ಹೊಸದಿಲ್ಲಿ: ಗಲ್ಲು ಶಿಕ್ಷೆ ಬೇಕೋ ಅಥವಾ ಅದನ್ನು ರದ್ದು ಮಾಡಬೇಕೋ ಎಂಬ ವಿಚಾರದ ಕುರಿತು ಅಧ್ಯಯನ ನಡೆಸಿ, ವ್ಯಾಪಕ ಸಂವಾದ, ಚರ್ಚೆ ಏರ್ಪಡಿಸಿ ತಯಾರಿಸಿರುವ ಅಂತಿಮ ವರದಿಯನ್ನು ಕಾನೂನು ಆಯೋಗವು ಮುಂದಿನ ವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದೆ. ಆಯೋಗದ ಬಳಿ ಅಭಿಪ್ರಾಯ ಹಂಚಿಕೊಂಡಿರುವ ಅನೇಕ ಪರಿಣತರು, ಗಣ್ಯರು ಭಾರತದಲ್ಲಿ ಮರಣದಂಡನೆ ರದ್ದಾಗಬೇಕು ಎಂದೇ ವಾದಿಸಿದ್ದಾರೆ.
ವರದಿಯ ಒಂದು ಪ್ರತಿಯನ್ನು ಕಾನೂನು ಸಚಿವರಿಗೂ ಸಲ್ಲಿಸಲಾಗುತ್ತಿದ್ದು, ಇದರಲ್ಲಿ ಯಾವುದಾದರೂ ಬದಲಾವಣೆ ಮಾಡಬೇಕಿದ್ದರೆ ಅದನ್ನು ಸಂಸತ್ತು ನೆರವೇರಿಸಲಿದೆ.
ಮುಂಬಯಿ ಸರಣಿ ದಾಳಿಯ ಅಪರಾಧಿ ಯಾಕೂಬ್ ಮೆಮೊನ್‌ಗೆ ಗಲ್ಲು ಶಿಕ್ಷೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಮರಣದಂಡನೆಯ ಪರ ಮತ್ತು ವಿರೋಧ ಚರ್ಚೆಗಳು ಎದ್ದಿರುವ ನಡುವೆಯೇ ಕಾನೂನು ಆಯೋಗದ ವರದಿ ಸಲ್ಲಿಕೆಯಾಗುತ್ತಿದೆ. ಕಾನೂನು ಆಯೋಗದ ಮೂರು ವರ್ಷದ ಅವಧಿ ಆ.31ರ ಹೊತ್ತಿಗೆ ಅಂತ್ಯಗೊಳ್ಳುತ್ತಿದ್ದು, ಅಷ್ಟರೊಳಗೆ ವರದಿ ಸಲ್ಲಿಸುವ ಸಲುವಾಗಿ ಆಯೋಗ ಹಗಲು-ರಾತ್ರಿ ಶ್ರಮಿಸಿದೆ.
ಸಂತೋಷ್ ಕುಮಾರ್ ಸತೀಶ್‌ಭೂಷಣ್ ಬಿರಿಯರ್ ವರ್ಸಸ್ ಮಹಾರಾಷ್ಟ್ರ ಹಾಗೂ ಶಂಕರ್ ಕಿಸನ್‌ರಾವ್ ಖಾಡೆ ವರ್ಸಸ್ ಮಹಾರಾಷ್ಟ್ರ ಪ್ರಕರಣಗಳ ಸಂಬಂಧ ಮರಣದಂಡನೆ ಅಗತ್ಯವೋ ಅಥವಾ ಅನಗತ್ಯವೋ ಎಂಬುದನ್ನು ಅಧ್ಯಯನ ಮಾಡುವಂತೆ ಕಾನೂನು ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.
ಮರಣ ದಂಡನೆ ಕುರಿತು ಸಾರ್ವಜನಿಕ ಮಟ್ಟದಲ್ಲೂ ವ್ಯಾಪಕ ಚರ್ಚೆಯಾಗಬೇಕು ಮತ್ತು ಇದರಿಂದ ವರದಿ ತಯಾರಿಕೆಗೆ ಅನುಕೂಲವಾಗುತ್ತದೆ ಎಂದು ಕಳೆದ ವರ್ಷದ ಮೇ 22ರಂದು ಕಾನೂನು ಆಯೋಗ ವಾದಿಸಿತ್ತು. ಕಳೆದ ತಿಂಗಳೂ ಗಲ್ಲು ಶಿಕ್ಷೆಯ ಕುರಿತು ಚರ್ಚೆ ಏರ್ಪಟ್ಟಿತ್ತು. ಈ ವೇಳೆ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ, ಡಿಎಂಕೆ ನಾಯಕಿ ಕನ್ನಿಮೋಳಿ ಮುಂತಾದವರು ಗಲ್ಲು ಶಿಕ್ಷೆ ರದ್ದಾಗಬೇಕೆಂದು ಆಯೋಗವನ್ನು ಆಗ್ರಹಿಸಿದ್ದರು.
ಕಿರಾತಕರಿಗೆ ಗಲ್ಲು ಸರಿ: ಸುಪ್ರೀಂ ಹೊಸದಿಲ್ಲಿ: ಹಣಕ್ಕಾಗಿ ಮಕ್ಕಳು ಮರಿಯೆನ್ನದೆ ಜರನ್ನು ಅಪಹರಿಸುವ, ಅವರನ್ನು ಅಮಾನವೀಯವಾಗಿ ಕೊಲೆಗೈಯ್ಯುವ ಪ್ರಕರಣಗಳು ಸಾಧಾರಣ ಅಪರಾಧಿಗಳಿಂದ ಹಿಡಿದು ಭಯೋತ್ಪಾದಕ ಮಟ್ಟದವರೆಗೆ ಹೆಚ್ಚುತ್ತಿದ್ದು, ಇದಕ್ಕೆ ಮರಣದಂಡನೆಯಂಥ ಕಠಿಣ ಶಿಕ್ಷೆ ನೀಡುವುದು ಅಮಾನವೀಯವೇನಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗೆಯೇ, 16 ವರ್ಷದ ಹುಡುಗಿಯನ್ನು ಅಪಹರಿಸಿ ಕೊಂದು ಹಾಕಿದ್ದ ವಿಕ್ರಮ್ ಸಿಂಗ್ ಎಂಬಾತನಿಗೆ ಪಂಜಾಬ್‌ನ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ.