ಹನುಮಸಾಗರ: ಮಹಿಳಾ ಅಭ್ಯರ್ಥಿಯೊಬ್ಬರು ಮತದಾರರ ಪಾದವನ್ನು ಹಿಡಿದುಕೊಳ್ಳುತ್ತಾರೆ. ಅವರು ತಮಗೇ ಮತ ನೀಡುತ್ತೇವೆ ಎಂದು ಅಭಯ ನೀಡುವವರೆಗೂ ಅವರ ಪಾದವನ್ನು ಬಿಡುವುದಿಲ್ಲ!
ಹೌದು, ಕುಷ್ಟಗಿ ತಾಲ್ಲೂಕು ಪಂಚಾಯಿತಿ ಅಡವಿಬಾವಿ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿರುವ ವಿಶಾಲಾಕ್ಷಿ ಶರಣಪ್ಪ ಮದ್ಲೂರ ಹೀಗೆ ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ.
‘ಪದವೀಧರರಾಗಿರುವ ನನಗೆ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡಲಿಲ್ಲ. ಅದಕ್ಕಾಗಿ ನಾನು ಪಕ್ಷೇತರಳಾಗಿ ಸ್ಪರ್ಧಿಸಿದ್ದೇನೆ. ನನ್ನಲ್ಲಿ ಹಣವಿಲ್ಲ. ಟಿಕೆಟ್ ನಿರಾಕರಣೆಗೆ ಇದೂ ಒಂದು ಕಾರಣ’ ಎಂದು ವಿಶಾಲಾಕ್ಷಿ ದೂರು.
‘ನನ್ನಲ್ಲಿ ಶೈಕ್ಷಣಿಕ ಅರ್ಹತೆ ಇದೆ. ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಚಿಂತನೆ, ಗುರಿಯಿದೆ. ಜನ ಬೆಂಬಲವೂ ಸಿಗುತ್ತಿದ್ದು, ಗೆಲುವಿನ ಭರವಸೆ ಇದೆ’ ಎನ್ನುತ್ತಾರೆ.
ಕ್ಷೇತ್ರ ವ್ಯಾಪ್ತಿಯ ಅಡವಿಭಾವಿ, ಮಲಕಾಪೂರ, ಹುಲಸಗೇರಿ, ಹೊಸಳ್ಳಿ ಗ್ರಾಮಗಳಿಗೆ ಬೆಂಬಲಿಗರೊಂದಿಗೆ ಭೇಟಿ ನೀಡಿ ದೇವಾಲಯ, ಅಂಗಡಿ ಕಟ್ಟೆ, ಮನೆ ಮುಂದೆ ಕುಳಿತಿರುವ ಮತದಾರರ ಪಾದಮುಟ್ಟಿ ನಮಸ್ಕರಿಸುತ್ತಾ ಪ್ರಚಾರವನ್ನು ಮುಂದುವರಿಸಿದ್ದಾರೆ.