ಕೋಲ್ಕತಾ: ಪಶ್ಚಿಮ ಬಂಗಾಳದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹಾಗೂ ಇತರ ಮೂವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಗುರುವಾರ 9 ಆರೋಪಿಗಳ ಪೈಕಿ 6 ಮಂದಿ ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದ ನಗರ ಸೆಷನ್ಸ್ ಕೋರ್ಟ್, ಶಿಕ್ಷೆಯ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು.
ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ನ್ಯಾಯಾಲಯ, ಅನ್ಸರ್ ಅಲಿ, ಸೈಫುಲ್ ಅಲಿ ಮತ್ತು ಅಮಿನ್ ಅಲಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಅಲ್ಲದೆ ಇತರ ಮೂವರು ಅಪರಾಧಿಗಳಾದ ಇಮಾನುಲ್ ಇಸ್ಲಾಂ, ಭೋಲ ನಸ್ಕರ್ ಹಾಗೂ ಅಮಿನುರ್ ಇಸ್ಲಾಂಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
2013ರ ಜೂನ್ ತಿಂಗಳಿನಲ್ಲಿ ಕಾಲೇಜಿನಿಂದ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯೋರ್ವಳನ್ನು ಯುವಕರ ಗುಂಪೊಂದು ಅಪಹರಣ ಮಾಡಿತ್ತು. ನಂತರ ನಿರ್ಜನ ಪ್ರದೇಶಕ್ಕೆ ಕರೆದೋಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದ ಯುವಕರ ಗುಂಪು ಆಕೆಯನ್ನು ಹತ್ಯೆ ಮಾಡಿ ಕೋಲ್ಕತಾದಿಂದ 30 ಕಿ.ಮೀ ದೂರದಲ್ಲಿರುವ ಕಾಮದುನಿ ಹಳ್ಳಿಯ ಕಾಲುವೆಯೊಂದರಲ್ಲಿ ಬಿಸಾಡಿದ್ದರು.
ಈ ಪ್ರಕರಣ ಪಶ್ಚಿಮ ಬಂಗಾಳದಾದ್ಯಂತ ತೀವ್ರ ಸಂಚಲನವನ್ನು ಮೂಡಿಸಿತ್ತು. ಅಲ್ಲದೆ ಮಹಿಳೆಯರ ಸಂರಕ್ಷಣೆ ಕುರಿತಂತೆ ಅಲ್ಲಿನ ಸ್ಥಳೀಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಪ್ರಕರಣ ಸಂಬಂಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅತ್ಯಾಚಾರಕ್ಕಾಗಿ ಹತ್ಯೆಯಾದ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದ್ದರು.
ಪ್ರಕರಣದಲ್ಲಿ 9 ಮಂದಿ ಭಾಗಿಯಾಗಿದ್ದು, ಇವರಲ್ಲಿ 6 ಮಂದಿಯ ವಿರುದ್ಧವಿದ್ದ ಆರೋಪ ಸಾಬೀತಾಗಿದೆ. ಬಂಧಿತನಾಗಿದ್ದವರಲ್ಲಿ ಓರ್ವ ಯುವಕ ವಿಚಾರಣೆ ಹಂತದಲ್ಲಿ ಜೈಲಿನಲ್ಲಿದ್ದ ವೇಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ.