ನವದೆಹಲಿ: ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ನ ಅಡ್ಡಿ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಭರವಸೆಗಳನ್ನು ಈಡೇರಿಸುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ.
ಕಾಂಗ್ರೆಸ್ ನಡೆಸುತ್ತಿರುವ ಸರ್ಕಾರ ವಿರೋಧಿ ಪ್ರಚಾರಗಳು ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಯಾಗುತ್ತಿರುವುದನ್ನು ಸಹಿಸಲಾಗದ ಹತಾಶೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ, ನಿರಂತರ ಅಡಚಣೆಗಳ ಹೊರತಾಗಿಯೂ ಪ್ರಧಾನಿ ಮೋದಿ ಭರವಸೆಗಳನ್ನು ಈಡೇರಿಸುವುದರಲ್ಲಿ ಸಫಲರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ಆರೋಪಿಸಿದ್ದಾರೆ.
ವಿರೋಧಪಕ್ಷ ಕಾಂಗ್ರೆಸ್, ಸಂಸತ್ ಅಧಿವೇಶನ ವ್ಯರ್ಥವಾಗಿಸುವ ಮೂಲಕ ಪ್ರಮುಖ ಮಸೂದೆಗಳು ಅಂಗೀಕಾರವಾಗುವುದನ್ನು ತಡೆಗಟ್ಟಿದೆ. ಹಗರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ತಮ್ಮ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಶ್ರೀಕಾಂತ್ ಶರ್ಮಾ ಆರೋಪಿಸಿದ್ದಾರೆ.
ಮೋದಿ ಅವರನ್ನು ಟೀಕಿಸುವವರ ಪಕ್ಷದ ಮುಖ್ಯಮಂತ್ರಿಗಳ ವಿರುದ್ಧ ಹಗರಣದ ಆರೋಪಗಳು ಕೇಳಿಬರುತ್ತಿದ್ದರೆ, ಕೇಂದ್ರ ಸರ್ಕಾರ ಟೀಕೆಗಳಿಗೆ ಅಭಿವೃದ್ಧಿ ಮೂಲಕವೇ ಉತ್ತರ ನೀಡುತ್ತಿದೆ ಎಂದಿದೆ ಬಿಜೆಪಿ.