ಹೈದರಾಬಾದ್: ಕಾಂಗ್ರೆಸ್ ಪಕ್ಷ ಸಂಸತ್ ಅಧಿವೇಶನದಲ್ಲಿ ಗದ್ದಲವೆಬ್ಬಿಸಿ ಪ್ರಮುಖ ಮಸೂದೆಗಳು ಅಂಗೀಕಾರವಾಗುವುದನ್ನು ತಡೆಯುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಕಾಂಗ್ರೆಸ್ ಗೆ ದೇಶದ ಜನಾದೇಶದ ಬಗ್ಗೆ ಅಸಹಿಷ್ಣುತೆ ಕಾಡುತ್ತಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುವುದನ್ನು ಬಿಟ್ಟು ಅಭಿವೃದ್ಧಿ ಕಡೆಗೆ ಗಮನ ಕೊಡಲಿ ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವೆಂಕಯ್ಯ ನಾಯ್ಡು, ಕಾಂಗ್ರೆಸ್ ಪಕ್ಷ ಸರ್ಕಾರವನ್ನು ದೂಷಿಸುವುದಕ್ಕೆ ಕಾರಣಗಳನ್ನು ಹುಡುಕುವುದನ್ನು ಬಿಟ್ಟು ಸಂಸತ್ ನಲ್ಲಿ ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಬಂಬಲ ನೀಡಲಿ ಎಂದು ತಿರುಗೇಟು ನೀಡಿದ್ದಾರೆ.
ಪ್ರತಿಬಾರಿಯೂ “ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿರುವುದು ಸರ್ಕಾರದ ವಿರುದ್ಧ ಆರೋಪ ಮಾಡಲು ಇರುವ ನೆಪ ಮಾತ್ರ, ಸರ್ಕಾರ ಎಂದಿಗೂ ಯಾರನ್ನೂ ನಿರ್ಲಕ್ಷಿಸುವುದಿಲ್ಲ ಮಸೂದೆಗಳ ಅಂಗೀಕಾರಕ್ಕೆ ಪ್ರತಿಯೊಂದು ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
ವಿತ್ತೀಯ ಕೊರತೆ, ಆದಾಯ ಕೊರತೆ, ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದ ಕೊರತೆ, ಚಾಲ್ತಿ ಲೆಕ್ಕದ ಕೊರತೆ ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರದ ಮೇಲಿನ ವಿಶ್ವಾಸದ ಕೊರತೆ ಮಾತ್ರ ಕಾಂಗ್ರೆಸ್ ಸರ್ಕಾರ ಎನ್ ಡಿಎ ಸರ್ಕಾರಕ್ಕೆ ಬಿಟ್ಟುಕೊಟ್ಟಿರುವ ಬಳುವಳಿಗಳಾಗಿವೆ. ಎನ್ ಡಿಎ ಸರ್ಕಾರ ಕಾಂಗ್ರೆಸ್ ನಿಂದ ಬಂದಿದ್ದ ಎಲ್ಲಾ ಕೊರತೆಗಳನ್ನು ನಿವಾರಿಸಿದ್ದು ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದೆ. ಇದನ್ನು ಗಮನಿಸಿ ಕಾಂಗ್ರೆಸ್ ಪಕ್ಷ ಸಂಸತ್ ನಲ್ಲಿ ಮಸೂದೆಗಳಿಗೆ ಬೆಂಬಲ ನೀಡಬೇಕೆಂದು ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.