ರಾಷ್ಟ್ರೀಯ

ಒತ್ತಡ ನಿವಾರಣೆಗೆ green

Pinterest LinkedIn Tumblr

4* ಸುನೀತಾ ಬಿ ಎಂ
ಟೀ , ಕಾಫಿಗಿಂತ ಈಗ ಗ್ರೀನ್ ಟೀ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಅಮೆರಿಕದಲ್ಲಿ ಅಧಿಕವಾಗಿ ಬಳಸಲಾಗುತ್ತಿದ್ದ ಗ್ರೀನ್ ಟೀ ಇದೀಗ ಭಾರತದಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿದೆ. ಹಾಗಂಥ ಗ್ರೀನ್ ಟೀ ನಿನ್ನೆ ಮೊನ್ನೆಯದಲ್ಲ. ಕ್ರಿ.ಪೂ. 600ರಲ್ಲೇ ಚೀನಾದಲ್ಲಿ ಗ್ರೀನ್ ಟೀ ತಯಾರಿಸಲಾಗುತ್ತಿತ್ತು ಎಂಬ ಬಗ್ಗೆ ಪುರಾವೆಗಳಿವೆ. ಕ್ಯಾಮೆರಲಿಯಾ ಸೈನೆನ್ಸಿಸ್ ಎಂಬ ಜಾತಿಯ ಟೀ ಗಿಡವೇ ಗ್ರೀನ್ ಟೀ ಮೂಲ. ಈ ಹಿಂದೆ ಔಷಧಿಯಂತೆ ಬಳಸಲಾಗುತ್ತಿದ್ದ ಈ ಎಲೆಗಳನ್ನು ಈಗ ಟೀಯಂತೆ ಉಪಯೋಗಿಸಿಕೊಳ್ಳಲಾಗುತ್ತಿದೆ.

ಪ್ರತಿದಿನ ಗ್ರೀನ್ ಟೀ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ತ್ವಚೆ ಕಾಂತಿ ಹೆಚ್ಚಾಗುವುದಲ್ಲದೆ, ಜೀರ್ಣಕ್ರಿಯೆಯೂ ಸುಲಭವಾಗುತ್ತದೆ. ದೇಹದಲ್ಲಿ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಜೊತೆಗೆ ಮೂತ್ರಪಿಂಡ, ಹೃದಯ ರೋಗ ಮತ್ತು ಅನಿಯಮಿತ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಆದರೆ ಸರಿಯಾದ ಸಮಯದಲ್ಲಿ ಗ್ರೀನ್ ಟೀ ಸೇವಿಸಿದರೆ ಮಾತ್ರ ಇದೆಲ್ಲ ಸಾಧ್ಯ. ಗ್ರೀನ್ ಟೀಯಲ್ಲಿರುವ ಎಪಿಗಾಲೊಕೇಟ್‌ಚಿನ್ 3 ಗ್ಯಾಲೆಟ್ ಪಾಲಿಫೆನಾಲ್ ಅಂಶ ಆರೋಗ್ಯಕ್ಕೆ ಪೂರಕವಾಗಿರುವುದರಿಂದ ಕ್ಯಾನ್ಸರ್ ತಡೆಗಟ್ಟುವಲ್ಲೂ ಸಾಕಷ್ಟು ಸಹಕಾರಿಯಾಗಿದೆ.

ಮನಷ್ಯನ ಆಯಸ್ಸು ಹೆಚ್ಚಿಸಲು ಭಾರತ, ಚೀನಾದಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಒತ್ತಡ, ಬದಲಾದ ಜೀವನಶೈಲಿ, ಏರುಪೇರಾಗಿರುವ ಆಹಾರ ಪದ್ಧತಿ ಇವೆಲ್ಲಕ್ಕೂ ಅಗತ್ಯವಿರುವ ಔಷಧಗಳೊಂದಿಗೆ ‘ಗ್ರೀನ್ ಟೀ’ ಹೆಸರು ಕೇಳಿಬರುತ್ತಿದೆ. ಇನ್ನು ಸೌಂದರ್ಯ ಹೆಚ್ಚಿಸಿಕೊಳ್ಳಲೂ ಗ್ರೀನ್ ಟೀ ಕಷಾಯ ಬಳಸಿಕೊಳ್ಳಲಾಗುತ್ತದೆ.

ಪಾನೀಯ ರೂಪ: ಅತಿ ಹೆಚ್ಚು ಆ್ಯಂಟಿಯಾಕ್ಸಿಡೆಂಟ್, ಅಮಿನೊ ಆಸಿಡ್, ಕಾರ್ಬೊಹೈಡ್ರೇಟ್, ಲಿಪಿಡ್ ಅಂಶಗಳನ್ನು ಹೊಂದಿರುವ ಗ್ರೀನ್ ಟೀ ರಕ್ತ ಹೆಪ್ಪುಗಟ್ಟುವಿಕೆ, ಗಾಯ ಗುಣಪಡಿಸಲು, ಜೀರ್ಣಕ್ರಿಯೆಗೆ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು, ಹೃದಯ ಸ್ವಾಸ್ಥ್ಯಕ್ಕೆ ಹಾಗೂ ದೇಹದ ಉಷ್ಣವನ್ನು ಸಮತೋಲನಗೊಳಿಸಲು ಬಳಸಲಾಗುತ್ತಿತ್ತು. ಆದರೆ ಕಾಲ ಸರಿದಂತೆ ಔಷಧದಂತಿದ್ದ ಗ್ರೀನ್ ಟೀಗೆ ಪಾನೀಯ ರೂಪ ಬಂದಿದೆ.

ತಯಾರಿಕೆ: ಒಂದು ಕಪ್ ಕುದಿಯುವ ನೀರನ್ನು ಕಪ್‌ಗೆ ಹಾಕಿ, ಅದಕ್ಕೆ ಹಸಿರೆಲೆಗಳನ್ನೇ ಹಾಕಿ ಮುಚ್ಚಿಡಬೇಕು. ನೀರಿನೊಂದಿಗೆ ಈ ಎಲೆಯನ್ನು ಕುದಿಸಬಾರದು. ಎರಡು ಮೂರು ನಿಮಿಷಗಳಷ್ಟು ಅವಧಿಗೆ ಮಾತ್ರ ಹೀಗೆ ನೀರಿನಲ್ಲಿ ನೆನೆಸಬೇಕು. ಆಗ ಅದರ ಪರಿಣಾಮ ಸೊಗಸಾಗಿರುತ್ತದೆ. ಗ್ರೀನ್ ಟೀಯನ್ನು ತಣಿಸಿ ಕುಡಿಯಬಾರದು ಹಾಗೂ ಮತ್ತೆ ಬಿಸಿ ಮಾಡಲೂಬಾರದು. ಎಲೆ ತೆಗೆದ ನಂತರವೇ ಸೇವಿಸುವುದು ಒಳಿತು. ಡಯಟ್ ಮಾಡುವವರು ಸಕ್ಕರೆ ಬದಲಿಗೆ ಜೇನು ಬಳಸಬಹುದು.

ಚಿಟಿಕೆ ಶುಂಠಿ, ತುಳಸಿ ಎಲೆ, ಮಾಧುರ್ಯಕ್ಕಾಗಿ ಪುದಿನಾ ಎಲೆಯ ಒಂದೆಸಳನ್ನು ನೀರು ಕುದಿಯುವಾಗಲೇ ಹಾಕಬಹುದು. ನಂತರ ಕುಡಿಯುವ ಮುನ್ನ ನಿಂಬೆರಸವನ್ನೂ ಬೆರೆಸಿದರೆ ತಾಜಾ ಆಗಿರುತ್ತದೆ.

ಗ್ರೀನ್ ಟೀ ತಾಜಾ ಎಲೆ ಅಥವಾ ಪರಿಷ್ಕರಿಸಿದ ಒಣಗಿದ ಎಲೆಗಳೇ ಮಳಿಗೆಗಳಲ್ಲಿ ಲಭ್ಯವಾಗುತ್ತವೆ. ಚಿಕ್ಕ ಚಿಕ್ಕ ಟೀ ಬ್ಯಾಗ್‌ಗಳೂ ದೊರೆಯುತ್ತವೆ. ಅವುಗಳನ್ನೂ ಬಳಸಲು ಅಡ್ಡಿಯಿಲ್ಲ.

ಹಲವು ಬಗೆ ಗ್ರೀನ್ ಟೀ ಹಲವಾರು ಬಗೆಯಲ್ಲಿ ಲಭ್ಯವಿದೆ. ಹಲವು ಫ್ಲೇವರ್‌ಗಳನ್ನು ಹೊಂದಿರುವ ಗ್ರೀನ್ ಟೀಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವುದು ಚೆಸ್‌ನಟ್ ಫ್ಲೇವರ್, ನಟ್ಟಿ ಟೋಸ್ಟಿ ಫ್ಲೇವರ್, ಪಾಪ್‌ಕಾರ್ನ್‌ನೊಂದಿಗಿನ ಗ್ರೀನ್ ಟೀ, ಆಸ್ಟ್ರಿಂಜೆಂಟ್, ಪೀಚ್, ಪ್ಲಮ್, ಅಪ್ರಿಕಾಟ್ ಸುವಾಸನೆಗಳನ್ನು ಹೊಂದಿರುವ ಗ್ರೀನ್ ಟೀಗಳು ಲಭ್ಯ.

50 ಗ್ರಾಂ. ನಿಂದ ಹಿಡಿದು ಕೆ.ಜಿ ಲೆಕ್ಕದಲ್ಲೂ ಗ್ರೀನ್ ಟೀ ಸಿಗುತ್ತದೆ. ಸ್ಯಾಶೆಗಳು ನಲವತ್ತು ರೂ.ನಿಂದ ಆರಂಭಗೊಳ್ಳುತ್ತವೆ. 5000 ರೂ. ವರೆಗೂ ಬೆಲೆಬಾಳುವ ಟೀ ಎಲೆಯ ವೈವಿಧ್ಯವಿದೆ.

ಆರೋಗ್ಯಕ್ಕೂ ಸೈ * ತಲೆ ನೋವು, ಮೈ ಕೈ ನೋವು ನಿವಾರಣೆ.

* ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

* ಡಯಟ್, ತ್ವಚೆ ಆರೈಕೆ, ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.

* ಬೊಜ್ಜು, ಲಿವರ್ ಸಮಸ್ಯೆ, ಟೈಪ್ 2 ಮಧುಮೇಹಕ್ಕೂ ಮದ್ದು.

* ಕಾಫಿ, ಟೀ ರೀತಿಯ ಪಾನೀಯಗಳಂತೆಯೇ ಇದನ್ನೂ ಬಳಸಬಹುದು.

* ನಿದ್ರಾಹೀನತೆ, ಆತಂಕ, ಮುಂಗೋಪ, ಕಬ್ಬಿಣದ ಅಂಶವನ್ನು ಕಡಿಮೆ ಮಾಡುತ್ತದೆ.

ಬ್ಯೂಟಿಗೂ ಜೈ
* ಚಹಾದ ಕಷಾಯ ತಯಾರಿಸಿ, ಸಕ್ಕರೆ ಹಾಕದೆ ಮುಖಕ್ಕೆ ಹಚ್ಚಿ. ಮುಖ ತೊಳೆದರೆ ಕಾಂತಿಯುತ ಮುಖ ನಿಮ್ಮದಾಗುವುದು.

* ಚಹಾದ ಕಷಾಯಕ್ಕೆ ಹತ್ತಿ ಅದ್ದಿ ಅದನ್ನು ಫ್ರಿಜ್‌ನಲ್ಲಿಟ್ಟು ತೆಗೆದು ಕಣ್ಣಿನ ಮೇಲೆ ಇಟ್ಟುಕೊಳ್ಳುವುದರಿಂದ ಕಣ್ಣಿನ ಸುತ್ತಲಿರುವ ಕಪ್ಪು ವರ್ತುಲ ನಿವಾರಣೆಯಾಗುತ್ತದೆ.

* ಕೈ, ಕತ್ತು ಬಿಸಿಲಿನಿಂದಾಗಿ ಟ್ಯಾನ್ ಆಗಿದ್ದರೆ, ಈ ಕಷಾಯ ಹಚ್ಚಿ ತೊಳೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.

* ಕೂದಲು ಸೀಳಾಗಿದ್ದರೆ ತಲೆ ಸ್ನಾನ ಮಾಡುವಾಗ ಕೊನೆಯಲ್ಲಿ ಒಂದು ಕಪ್ ಹಸಿರು ಚಹಾದ ಕಷಾಯವನ್ನು ಒಂದು ಚಂಬು ನೀರಿಗೆ ಸೇರಿಸಿ ತಲೆಗೆ ಸುರಿದುಕೊಳ್ಳಿ. ಇದರಿಂದ ಕೂದಲು ಉದುರುವುದು, ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

* ಚಹಾದ ಕಷಾಯಕ್ಕೆ ಅಕ್ಕಿ ಹಿಟ್ಟು, ಜೇನುತುಪ್ಪ ಸೇರಿಸಿ ಪ್ಯಾಕ್ ತಯಾರಿಸಿ. ಮುಖಕ್ಕೆ ಹಚ್ಚಿ ತೊಳೆದುಕೊಳ್ಳುವುದರಿಂದ ಮೊಡವೆ ಕಲೆ, ರಂಧ್ರಗಳ ನಿವಾರಣೆಯಾಗುವುದು.

* ಕಷಾಯಕ್ಕೆ ಗಟ್ಟಿಮೊಸರು ಸೇರಿಸಿ ಮಸಾಜ್ ಮಾಡಿ ಮಾಡಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚಾಗುವುದು.

* ಕಷಾಯಕ್ಕೆ ಸಕ್ಕರೆ, ಜೇನುತುಪ್ಪ, ಚೂರು ಉಪ್ಪು ಸೇರಿಸಿ ಅನಗತ್ಯ ಕೂದಲ ಮೇಲೆ ಉಜ್ಜುತ್ತ ಬಂದರೆ ಕೂದಲು ಉದುರುವುದು ಮಾತ್ರವಲ್ಲ. ಮತ್ತೆ ಅಲ್ಲಿ ಕೂದಲ ಬೆಳವಣಿಗೆ ಕೂಡ ಆಗುವುದಿಲ್ಲ. ಅಂದಹಾಗೆ, ಗ್ರೀನ್ ಟೀ ಪೌಡರ್ ಅನ್ನು ಆರು ತಿಂಗಳಿಗಿಂತ ಹೆಚ್ಚಾಗಿ ಸ್ಟೋರ್ ಮಾಡಲು ಆಗುವುದಿಲ್ಲ. ಇಟ್ಟರೂ ನಂತರ ಬಳಸಬೇಡಿ.

ಹೆಚ್ಚು ಬೇಡ: ಗ್ರೀನ್ ಟೀ ಅನ್ನು ಅತಿ ಹೆಚ್ಚು ಕುಡಿಯುವಂತಲೂ ಇಲ್ಲ. ದಿನವೊಂದಕ್ಕೆ ಐದು ಕಪ್ ಗ್ರೀನ್ ಟೀ ಸೇವಿಸಿದರೆ ಆರೋಗ್ಯಕರ ಎನ್ನುವುದು ತಜ್ಞರ ಅಭಿಪ್ರಾಯ.

Write A Comment