಣವಚನ

Pinterest LinkedIn Tumblr

eleಬೆಂಗಳೂರು, ಫೆ.29-ವಿಧಾನಸಭೆ ಉಪ ಚುನಾವಣೆಯಲ್ಲಿ ಚುನಾಯಿತರಾಗಿದ್ದ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಶಿವನಗೌಡನಾಯಕ್ ಹಾಗೂ ಕಾಂಗ್ರೆಸ್‌ನ ರಹೀಂಖಾನ್ ಅವರು ನೂತನ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಿ.ಆರ್.ವಾಲಾ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ ವಿಧಾನಸಭೆ ಸಮಾವೇಶಗೊಂಡಾಗ ಮೂರು ಮಂದಿ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ನೂತನ ಸದಸ್ಯರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ನೂತನ ಶಾಸಕರಿಗೆ ಸಭಾಧ್ಯಕ್ಷರು, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಸದಸ್ಯರು ಶುಭ ಕೋರಿದರು. ಇತ್ತೀಚೆಗೆ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ವೈ.ಎ.ನಾರಾಯಣಸ್ವಾಮಿ ಹೆಬ್ಬಾಳದಿಂದ, ಶಿವನಗೌಡನಾಯಕ್ ದೇವದುರ್ಗದಿಂದ ಹಾಗೂ ರಹೀಂಖಾನ್ ಬೀದರ್‌ನಿಂದ ಸ್ಪರ್ಧಿಸಿ ಚುನಾಯಿತರಾಗಿದ್ದರು. ಈ ವರ್ಷದ ಮೊದಲ ಅಧಿವೇಶನವಾದ ಜಂಟಿ ಅಧಿವೇಶನ ಈ ನೂತನ ಮೂವರು ಶಾಸಕರಿಗೂ ಮೊದಲ ಅಧಿವೇಶನವಾಗಿದ್ದು ವಿಶೇಷ. ವಿಧಾನ ಪರಿಷತ್ ಸದಸ್ಯರಾಗಿದ್ದ ನಾರಾಯಣಸ್ವಾಮಿ ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದರೆ, ಶಿವನಗೌಡನಾಯಕ್ ಮತ್ತು ರಹೀಂಖಾನ್ ಈ ಹಿಂದೆ ಶಾಸಕರಾಗಿದ್ದರು.

Write A Comment