ರಾಷ್ಟ್ರೀಯ

ಮುಂಗಾರು ಮಳೆ ಕೊರತೆ: ಬರದ ಕರಿನೆರಳಲ್ಲಿ ಭಾರತ

Pinterest LinkedIn Tumblr

Mangalore_Havey_Rain_8ಹೊಸದಿಲ್ಲಿ, ಸೆ.2: ಭಾರತದ ಶೇ.40ರಷ್ಟು ಭೂಭಾಗವು ಮಳೆಯ ‘ಕೊರತೆ’ ಎದುರಿಸುತ್ತಿರುವುದರಿಂದ ದೇಶದ ವಿಶಾಲ ಭಾಗದಲ್ಲಿ ಕ್ಷಾಮದ ಕರಿನೆರಳು ಕಾಣಿಸಿಕೊಂಡಿದೆ.
ಇಂದಿನ ದಿನದ ಅನುಸಾರ, ದೇಶದ ಶೆ.47 ಭಾಗದಲ್ಲಿ ಸಾಮಾನ್ಯ ಮಳೆಯಾಗಿದ್ದರೆ, ಶೇ.40ರಷ್ಟು ಕೊರತೆಯಾಗಿದೆ. ಶೇ.13 ಆಲಿಕಲ್ಲಿನ ಮಳೆಯಾಗಿದೆ. ಒಟ್ಟಾರೆ ಕೊರತೆಯು ಶೇ.12ಕ್ಕೆ ತಲುಪಿದೆಯೆಂದು ತಿಳಿಸಿರುವ ಭಾರತದ ಹವಾಮಾನ ಇಲಾಖೆ, ನೈಋತ್ಯ ಮಾರುತಗಳು ಈ ತಿಂಗಳಿನಿಂದ ಹಿಂದೆಗೆಯಲಾರಂಭಿಸುವುದರಿಂದ ಪರಿಸ್ಥಿತಿಯು ತೀರಾ ಹದಗೆಡುವ ಸಾಧ್ಯತೆಯಿದೆಯೆಂದು ಅಭಿಪ್ರಾಯಿಸಿದೆ.
ಕರ್ನಾಟಕದ ಉತ್ತರ ಒಳನಾಡಿನಲ್ಲಿ ಶೇ.43ರಷ್ಟು ಮಳೆಯ ಕೊರತೆಯಾಗಿದೆ. ಬರಗಾಲವನ್ನು 40 ವರ್ಷಗಳಲ್ಲೇ ಅತಿಕೆಟ್ಟದೆಂದು ಬಣ್ಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದನ್ನೊಂದು ಸವಾಲಾಗಿ ಸ್ವೀಕರಿಸಿ, ಬರವನ್ನು ನಿಭಾಯಿಸಲು ಸಮರೋಪಾದಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಹಾರಾಷ್ಟ್ರದ ಪಾರಂಪರಿಕ ಒಣ ಭೂಮಿ ಮರಾಠಾವಾಡದಲ್ಲೂ, ಸಾಮಾನ್ಯಕ್ಕಿಂತ ಶೇ.51ರಷ್ಟು ಕಡಿಮೆ ಮಳೆಯಾಗಿರುವುದರಿಂದ ಅದು ಕ್ಷಾಮದ ದವಡೆಯಿಲ್ಲಿದೆ. ಒಟ್ಟು 36 ಉಪವಿಭಾಗಗಳಲ್ಲಿ 17 ಉಪವಿಭಾಗಗಳು ಮಳೆಯ ಕೊರತೆಯನ್ನು ಅನುಭವಿಸಿವೆ. 16 ಉಪವಿಭಾಗಗಳಲ್ಲಿ ಸಾಮಾನ್ಯ ಮಳೆಯಾಗಿದೆ. ಕೇವಲ 3 ಉಪವಿಭಾಗಗಳಲ್ಲಿ ಹೆಚ್ಚುವರಿ ಮಳೆಯಾಗಿದೆ.
ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಬರದಂತಹ ಪರಿಸ್ಥಿತಿಯಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮರಾಠಾವಾಡ, ಅಹ್ಮದ್‌ನಗರ, ಹಾಗೂ ಸೋಲಾಪುರ ಜಿಲ್ಲೆಗಳ ಬರಪೀಡಿತ ಪ್ರದೇಶಗಳಲ್ಲಿ ಇಂದು ಪರಿಶೀಲನೆಗಾಗಿ ಹೋಗಿದ್ದಾರೆ. ಕೊಂಕಣ ಮತ್ತು ಗೋವಾ ಪ್ರದೇಶಗಳಲ್ಲಿ ಶೇ.32ರಷ್ಟು ಮಳೆಯ ಕೊರತೆಯಾಗಿದೆ. ಮರಾಠಾವಾಡದಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತ ಒಟ್ಟಾರೆ ಶೇ.56.6ರಷ್ಟು ಮಾತ್ರ ಮಳೆಯಾಗಿರುವುದರಿಂದ ಅಲ್ಲಿ ಭಾರೀ ನೀರಿನ ಕೊರತೆ ಎದುರಾಗಿದೆಯೆಂದು ಮಹಾರಾಷ್ಟ್ರ ಸರಕಾರ ಹೇಳಿದೆ. ರಾಜ್ಯದ ಜಲಾಶಯಗಳು ತಮ್ಮ ಸಾಮರ್ಥ್ಯದ ಶೇ.49ರಷ್ಟು ಮಾತ್ರ ತುಂಬಿವೆ.
ರಾಜ್ಯದ ಒಟ್ಟು 355 ತಾಲೂಕುಗಳಲ್ಲಿ 5 ತಾಲೂಕುಗಳು ಶೇ.0.25ರ ನಡುವೆ ಮಳೆ ಪಡೆದಿವೆ. 107 ತಾಲೂಕುಗಳಲ್ಲಿ ಶೇ.25-50ರಷ್ಟು ಮಳೆಯಾಗಿದೆ. 152 ತಾಲೂಕುಗಳಲ್ಲಿ ಶೇ.51-75ರಷ್ಟು ಮಳೆ ಬಿದ್ದಿದೆ. 70 ತಾಲೂಕುಗಳಲ್ಲಿ ಕೇವಲ ಶೇ.76-100ರ ನಡುವೆ ಮಳೆಯಾಗಿದ್ದರೆ, ಕೇವಲ 21 ತಾಲೂಕುಗಳಲ್ಲಿ ಮಾತ್ರ ಶೇ.100 ಅಥವ ಹೆಚ್ಚು ಮಳೆ ಬಿದ್ದಿದೆ.

Write A Comment