ರಾಷ್ಟ್ರೀಯ

ಬಿಹಾರ ಮಾದರಿ ಫಲಿತಾಂಶ ಕರ್ನಾಟಕದಲ್ಲೂ ಮರುಕಳಿಸಲಿದೆ : ಕುಮಾರಸ್ವಾಮಿ ಭವಿಷ್ಯ

Pinterest LinkedIn Tumblr

kumarಹುಬ್ಬಳ್ಳಿ, ನ.9-ಬಿಹಾರ ಚುನಾವಣೆ ಫಲಿತಾಂಶ ರಾಜ್ಯದಲ್ಲೂ ಮರುಕಳಿಸಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಲೂ ಹಾಗೂ ನಿತೀಶ್‌ಕುಮಾರ್ ಅವರ ಮಹಾಮೈತ್ರಿಕೂಟಕ್ಕೆ ಅಭೂತಪೂರ್ವ ಜಯಗಳಿಸಿದ್ದು, ಇದರಿಂದ ಎನ್‌ಡಿಎಗೆ ಸರಿಯಾಗಿ ಪಾಠ ಕಲಿಸಲಾಗಿದೆ ಎಂದರು. ಬಿಹಾರ ಚುನಾವಣೆಯಲ್ಲಿ ಮೋದಿ ಮೋಡಿ ನಡೆಯಲಿಲ್ಲ. ಭಾರೀ ಭಾಷಣದಿಂದ ಎನನ್ನೂ ಸಾಧಿಸಲು ಆಗುವುದಿಲ್ಲ ಎಂದು ಮೋದಿ ಕುರಿತು  ಗೇಲಿ ಮಾಡಿದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲಮನ್ನಾ ಮಾಡಲಾಗುವುದು ಎಂದ ಅವರು,  ಕೇಂದ್ರ ಹಾಗೂ ರಾಜ್ಯ  ಸರ್ಕಾರಗಳು ರೈತರನ್ನು ಸಂಪೂರ್ಣ ನಿರ್ಲಕ್ಷಿಸಿವೆ ಎಂದು ಹೇಳಿದರು.

ರೈತರ ಸಮಸ್ಯೆಗಳು, ಅವರು ಎಷ್ಟು ಜಮೀನು ಹೊಂದಿದ್ದಾರೆ. ಬ್ಯಾಂಕ್‌ನಿಂದ ಎಷ್ಟು ಸಾಲ ಮಾಡಿದ್ದಾರೆ ಆತ್ಮಹತ್ಯೆಗೆ ಕಾರಣಗಳೇನು ಎಂಬ ಬಗ್ಗೆ ಸಮಗ್ರ ಮಾಹಿತಿಯನ್ನೊಳಗೊಂಡ ಪುಸ್ತಕವನ್ನು ತರಲಾಗುವುದು. ಈ ಸಂಬಂಧ ಪಕ್ಷದ ಕಾರ್ಯಕರ್ತರು ಪ್ರತಿ ರೈತರ ಮನೆಗೆ ತೆರಳಿ ಮಾಹಿತಿ ಸಂಗ್ರಹ ಮಾಡಲಿದ್ದಾರೆ ಎಂದರು.

ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ರೈತರು ಹಲವಾರು ದಿನಗಳಿಂದ ಹೋರಾಟ ಮಾಡುತ್ತಾ ಬಂದರೂ ಅವರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ನೆಪ ಹೇಳದೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ವಿವಾದಕ್ಕೆ ನಾಂದಿಹಾಡಬೇಕು. ಜನಪ್ರತಿನಿಧಿಗಳು ಪಕ್ಷ ಭೇದ, ಭಾವ ಮರೆತು ಪ್ರಧಾನಿಯವರಲ್ಲಿ ಒತ್ತಡ ತರುವುದು ಅಗತ್ಯ ಎಂದರು. ರೈತರ ಆತ್ಮಹತ್ಯೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಘುವಾಗಿ ಪರಿಗಣಿಸಿದೆ ಎಂದು ಗಂಭೀರ ಆರೋಪ ಮಾಡಿದ ಎಚ್.ಡಿ.ಕುಮಾರಸ್ವಾಮಿ, ಎರಡೂ ಸರ್ಕಾರಗಳು ತಮ್ಮ ದ್ವಂದ್ವ ನೀತಿ ಕೈ ಬಿಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಎನ್.ಎಚ್.ಕೋನರೆಡ್ಡಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಸೇರಿದಂತೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

Write A Comment