ರಾಷ್ಟ್ರೀಯ

ವ್ಯಾಪಂ ಹಗರಣ: 8 ಮಂದಿ ಆರೋಪಿ ವೈದ್ಯಕೀಯ ವಿದ್ಯಾರ್ಥಿಗಳು ನಿಗೂಢ ನಾಪತ್ತೆ

Pinterest LinkedIn Tumblr

Vyapam

ಕಾನ್ಪುರ, ಜು.9: ಸ್ಥಳೀಯ ಜಿಎಸ್‌ವಿಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು 2013ರ ಮಧ್ಯಪ್ರದೇಶ ಪ್ರವೇಶ ಪರೀಕ್ಷಾ ಹಗರಣದಲ್ಲಿ(ವ್ಯಾಪಂ) ಶಾಮೀಲಾಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ, ಮಧ್ಯಪ್ರದೇಶದ ವಿಶೇಷ ಕಾರ್ಯಪಡೆ(ಎಸ್‌ಟಿಎಫ್) ಕಾಲೇಜಿನ ಮೇಲೆ ಹದ್ದಿನ ಕಣ್ಣಿರಿಸಿದೆ. ಕಾಲೇಜಿನ 8 ಮಂದಿ ವಿದ್ಯಾರ್ಥಿಗಳು ಆವರಣದಿಂದ ಕಾಣೆಯಾಗಿದ್ದಾರೆ.

ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಗೆ ಈ ವಿದ್ಯಾರ್ಥಿಗಳ ಇರವಿನ ಹಾಲಿ ಸ್ಥಿತಿಗತಿಯ ಕುರಿತು ತಿಳಿದಿಲ್ಲ. ಒಂದೋ ಈ ವಿದ್ಯಾರ್ಥಿಗಳು ಈಗಲೂ ಕಾರಾಗೃಹದಲ್ಲಿದ್ದಾರೆ ಅಥವಾ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆಂದು ಆಡಳಿತ ಮಂಡಳಿ ಶಂಕಿಸಿದೆ.

ಆದರೆ, ಅವರು ಕಾಲೇಜಿಗೆ ಮರಳಿ ಹಾಜರಾಗಿಲ್ಲ. ಈ ವಿದ್ಯಾರ್ಥಿಗಳು ವ್ಯಾಪಂ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಎಸ್‌ಟಿಎಫ್ ಆರೋಪಿಸಿರುವವರಾಗಿದ್ದಾರೆ.

2010 ಹಾಗೂ 2014ರ ನಡುವಣ ಬ್ಯಾಚ್‌ಗಳ ಈ ಕಾಣೆಯಾದ 8 ಮಂದಿ ವಿದ್ಯಾರ್ಥಿಗಳ ಬಗ್ಗೆ ತಮಗೆ ತಿಳಿದಿಲ್ಲ. ಈ ವಿದ್ಯಾರ್ಥಿಗಳ ಬಗ್ಗೆ ಹೆತ್ತವರಾಗಲಿ, ಮಧ್ಯಪ್ರದೇಶ ಪೊಲೀಸರಾಗಲಿ, ಮಾಹಿತಿ ಸಲ್ಲಿಸಿಲ್ಲ. ಅವರು ಕಳೆದ ಕೆಲವು ತಿಂಗಳುಗಳಿಂದ ತರಗತಿಗಳಿಗೆ ಗೈರುಹಾಜರಾಗಿದ್ದಾರೆಂದು ಅಜ್ಞಾತವಾಗುಳಿಯಬಯಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಮಾರು 22 ಮಂದಿ ವಿದ್ಯಾರ್ಥಿಗಳು ವಿಚಾರಣೆಯ ವೇಳೆ ತಪ್ಪಿತಸ್ಥರಲ್ಲವೆಂದು ಕಂಡುಬಂದಿದೆ ಅಥವಾ ಮಧ್ಯಪ್ರದೇಶಾದ್ಯಂತದ ವಿವಿಧ ಕಾರಾಗೃಹಗಳಿಂದ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಅವರೆಲ್ಲ ಕಾಲೇಜಿಗೆ ಮತ್ತೆ ಹಾಜರಾಗಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ, ಕಾರಾಗೃಹದಲ್ಲಿದ್ದ ಅವಧಿಯಲ್ಲಿ ತಪ್ಪಿದ ಪರೀಕ್ಷೆಗಳಿಗೆ ಹಾಗೂ ಪ್ರಾಯೋಗಿಕ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ನೀಡಲಾಗಿದೆ. ತನಿಖೆಯ ಬಳಿಕ ಜಿಎಸ್‌ವಿಎಂ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಅಧ್ಯಯನವನ್ನು ಪುನರಾರಂಭಿಸಿದ ವಿದ್ಯಾರ್ಥಿಗಳು ಕಾಲೇಜು ಸೇರುವ ಮೊದಲು ‘ನಿರಾಕ್ಷೇಪ ಪ್ರಮಾಣಪತ್ರ’ವನ್ನು ಸಲ್ಲಿಸಬೇಕಾಗಿತ್ತು.

ಜಿಎಸ್‌ವಿಎಂ ವೈದ್ಯಕೀಯ ಕಾಲೇಜು ಸಿದ್ಧಪಡಿಸಿರುವ ಪಟ್ಟಿಯೊಂದರ ಪ್ರಕಾರ, 54 ಮಂದಿ ವಿದ್ಯಾರ್ಥಿಗಳು ವ್ಯಾಪಂ ಹಗರಣದಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದರು. ಅವರು 2009ರಿಂದ 2014ರ ವರೆಗಿನ ಬ್ಯಾಚ್‌ಗಳಿಗೆ ಸೇರಿದವರಾಗಿದ್ದರು. ಅವರಲ್ಲಿ 22 ಮಂದಿ ಕಾಲೇಜಿಗೆ ಪುನಃ ಸೇರಿದ್ದಾರೆ. 6 ಮಂದಿ ಇನ್ನೂ ಬಂಧನದಲ್ಲಿದ್ದಾರೆ ಹಾಗೂ 8 ಮಂದಿ ಕಾಲೇಜಿನಿಂದ ಕಾಣೆಯಾಗಿದ್ದಾರೆ. ಉಳಿದ 18 ವಿದ್ಯಾರ್ಥಿಗಳು 2009ನೆ ಬ್ಯಾಚ್‌ನವರು. ಈ ವಿದ್ಯಾರ್ಥಿಗಳು ಕಾಲೇಜಿನಿಂದ ಉತ್ತೀರ್ಣರಾಗಿ ಹೊರ ಬಿದ್ದಿದ್ದರೂ, ಅವರ ವಿವರಗಳನ್ನು ಎಸ್‌ಟಿಎಫ್‌ಗೆ ನೀಡಲಾಗಿದೆ. ಆದಾಗ್ಯೂ, ಈ ವಿದ್ಯಾರ್ಥಿಗಳ ಹಾಲಿ ಸ್ಥಿತಿಗತಿಯ ಬಗ್ಗೆ ಕಾಲೇಜಿಗೆ ತಿಳಿದಿಲ್ಲವೆಂದು ಆಡಳಿತ ಮಂಡಳಿ ಪ್ರತಿಪಾದಿಸಿದೆ.

ಕೆಲವು ವಿದ್ಯಾರ್ಥಿಗಳು ಅಮಾಯಕರಿರ ಬಹುದು. ಸುಮ್ಮನೆ ‘ದೊಡ್ಡವರು’ ಅವರನ್ನು ಹೆಸರಿಸಿರಬಹುದು. ಜಾಮೀನಿನಲ್ಲಿ ಹೊರಬಂದ ವಿದ್ಯಾರ್ಥಿಗಳು ಮಾನಸಿಕ ಒತ್ತಡದ ಸ್ಥಿತಿಯಲ್ಲಿದ್ದಾರೆ ಹಾಗೂ ವ್ಯಾಕುಲರಾಗಿದ್ದಾರೆಂದು ಕಾಲೇಜು ಆಡಳಿತ ನಂಬಿದೆ. ಅಂತಹ ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಏಕಾಗ್ರತೆ ಕಳೆದುಕೊಂಡಿದ್ದಾರೆ. ಕಳೆದ ಮೂರು ದಿನಗಳಿಂದ ಒಂದರ ಹಿಂದೊಂದು ಸಂಭವಿಸಿದ ಸಾವುಗಳಿಂದ ಅವರು ಭೀತರಾಗಿದ್ದಾರೆಂದು ಕಾಲೇಜಿನ ಮೂಲಗಳು ತಿಳಿಸಿವೆ.

ಮಧ್ಯಪ್ರದೇಶ ವ್ಯವಸಾಯಿಕ್ ಪರೀಕ್ಷಾ ಮಂಡಲ್‌ನ(ವ್ಯಾಪಂ) ವೈದ್ಯಕೀಯ ಪ್ರವೇಶ ಪರೀಕ್ಷಾ ಹಗರಣದಲ್ಲಿ ಒಳಗೊಂಡವರ ಸಂಶಯಾಸ್ಪದ ಸರಣಿ ಸಾವುಗಳು ದೇಶವಾಸಿಗಳನ್ನು ಕಂಗೆಡಿಸಿದೆ ಹಾಗೂ ತಮ್ಮನ್ನೂ ನಡುಗಿಸಿದೆಯೆಂದು ಹೆಸರು ಬಹಿರಂಗಪಡಿಸದ ಶರ್ತದ ಮೇಲೆ ವೈದ್ಯಕೀಯ ಕಾಲೇಜಿನ ಹಿರಿಯ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ.

ಮಧ್ಯಪ್ರದೇಶ ಎಸ್‌ಟಿಎಫ್ 2014ರ ಸೆ.22ರಂದು ವೈದ್ಯಕೀಯ ಕಾಲೇಜಿಗೆ ಮೊದಲ ದೂರನ್ನು ಸಲ್ಲಿಸಿತ್ತು. ಆದರೆ, ಆರೋಪಿ ಎಸ್‌ಟಿಎಫ್‌ನ ಮುಂದೆ ಹಾಜರಾಗಲಿಲ್ಲ. ಆತನಿಗೆ ಆ ಬಳಿಕ ಕಾಲೇಜ್ ನೋಟಿಸ್ ಜಾರಿ ಮಾಡಿತ್ತು. ಅಂತಿಮವಾಗಿ ಆರೋಪಿ ಜನವರಿಯಲ್ಲಿ ಎಸ್‌ಟಿಎಫ್‌ನ ಮುಂದೆ ಹಾಜರಾದರು. ಅನೇಕ ಆರೋಪಿ ವಿದ್ಯಾರ್ಥಿಗಳು ಸ್ವತಃ ಭೋಪಾಲ್, ಸಾಗರ್, ರೇವಾ ಹಾಗೂ ಜಬಲ್ಪುರಗಳಲ್ಲಿ ತನಿಖೆ ತಂಡದ ಮುಂದೆ ಹಾಜರಾದರು.

ಈಗಲೂ ಕಾರಾಗೃಹದಲ್ಲಿರುವ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಮಾತನಾಡಿದ ಜಿಎಸ್‌ವಿಎಂ ವೈದ್ಯಕೀಯ ಕಾಲೇಜಿನ ವಕ್ತಾರ ಅಜಯ್ ಶರ್ಮಾ, ಆ ವಿದ್ಯಾರ್ಥಿಗಳಿಗೆ ಮುಂದೆ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ನೀಡಬೇಕೇ ಅಥವಾ ಅವರ ಪ್ರವೇಶವನ್ನು ರದ್ದುಗೊಳಿಸಬೇಕೇ ಎಂಬುದನ್ನು ರಾಜ್ಯ ಸರಕಾರ ನಿರ್ಧರಿಸಬೇಕಾಗಿದೆಯೆಂದು ತಿಳಿಸಿದ್ದಾರೆ.

Write A Comment