ಕಾನ್ಪುರ: ಆಕೆ ಕಾರ್ಮಿಕ ಮಹಿಳೆ. ಆಕೆಯ ಸಂಬಳ ತಿಂಗಳಿಗೆ ಕೇವಲ ಮೂರ್ನಾಲ್ಕು ಸಾವಿರ ರೂ.ಗಳಷ್ಟೇ. ಇತ್ತೀಚೆಗೆ ತಾನು ಹೊಂದಿದ್ದ ಖಾತೆಯಲ್ಲಿನ ಹಣ ಎಂಟ್ರಿ ಮಾಡಿಸಲು ಮಹಿಳೆ ಪಾಸ್ ಬುಕ್ ತೆಗೆದುಕೊಂಡು ಹೋಗಿದ್ದ ವೇಳೆ ಅದರಲ್ಲಿದ್ದ ಹಣ ಕಂಡು ಬ್ಯಾಂಕ್ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.
ಹೌದು ಇಂತದೊಂದು ಘಟನೆ ಕಾನ್ಪುರದಲ್ಲಿ ನಡೆದಿದ್ದು, ಊರ್ಮಿಳಾ ಎಂಬ ಈ ಮಹಿಳೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಹೊಂದಿದ್ದ ಖಾತೆಯಲ್ಲಿ ಬರೋಬ್ಬರಿ 95 ಸಾವಿರ ಕೋಟಿ ರೂ. ಜಮೆಯಾಗಿರುವುದು ಗೊತ್ತಾಗಿದೆ. ಇದನ್ನು ಕಂಡು ಬ್ಯಾಂಕ್ ಅಧಿಕಾರಿಗಳು ಒಂದು ಕ್ಷಣ ಹೌಹಾರಿದ್ದಾರೆ.
ಬಳಿಕ ಪರಿಶೀಲನೆ ನಡೆಸಿದ ವೇಳೆ ಬ್ಯಾಂಕ್ ಸಿಬ್ಬಂದಿಯೊಬ್ಬ ಮಾಡಿದ ಯಡವಟ್ಟಿನಿಂದಾಗಿ ಈ ಪ್ರಮಾದ ಸಂಭವಿಸಿರುವುದು ಗೊತ್ತಾದ ಬಳಿಕ ತಪ್ಪನ್ನು ಸರಿಪಡಿಸಿ ಬ್ಯಾಂಕ್ ನವರು ನಿಟ್ಟುಸಿರುಬಿಟ್ಟಿದ್ದಾರೆ. ಊರ್ಮಿಳಾ, ಅಂತೂ ಒಂದು ದಿನದ ಮಟ್ಟಿಗಾದರೂ ತಾತ್ಕಾಲಿಕವಾಗಿ ಸಾವಿರಾರು ಕೋಟಿ ರೂ. ಗಳ ಒಡತಿ ಎಂದು ಸಮಾಧಾನಪಟ್ಟುಕೊಳ್ಳಬೇಕಾಗಿದೆ.