ರಾಷ್ಟ್ರೀಯ

ಸಾವಿರ ರೂ. ನೋಟುಗಳಿಗೆ ಹೊಸ ಸುರಕ್ಷೆ

Pinterest LinkedIn Tumblr

money-fiಹೊಸದಿಲ್ಲಿ, ಸೆ.6: ನಕಲಿ ಭಾರತೀಯ ಕರೆನ್ಸಿ ನೋಟುಗಳ (ಎಫ್‌ಐಸಿಎನ್) ಹಾವಳಿಯನ್ನು ತಡೆಯಲು, ಮುಖ್ಯವಾಗಿ ರೂ. 1 ಸಾವಿರ ಹಾಗೂ ರೂ. 500ರಂತಹ ಹೆಚ್ಚು ಮುಖಬೆಲೆಯವು ಸೇರಿದಂತೆ ಎಲ್ಲ ಕರೆನ್ಸಿ ನೋಟುಗಳಲ್ಲಿ ಹೊಸ ನಂಬರಿಂಗ್ ವ್ಯವಸ್ಥೆ ಹಾಗೂ 7 ಹೊಸ ಸುರಕ್ಷಾಂಶಗಳನ್ನು ಅಳವಡಿಸಲಾಗುವುದು.
ಮರುವಿಮರ್ಶಿತ ನಂಬರ್ ಮಾದರಿಯನ್ನು ಪರಿಚಯಿಸುವುದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈ.ಲಿ. (ಬಿಆರ್‌ಬಿಎನ್‌ಂಪಿಎಲ್) ಹಾಗೂ ಸೆಕ್ಯುರಿಟಿ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾಗಳು (ಎನ್‌ಪಿಎಂಸಿಐಎಲ್) ಕ್ರಮವನ್ನು ಆರಂಭಿಸಿವೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಾರಂಭದಲ್ಲಿ ಅದನ್ನು ರೂ. 1 ಸಾವಿರ ಹಾಗೂ 500ರ ನೋಟುಗಳಲ್ಲಿ ಅಳವಡಿಸಲಾಗುವುದು. ಮುಂದಿನ ವರ್ಷ ಮೇಯೊಳಗೆ ಇತರ ಎಲ್ಲ ವೌಲ್ಯಗಳ ಕರೆನ್ಸಿ ನೋಟುಗಳೂ ಈ ಸುರಕ್ಷಾಂಶಗಳನ್ನು ಹೊಂದಲಿವೆಯೆಂದು ಅವು ಹೇಳಿವೆ.
ಸರಕಾರ ಅಂಗೀಕರಿಸಿರುವ ಹೊಸ 7 ಭದ್ರತಾಂಶಗಳ ವಿವರ ಇನ್ನಷ್ಟೇ ತಿಳಿಯಬೇಕಿದೆಯೆಂದು ಮೂಲಗಳು ತಿಳಿಸಿವೆ.
ಕೌಂಟರ್‌ಗಳಲ್ಲಿ ಪತ್ತೆಯಾಗುವ ನಕಲಿ ನೋಟುಗಳ ಮೇಲೆ ‘ಕಳ್ಳನೋಟು’ ಎಂಬ ಮುದ್ರೆಯೊತ್ತಿ ತಕ್ಷಣವೇ ಅವುಗಳನ್ನು ಅಮಾನತುಗೊಳಿಸುವಂತೆ ಬ್ಯಾಂಕ್‌ಗಳಿಗೆ ಆರ್‌ಬಿಯ ಸೂಚಿಸಿದೆ. ಈ ಪ್ರಕ್ರಿಯೆ ಅನುಸರಿಸದ ಬ್ಯಾಂಕ್‌ಗಳಿಗೆ ದಂಡ ವಿಧಿಸಲಾಗುವುದು. ನಕಲಿ ನೋಟು ನೀಡಿದವರಿಗೆ ರಸೀದಿಯನ್ನು ನೀಡುವಂತೆಯೂ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆಯೆಂದು ಅವು ವಿವರಿಸಿವೆ.
ಅಂದಾಜಿನಂತೆ, 30 ಕೋಟಿ ರೂ. ಮುಖಬೆಲೆಯ ಭಾರತೀಯ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪಿಡುಗನ್ನು ಸರಕಾರವು ‘ಆರ್ಥಿಕ ಭಯೋತ್ಪಾದನೆ’ ಎಂದು ಪರಿಗಣಿಸಿರುವುದರಿಂದ ರಾಷ್ಟ್ರೀಯ ತನಿಖೆ ಸಂಸ್ಥೆಯನ್ನು (ಎನ್‌ಐಎ) ಕಳ್ಳನೋಟು ಪ್ರಕರಣಗಳ ನೋಡಲ್ ಏಜೆನ್ಸಿಯನ್ನಾಗಿ ಮಾಡಲಾಗಿದೆ.
ಪಾಕಿಸ್ತಾನದ ಐಎಸ್‌ಐ ಭಾರತದೊಳಗೆ ಕಳ್ಳನೋಟುಗಳನ್ನು ಸಕ್ರಿಯವಾಗಿ ತಳ್ಳುತ್ತಿದೆ. ಆರ್ಥಿಕ ಭಯೋತ್ಪಾದನೆ ಹರಡಲು ಗುಪ್ತಚರ ಸಂಸ್ಥೆಗಳು ಬಳಸುವ ಮಾರ್ಗಗಳ ಬಗ್ಗೆ ಕೇಂದ್ರೀಯ ಭದ್ರತಾ ಸಂಸ್ಥೆಗಳನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ.
ಕಳ್ಳನೋಟುಗಳ ಹರಿವು ಈಗ ಕೇವಲ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ನೇಪಾಳಗಳ ಗಡಿಪ್ರದೇಶಗಳಿಂದ ಕಳ್ಳಸಾಗಣೆಗೆ ಸೀಮಿತವಾಗಿಲ್ಲ. ದಕ್ಷಿಣ ಏಶ್ಯದ ರಾಷ್ಟ್ರಗಳು ಅವುಗಳ ಪ್ರಮುಖ ಸಾಗಾಟದ ಕೇಂದ್ರಗಳಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಭಾರತೀಯರು ಆಗಾಗ ಭೇಟಿ ನಿಡುವ ಮಲೇಶಿಯಾ, ಥಾಯ್ಲೆಂಡ್ ಹಾಗೂ ಒಮಾನ್ ಕಳ್ಳನೋಟುಗಳ ಹೊಸ ದಾಸ್ತಾನು ಕೇಂದ್ರಗಳಾಗಿ ಮೂಡಿಬಂದಿದ್ದು, ಬಳಿಕ ಅವುಗಳನ್ನು ಭಾರತದಾದ್ಯಂತ ಚಲಾವಣೆ ಮಾಡಲಾಗುತ್ತಿದೆಯೆಂದು ಮೂಲಗಳು ತಿಳಿಸಿವೆ.
ಕೆಲವು ಪ್ರಕರಣಗಳಲ್ಲಿ, ಅಂತಾರಾಷ್ಟ್ರೀಯ ಮಾನ್ಯತೆಯ ಕೊರಿಯರ್ ಸೇವೆಗಳನ್ನು ಕಳ್ಳನೋಟು ಒಳ ತಳ್ಳಲು ಐಎಸ್‌ಐ ಬಳಸುತ್ತಿದೆ.

Write A Comment