ಬೆಂಗಳೂರು: ಬೆಂಗಳೂರಿನ ಪೀಣ್ಯ ಮುಖ್ಯರಸ್ತೆಯ ಎಸ್‌ಆರ್‌ಎಸ್ ಕ್ರಾಸ್ ಬಳಿ ಇಂದು ಮುಂಜಾನೆ ಬೈಕ್ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಅಫಘಾತದಲ್ಲಿ 7 ವರ್ಷದ ಬಾಲಕ ಮೃತಪಟ್ಟು ಆತನ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಕಣ್ಣೆದುರೆ ಮಗ ಕೊನೆಯುಸಿರೆಳೆದಿದ್ದನ್ನು ಕಂಡ ತಾಯಿ ಪ್ರಜ್ಞೆ ಕಳೆದುಕೊಂಡಿದ್ದಾಳೆ.
ಚಿಕ್ಕಬಾಣಾವರದಲ್ಲಿರುವ ತಾಯಿ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇದ್ದ ಕಾರಣ ಗಾಯತ್ರಿ ನಗರದ ನಿವಾಸಿ ಸುನಿತಾ ತನ್ನ ಮಗ ಲಿಖಿತ್ ಗೌಡ ಜೊತೆ ತೆರಳುತ್ತಿದ್ದರು. ದ್ವಿಚಕ್ರವಾಹನಕ್ಕೆ ಬಸ್ ಡಿಕ್ಕಿ ಹೊಡೆದು ಬಾಲಕ ಕೆಳಗೆ ಬೀಳುತ್ತಿದ್ದಂತೆ, ಮಗುವಿನ ಮೇಲೆ ಬಸ್ ಹರಿದಿದೆ. ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಕಣ್ಣ ಮುಂದೆಯೇ ಪ್ರಾಣ ಬಿಟ್ಟ ಕಂದಮ್ಮನನ್ನು ನೋಡಿ, ತಾಯಿ ಮೂರ್ಛೆ ಹೋಗಿದ್ದಾರೆ. ಸುನಿತಾ ಅವರಿಗೆ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರ್ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದು, ಬಸ್ ಚಾಲಕನನ್ನು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.