ನವದೆಹಲಿ, ಜ.31- ಖಾಸಗಿ ಕ್ಷೇತ್ರದ ನೌಕರರು ಹಾಗೂ ಸಿಬ್ಬಂದಿಗಳಿಗೆ ನಿವೃತ್ತಿ ನಂತರ ಪಿಂಚಣಿ ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಟಲ್ ಪೆನ್ಷನ್ ಯೋಜನಾ (ಎಪಿವೈ)ಗೆ ದೇಶದ ಜನ ನೀರಸ ಪ್ರತಿಕ್ರಿಯೆ ತೋರಿಸಿದ್ದಾರೆ. ಸರ್ಕಾರಿ ನೌಕರರು ನಿವೃತ್ತಿ ನಂತರ ನಿರ್ದಿಷ್ಟ ಮೊತ್ತದ ಆದಾಯ ಪಡೆದು ಜೀವನಭದ್ರತೆ ಕಲ್ಪಿಸಿಕೊಳ್ಳುವಂತೆ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಿಂದಿನ ಸರ್ಕಾರದ ಯೋಜನೆಗಳಲ್ಲೇ ಸಣ್ಣಪುಟ್ಟ ಮಾರ್ಪಾಟು ಮಾಡಿ ಅಟಲ್ ಪೆನ್ಷನ್ ಯೋಜನೆಗೆ 2015ರ ಜೂನ್‌ನಲ್ಲಿ ಚಾಲನೆ ನೀಡಿದರು.
ಆರಂಭದ ವರ್ಷದಲ್ಲೇ ಕನಿಷ್ಠ 20 ಮಿಲಿಯನ್ ಜನರನ್ನು ಈ ಯೋಜನೆಯ ವ್ಯಾಪ್ತಿಗೆ ತರುವ ಗುರಿಯನ್ನು ನಿಗದಿಪಡಿಸಲಾಗಿತ್ತು. ಆದರೆ, 8 ತಿಂಗಳು ಕಳೆದರೂ ಈವರೆಗೂ ಇದರ ಪ್ರಗತಿ ಶೇ.10ನ್ನೂ ದಾಟಿಲ್ಲ. 2016ರ ಜನವರಿ 16ರವರೆಗೆ 1.90ಮಿಲಿಯನ್ ಜನ ಮಾತ್ರ ಎಪಿವೈಗೆ ಸೇರ್ಪಡೆಯಾಗಿದ್ದಾರೆ. 2015ರ ಡಿ.31ರೊಳಗೆ ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಕಾಲಾವಕಾಶ ನೀಡಲಾಗಿತ್ತು. ಆದರೆ, ಜನರಿಂದ ಸರಿಯಾದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಅಂತಿಮ ಗಡುವನ್ನು 2016ರ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ.
ಈ ಯೋಜನೆಯಲ್ಲಿ ಫಲಾನುಭವಿಗಳು ಮಾಸಿಕ ಪಾವತಿಸಿದ ಕಂತುಗಳಿಗೆ ಸರಿಸಮನಾಗಿ ಕೇಂದ್ರ ಸರ್ಕಾರವೂ ತನ್ನ ಪಾಲಿನ ಹಣವನ್ನು ತುಂಬುವುದಾಗಿ ಅಟಲ್ ಪೆನ್ಷನ್ ಯೋಜನೆಯಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ, ಇದು ಖಾಸಗಿ ವಿಮಾ ಯೋಜನೆಗಿಂತಲೂ ಹೆಚ್ಚಿನ ಲಾಭದಾಯಕ ಅನಿಸದೇ ಇರುವುದರಿಂದ ಜನ ನೀರಸ ಪ್ರತಿಕ್ರಿಯೆ ತೋರಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಈಗಾಗಿ ಕೇಂದ್ರ ಸರ್ಕಾರ ಯೋಜನೆಯ ಅಂತಿಮ ಗಡುವನ್ನು ವಿಸ್ತರಣೆ ಮಾಡಿದೆ.