ರಾಷ್ಟ್ರೀಯ

ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಶ್ರೀಧರ ರಾವ್ ವಿರುದ್ಧ ಸಿಜೆಐಗೆ ದೂರು

Pinterest LinkedIn Tumblr

KSRJಹೊಸದಿಲ್ಲಿ, ಸೆ.7: ಗುವಾಹಟಿ ಹೈಕೋರ್ಟ್‌ನ ಕಾರ್ಯನಿರತ ಮುಖ್ಯ ನ್ಯಾಯಾಧೀಶ ಕೆ. ಶ್ರೀಧರ ರಾವ್ ಅವರ ಕಾರ್ಯವೈಖರಿಯನ್ನು ಖಂಡಿಸಿ, ಗುವಾಹಟಿ ಹೈಕೋರ್ಟ್‌ನ ಬಾರ್ ಅಸೋಸಿಯೇಶನ್ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿಯವರಿಗೆ ಮನವಿಯೊಂದನ್ನು ಸಲ್ಲಿಸಿದೆ. ಬೆಂಗಳೂರು ಮೂಲದ ಶ್ರೀಧರರಾವ್ ಅವರ ನಡವಳಿಕೆಯು ಮುಖ್ಯ ನ್ಯಾಯಾಧೀಶ ಹುದ್ದೆಯ ಸಾಂಸ್ಥಿಕ ಪ್ರಮಾಣಿಕತೆಯನ್ನು ಹಾಗೂ ನ್ಯಾಯಾಂಗ ಆಡಳಿತದ ಕುರಿತು ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದೆಯೆಂದು ಅದು ಆಪಾದಿಸಿದೆ.
ಗುವಾಹಟಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ ಆರಂಭದಿಂದಲೇ ರಾವ್ ಅವರು ಸಮಯಕ್ಕೆ ಸರಿಯಾಗಿ ನ್ಯಾಯಾಲಯದ ಕಲಾಪವನ್ನು ನಡೆಸುತ್ತಿಲ್ಲ. ನ್ಯಾಯಮೂರ್ತಿ ರಾವ್ ಅವರು, ಪ್ರತೀ ವಾರಾಂತ್ಯದಲ್ಲಿ ಬೆಂಗಳೂರಿಗೆ ತೆರಳುವ ಹಾಗೂ ಸೋಮವಾರ ತಡವಾಗಿ ಆಗಮಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಇದರಿಂದಾಗಿ ಅವರು ತಡವಾಗಿ ನ್ಯಾಯಾಲಯದ ಕಲಾಪಗಳನ್ನು ನಡೆಸುತ್ತಾರೆ,ಇನ್ನು ಕೆಲವೊಮ್ಮೆ ಅವರಿಗೆ ಕಲಾಪಗಳನ್ನು ನಡೆಸಲು ಸಾಧ್ಯವಾಗುವುದಿಲ್ಲವೆಂದು ಬಾರ್ ಅಸೋಸಿಯೇಶನ್ (ಜಿಎಚ್‌ಸಿಬಿ) ಪತ್ರದಲ್ಲಿ ದೂರಿದೆ. ಬಾರ್ ಅಸೋಸಿಯೇಶನ್‌ನ ಹಿರಿಯ ಸದಸ್ಯರ ಬಗ್ಗೆಯೂ ಅವರು ತೀರಾ ಅನುಚಿತವಾದ ರೀತಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆಂದು ಅದು ಆಪಾದಿಸಿದೆ.
ನ್ಯಾಯಮೂರ್ತಿ ರಾವ್ ಅವರು ಹೆೈಕೋರ್ಟ್‌ನ ಪೀಠಗಳಲ್ಲಿ ವಿಚಾರಣೆಗೆ ಬಾಕಿಯುಳಿದಿದ್ದ ಸಾರ್ವಜನಿಕ ಹಿತಾಸಕ್ತಿಯ ಎಲ್ಲಾ ಅರ್ಜಿಗಳನ್ನು, ಸಂಬಂಧಪಟ್ಟ ನ್ಯಾಯವಾದಿಗಳ ಗಮನಕ್ಕೆ ತಾರದೆಯೇ ಗುವಾಹಟಿಯ ಪ್ರಧಾನ ನ್ಯಾಯಪೀಠಕ್ಕೆ ವರ್ಗಾಯಿಸಿದ್ದಾರೆ. ಈ ಪಿಐಎಲ್‌ಗಳ ಪೆೈಕಿ ತಾನು ನಿರ್ವಹಿಸುತ್ತಿರುವ ಒಂದು ಪ್ರಕರಣವನ್ನು ಹೊರತುಪಡಿಸಿ, ಉಳಿದವುಗಳ ವಿಚಾರಣೆಗೆ ನಿರ್ದಿಷ್ಟ ನ್ಯಾಯವಾದಿಯೊಬ್ಬರನ್ನು ಅಮಿಕಸ್ ಕ್ಯೂರಿ(ನ್ಯಾಯಾಂಗ ಸಲಹೆಗಾರ) ಯಾಗಿ ನೇಮಿಸಿದ್ದಾರೆಂದು ಅದು ಹೇಳಿದೆ.
ಈ ವರ್ಷದ ಆಗಸ್ಟ್ 7ರಂದು, ಜಿಎಚ್‌ಎಸಿಬಿ ವಿಶೇಷ ಮಹಾಸಭೆಯೊಂದನ್ನು ನಡೆಸಿ ಗುವಾಹಟಿಯ ಪ್ರಧಾನ ನ್ಯಾಯಪೀಠಕ್ಕೆ ಕಳುಹಿಸಲಾಗಿರುವ ಎಲ್ಲಾ ಪಿಐಎಲ್‌ಗಳನ್ನು ಗುವಾಹಟಿ ಹೆೈಕೋರ್ಟ್ ಪೀಠಕ್ಕೆ ಮರುವರ್ಗಾಯಿಸಬೇಕು ಹಾಗೂ ಈ ಪಿಐಎಲ್‌ಗಳ ವಿಚಾರಣೆಗೆ ಅಮಿಕಸ್ ಕ್ಯೂರಿಯಾಗಿ ನಿರ್ದಿಷ್ಟ ನ್ಯಾಯವಾದಿಯೊಬ್ಬರ ನೇಮಕವನ್ನು ರದ್ದುಪಡಿಸಬೇಕೆಂಬ ನಿರ್ಣಯವನ್ನು ಅಂಗೀಕರಿಸಿರುವುದಾಗಿ ಮನವಿ ಪತ್ರವು ಹೇಳಿದೆ.
ನ್ಯಾಯಮೂರ್ತಿ ರಾವ್ ಅವರ ನಡವಳಿಕೆಯು, ಅವರು ಹೊಂದಿರುವ ಉನ್ನತವಾದ ಸಾಂವಿಧಾನಿಕ ಹುದ್ದೆಗೆ ಯೋಗ್ಯವಾಗಿಲ್ಲ ಹಾಗೂ ಗುವಾಹಟಿ ಹೆೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅವರ ಮುಂದುವರಿಕೆಯು ಅಸ್ಸಾಂನ ಹಾಗೂ ಇಟಾನಗರ (ಅರುಣಾಚಲಪ್ರದೇಶ), ಕೊಹಿಮಾ (ನಾಗಾಲ್ಯಾಂಡ್) ಹಾಗೂ ಐಝ್ವಾಲ್ (ಮಿರೆರಾಂ) ಅದರ ನ್ಯಾಯಪೀಠಗಳ ಆವಶ್ಯಕತೆಗಳಿಗೆ ಅನುಗುಣವಾಗಿಲ್ಲವೆಂದು ಅದು ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ರಾವ್ ಅವರನ್ನು ನ್ಯಾಯಾಂಗ ಕಾರ್ಯನಿರ್ವಹಣೆಯಿಂದ ಹೊರಗಿಡಬೇಕೆಂದು ಅದು ಆಗ್ರಹಿಸಿದೆ.

Write A Comment