ರಾಷ್ಟ್ರೀಯ

ಒಂದು ರುಪಾಯಿಯ ಒಂದು ನೋಟು ಮುದ್ರಿಸಲು 1 ರುಪಾಯಿ 14 ಪೈಸೆ ಖರ್ಚು !

Pinterest LinkedIn Tumblr

one-rupee-noteನವದೆಹಲಿ: ಒಂದು ರುಪಾಯಿ ಮುಖಬೆಲೆಯ ಒಂದು ನೋಟನು ಮುದ್ರಿಸಲು ಅದಕ್ಕಿಂತ ಹೆಚ್ಚು ಹಣವನ್ನು ವ್ಯಯಿಸುತ್ತಿರುವ ವಿಚಾರ ಮಾಹಿತಿ ಹಕ್ಕು ಅರ್ಜಿಯ ಮೂಲಕ ಬಯಲಾಗಿದೆ.

ಮೂಗಿಗಿಂತ ಮೂಗುತಿ ಭಾರ ಎನ್ನುವ ಗಾದೆ ಬಹುಶಃ ಈ ಸುದ್ದಿಗೆ ಅನ್ವಯಿಸಬಹುದು. ಕಳೆದ ಎರಡು ದಶಕಗಳಿಂದ ಮುದ್ರಣವಿಲ್ಲದೆ ಮೂಲೆಗುಂಪಾಗಿದ್ದ ಒಂದು ರುಪಾಯಿ ನೋಟಿಗೆ ಮತ್ತೆ ಮುದ್ರಣದ ಭಾಗ್ಯ ದೊರಕಿದೆ. ಆದರೆ ಈ ನೋಟುಗಳ ಮುದ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಎಷ್ಟು ಖರ್ಚು ಮಾಡುತ್ತಿದೆ ಗೊತ್ತೆ..? ಒಂದು ನೋಟಿಗೆ 1 ರುಪಾಯಿ 14 ಪೈಸೆ. ಅಂದರೆ ಒಂದು ರುಪಾಯಿ ಮೌಲ್ಯದ ನೋಟಿಗೆ ಅದರ ಮೌಲ್ಯಕ್ಕಿಂತ 14 ಪೈಸೆಗಳಷ್ಟು ಹೆಚ್ಚುವರಿ ಖರ್ಚಾಗುತ್ತಿದೆ.

ಈ ವಿಚಾರವನ್ನು ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್ ನ ಮುದ್ರಣ ಇಲಾಖೆಯ ಅಧಿಕಾರಿಗಳೇ ನೀಡಿದ್ದು, ಆರ್ ಟಿಐ ಕಾರ್ಯಕರ್ತ ಸುಭಾಷ್ ಚಂದ್ರ ಅಗರ್ವಾಲ್ ಅವರು ಸಲ್ಲಿಸಿದ್ದ ಅರ್ಜಿ ಮುಖಾಂತರವಾಗಿ ಈ ವಿಚಾರ ಬೆಳಕಿಗೆ ಬಂದಿದೆ. ಭಾರತೀಯ ಭದ್ರತಾ ಮುದ್ರಣ ಮತ್ತು ಸಂಪಾದನಾ ಸಂಸ್ಥೆ (Security Printing and Minting Corporation of India-SPMCIL) ನೀಡಿರುವ ಮಾಹಿತಿಯನ್ವಯ ತಾತ್ಕಾಲಿಕ ಮತ್ತು ಅನೌಪಚಾರಿಕ ಲೆಕ್ಕಾಚಾರದ ಮಾಹಿತಿಗಳ ಪ್ರಕಾರ ಪ್ರತೀ ಒಂದು ರುಪಾಯಿ ನೋಟು ಮುದ್ರಣಕ್ಕೆ ಸುಮಾರು 1.14 ರು. ಖರ್ಚಾಗುತ್ತಿದೆಯಂತೆ.

1994ರಿಂದೀಚೆಗೆ ಇದೇ ಕಾರಣಕ್ಕಾಗಿ ರಿಸರ್ವ್ ಬ್ಯಾಂಕ್ ಒಂದು ರುಪಾಯಿ ನೋಟು ಮುದ್ರಣವನ್ನು ನಿಲ್ಲಿಸಿತ್ತು. ಬಳಿಕ ಇದೇ ರೀತಿ 2 ಮತ್ತು 5 ರು. ಮುಖಬೆಲೆಯ ನೋಟುಗಳಲ್ಲಿಯೂ ಇದೇ ರೀತಿಯ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಈ ನೋಟುಗಳ ಮುದ್ರಣವನ್ನು ಕೂಡ ನಿಲ್ಲಿಸಲಾಗಿತ್ತು. 2014 ಡಿಸೆಂಬರ್ 16ರಂದು ಕೇಂದ್ರ ವಿತ್ತ ಸಚಿವಾಲಯ ಒಂದು ರುಪಾಯಿ ನೋಟುಗಳನ್ನು ಮತ್ತೆ ಮುದ್ರಿಸಲು ಗೆಜೆಟ್ ಅಧಿಸೂಚನೆ ಹೊರಡಿಸಿತ್ತು. ಅದರ ಪರಿಣಾಮ 2015 ಮಾರ್ಚ್ 6ರಿಂದ ಮತ್ತೆ ಒಂದು ರುಪಾಯಿ ನೋಟು ಚಲಾವಣೆ ಬಂದಿತು. ಈ ಹೊಸ ನೋಟು ಹಳೆಯ ಒಂದು ರುಪಾಯಿ ನೋಟಿನಂತೆಯೇ ಇದ್ದು, ಇಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್‌ನ ಸಹಿ ಬದಲು ವಿತ್ತ ಕಾರ್ಯದರ್ಶಿಯ ಸಹಿ ಇರುತ್ತದೆ.

Write A Comment