ರಾಷ್ಟ್ರೀಯ

ಯಾಕೂಬ್ ಮೆಮನ್ ಪ್ರಕರಣದಲ್ಲಿ ಸೂಕ್ತ ಪ್ರಕ್ರಿಯೆ ಅನುಸರಿಸಬೇಕಿತ್ತು: ನ್ಯಾ.ಶಾ

Pinterest LinkedIn Tumblr

yakubಹೊಸದಿಲ್ಲಿ, ಸೆ.2: ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿದ ಕುರಿತು ಕಾನೂನು ಆಯೋಗದ ನಿರ್ಗಮನ ವರಿಷ್ಠ ನ್ಯಾ.ಅಜಿತ್ ಪ್ರಕಾಶ್ ಶಾ ಪ್ರಬಲ ಆಕ್ಷೇಪದ ಧ್ವನಿಯೆತ್ತಿದ್ದಾರೆ. ಅಪರಾಧಿಯ ದಯಾ ಭಿಕ್ಷೆ ಅರ್ಜಿಯನ್ನು ಇನ್ನಷ್ಟು ಪರಿಶೀಲಿಸ ಬೇಕಿತ್ತು ಹಾಗೂ ಸೂಕ್ತ ಪ್ರಕ್ರಿಯೆಯನ್ನು ಅನುಕರಿಸ ಬೇಕಿತ್ತೆಂದು ಅವರು ಎನ್‌ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಿಸಿದ್ದಾರೆ.

ಪ್ರಕರಣದ ಎರಡು ಅಥವಾ ಮೂರು ಅಂಶಗಳು ತನ್ನನ್ನು ನಿಜವಾಗಿ ದಿಗ್ಭ್ರಾಂತಗೊಳಿಸಿವೆ. ಅದೇ ನಿರ್ದಿಷ್ಟ ದಿನ ಏಕೆ ಪವಿತ್ರವಾಗಿತ್ತು? ಪ್ರಕರಣವನ್ನು ವಿಶಾಲ ಪೀಠಕ್ಕೆ ಒಪ್ಪಿಸಿದ್ದಾಗ ನ್ಯಾಯಾಲಯವು ಆದೇಶಕ್ಕೆ ತಡೆಯಾಜ್ಞೆ ಮಂಜೂರಾತಿಯನ್ನು ಏಕೆ ಪರಿಗಣಿಸಲಿಲ್ಲ? ದಯಾ ಭಿಕ್ಷೆ ಅರ್ಜಿ ತಿರಸ್ಕರಿಸಿದುದನ್ನು ಪ್ರಶ್ನಿಸಲು ಆರೋಪಿಗೆ ಅಥವಾ ಅಪರಾಧಿಗೆ ಅವಕಾಶವೊಂದನ್ನು ಏಕೆ ನೀಡಿಲ್ಲವೆಂದು ಶಾ ಪ್ರಶ್ನಿಸಿದ್ದಾರೆ. 1993ರಲ್ಲಿ 257 ಜನರ ಸಾವಿಗೆ ಕಾರಣವಾಗಿದ್ದ ಮುಂಬೈ ಸರಣಿ ಬಾಂಬ್ ಸ್ಫೋಟಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಅಪರಾಧ ಸಾಬೀತಾದ ಬಳಿಕ ಯಾಕೂಬ್ ಸುಮಾರು 20 ವರ್ಷಗಳ ಕಾಲ ನಾಗಪುರ ಬಂದಿಖಾನೆಯಲ್ಲೇ ಇದ್ದನು. ಆತನನ್ನು ಜುಲೈ ಆರಂಭದಲ್ಲಿ ಅಲ್ಲಿಯೇ ಗಲ್ಲಿಗೇರಿಸಲಾಗಿತ್ತು.

ಶಾ ನೇತೃತ್ವದ ಸಮಿತಿಯೊಂದು ಭಯೋತ್ಪಾದನೆಯ ಪ್ರಕರಣಗಳನ್ನು ಹೊರತುಪಡಿಸಿ ಮರಣದಂಡನೆಯನ್ನು ರದ್ದುಗೊಳಿಸಬೇಕು. ಅದು ಜನರಿಗೆ ಹೆಚ್ಚು ಅಂಗೀಕಾರಾರ್ಹವಾಗಬಹುದೆಂದು ಶಿಫಾರಸು ಮಾಡಿದ ಕೇವಲ ಒಂದು ದಿನದ ಬಳಿಕ ಅವರ ಈ ಹೇಳಿಕೆ ಹೊರಟಿದೆ. ಆದಾಗ್ಯೂ, ಸಾರ್ವಜನಿಕ ಅಭಿಪ್ರಾಯ ಮರಣದಂಡನೆಯ ಪರವಿದ್ದಾಗಲೂ, ಡಿ ಗೇಲ್ ಆಡಳಿತದಲ್ಲಿ ಫ್ರಾನ್ಸ್ ಹೇಗೆ ಅದನ್ನು ರದ್ದುಪಡಿಸಿತೆಂಬುದರತ್ತ ಶಾ ಬೆಟ್ಟು ಮಾಡಿದ್ದಾರೆ.

ನಿವೃತ್ತಿಯಾದ ಬಳಿಕ, ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತನ್ನ ಮುಂದಿರಿಸಿದ ಲೋಕಾಯುಕ್ತ ಹುದ್ದೆಯನ್ನು ಅಂಗೀಕರಿಸದಿರುವುದಕ್ಕೆ ಕಾರಣ ನೀಡಿದ ಅವರು, ಕೇಂದ್ರ-ರಾಜ್ಯಗಳ ನಡುವಿನ ಭಿನ್ನಾಭಿಪ್ರಾಯ ಅಲ್ಲಿ ಅಧಿಕಾರಿಗಳು ಹಾಗೂ ಇತರರ ಮೇಲೆ ಪರಿಣಾಮ ಬೀರಿದೆ. ಅದರಲ್ಲಿ ತಾನು ಸೇರಿಕೊಳ್ಳಲು ಬಯಸುವುದಿಲ್ಲ ಎಂದಿದ್ದಾರೆ.

ಅವರ ಈ ನಿರ್ಧಾರವು ಕೇಜ್ರಿವಾಲ್ ಹಾಗೂ ಲೆಫ್ಟಿನೆಂಟ್ ಗವರ್ನರರ ನಡುವಿನ ತಿಕ್ಕಾಟದಿಂದ ಪ್ರಭಾವಿತವಾಗಿದೆಯೇ ಎಂಬ ಪ್ರಶ್ನೆಗೆ, ಶಾ ಕೇವಲ ನಗುವಿನಲ್ಲೇ ಪ್ರತಿಕ್ರಿಯಿಸಿದ್ದಾರೆ.
ಅವರು, ‘ಅಜೆಂಡಾ’ ಎಂಬ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

Write A Comment