ರಾಷ್ಟ್ರೀಯ

ಬಜೆಟ್ ಆರಂಭಕ್ಕೂ ಮುನ್ನವೇ ಲೋಕಸಭೆಯಲ್ಲಿ ಗದ್ದಲ, ಕೋಲಾಹಲ

Pinterest LinkedIn Tumblr

baನವದೆಹಲಿ,ಫೆ.29-ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಅವಕಾಶ ನೀಡಬೇಕೆಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ ಪ್ರಸಂಗ ನಡೆಯಿತು. ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2016-17ನೇ ಸಾಲಿನ ಬಜೆಟ್ ಮಂಡಿಸಲು ಮುಂದಾದರು. ಈ ವೇಳೆ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಜ್ಯೋತಿರಾಧ್ಯ ಸಿಂಧ್ಯಾ ಮತ್ತಿತರರು ಸ್ಮೃತಿ ಇರಾನಿ ವಿರುದ್ದ ಹಕ್ಕುಚ್ಯುತಿ ನಿರ್ಣಯಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.

ಈ ವೇಳೆ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಮೊದಲು ಶಿಷ್ಟಾಚಾರದಂತೆ ಬಜೆಟ್ ಮಂಡನೆಯಾಗಬೇಕು. ನಂತರ ನೋಟೀಸ್ ಪರಿಗಣಿಸಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸುವುದಾಗಿ ಹೇಳಿ ಬಜೆಟ್ ಮಂಡಿಸಲು ಅರುಣ್ ಜೇಟ್ಲಿಗೆ ಸೂಚನೆ ನೀಡಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಪ್ರತಿಪಕ್ಷಗಳು ಹೊಸ ಶಿಷ್ಟಾಚಾರಕ್ಕೆ ನಾಂದಿ ಹಾಡಲು ಮುಂದಾಗಿವೆ. ಇದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರಿಯಾದ ಕ್ರಮವಲ್ಲ ಎಂದು ಆಕ್ಷೇಪಿಸಿದರು. ಪ್ರತಿಪಕ್ಷದ ಸದಸ್ಯರು ನೀಡಿರುವ ನೋಟೀಸ್‌ನ್ನು ನಾನು ಸೂಕ್ತ ಸಂದರ್ಭದಲ್ಲಿ ತೀರ್ಮಾನಿಸುವುದಾಗಿ ಮಹಾಜನ್ ಹೇಳಿದ ಬಳಿಕ ಚರ್ಚೆಗೆ ತೆರೆ ಬಿತ್ತು.

ಮೊನ್ನೆಯಷ್ಟೇ ಸಂಸತ್‌ನಲ್ಲಿ ಉತ್ತರಿಸುವ ವೇಳೆ ಸಚಿವೆ ಸ್ಮೃತಿ ಇರಾನಿ ದುರ್ಗಾಮಾತೆಯನ್ನು ಉಲ್ಲೇಖ ಮಾಡಿದ್ದರು. ಇದು ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಭಾರೀ ಗದ್ದಲ ಸೃಷ್ಟಿಸಿತು. ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್ ಸದಸ್ಯರು ಹಕ್ಕುಚ್ಯುತಿ ನಿರ್ಣಯ ಮಂಡಿಸಿದ್ದಾರೆ.

Write A Comment