ರಾಷ್ಟ್ರೀಯ

ಜನರಿಂದಲೇ ಮೇಲ್ಸೇತುವೆ ನಿರ್ಮಾಣ: ರಾಜಕಾರಣಿಗಳಿಗೆ ಪ್ರವೇಶವಿಲ್ಲ..!: 1 ಕೋಟಿ ಖರ್ಚು ಮಾಡಿ ನಿರ್ಮಾಣ, ಗ್ರಾಮಸ್ಥರ 4 ದಶಕಗಳ ಕನಸು ನನಸು

Pinterest LinkedIn Tumblr

bridgeಚಂಡಿಘಡ: ದಶಕಗಳ ಕಾಲ ಸರ್ಕಾರಕ್ಕೆ ಮನವಿ ಮಾಡಿದರೂ ಜನರ ಮನವಿ ಕೇಳದ ಸರ್ಕಾರದ ವಿರುದ್ಧ ಗ್ರಾಮಸ್ಥರೇ ತಿರುಗಿಬಿದಿದ್ದು, ತಾವೇ ಸ್ವಂತ ಖರ್ಚಿನಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿದ್ದಾರೆ. ಅಲ್ಲದೆ ಈ ಮೇಲ್ಸೇತುವೆ ಪ್ರವೇಶಕ್ಕೆ ರಾಜಕಾರಣಿಗಳಿಗೆ ನಿಷೇಧ ಕೂಡ ಹೇರಿದ್ದಾರೆ.

ಹರ್ಯಾಣದ ಸೆಸಾರ್ ಜಿಲ್ಲೆಯ ಸುತ್ತಮುತ್ತಲಿರುವ ಸುಮಾರು 30 ಗ್ರಾಮಗಳ ಕನಸು ನನಸಾಗಿದ್ದು, ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಎರಡು ರಾಜ್ಯಗಳ ಒಗ್ಗೂಡಿಸುವ ಮೇಲ್ಸೇತುವೆ ಕಾಮಗಾರಿಯನ್ನು ಗ್ರಾಮಸ್ಥರೇ ಪಣ ತೊಟ್ಟು ಮಾಡಿ ಮುಗಿಸಿದ್ದಾರೆ. ಇದಕ್ಕಾಗಿ ಸೆಸಾರ್ ಜಿಲ್ಲೆಯ ಸುತ್ತಮುತ್ತಲ ಗ್ರಾಮಸ್ಥರು ಮತ್ತು ಮುಖಂಡರು ಚಂದಾ ಎತ್ತಿ ಹಣ ಸಂಗ್ರಹ ಮಾಡಿ ಸುಮಾರು 1 ಕೋಟಿ ರುಪಾಯಿ ಸಂಗ್ರಹ ಮಾಡಿ ಈ ಮೇಲ್ಸೇತುವೆಯನ್ನು ನಿರ್ಮಿಸಿದ್ದಾರೆ.

ಸುಮಾರು 214 ಅಡಿ ಉದ್ದ ಮತ್ತು 16 ಅಡಿ ಅಗಲ ಇರುವ ಈ ಮೇಲ್ಸೇತುವೆ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳನ್ನು ಒಗ್ಗೂಡಿಸಲಿದೆ. ಮೇಲ್ಸೇತುವೆಗೂ ಮೊದಲು ಉಭಯ ರಾಜ್ಯಗಳ ಜನರು ಸುಮಾರು 40 ಕಿ.ಮೀಗಳಷ್ಟು ದೂರವನ್ನು ಕ್ರಮಿಸಬೇಕಿತ್ತು. ಆದರೆ ಪ್ರಸ್ತುತ ಈ ಮೇಲ್ಸೇತುವೆ ನಿರ್ಮಾಣದಿಂದಾಗಿ ಈ ದೂರ ಕೇವಲ 10 ಕಿ.ಮೀಗೆ ಇಳಿದಿದೆ. ಇಲ್ಲಿನ ಪನಿಯಾರಿ ಮತ್ತು ಅದರ ಸುತ್ತಮುತ್ತಲಿನ ಸುಮಾರು 30ಕ್ಕೂ ಹೆಚ್ಚು ಗ್ರಾಮಸ್ಥರು ಕಳೆದ 4 ದಶಕಗಳಿಂದ ಮೇಲ್ಸೇತುವೆಗಾಗಿ ಸರ್ಕಾರದ ಮೊರೆ ಹೋಗಿದ್ದರು. ಪ್ರಧಾನಿಗಳಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿಗಳವರೆಗೂ ಅರ್ಜಿ ನೀಡಿ ತಮ್ಮ ಸಮಸ್ಯೆ ತೋಡಿಕೊಂಡಿದ್ದರು. ಆದರೆ ಯಾರೊಬ್ಬರೂ ಕೂಡ ಇವರ ಸಮಸ್ಯೆಗೆ ಸ್ಪಂಧಿಸಲಿಲ್ಲ.

ಅಂದಿನ ಹರ್ಯಾಣ ಮುಖ್ಯಮಂತ್ರಿ ದೇವಿಲಾಲ್ ಅವರ ಅಧಿಕಾರವಧಿಯಿಂದ ಹಿಡಿದು ಪ್ರಸ್ತುತ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ವರೆಗಿನ ಸರ್ಕಾರದ ಪ್ರತಿಯೊಬ್ಬ ಅಧಿಕಾರಿಯ ಮನೆಬಾಗಿಲಿಗೂ ಈ ಗ್ರಾಮಸ್ಥರು ಸೇತುವೆಗಾಗಿ ಅಲೆದಿದ್ದಾರೆ. ಆದರೆ ಪ್ರಯೋಜನ ಮಾತ್ರ ಶೂನ್ಯ. ಹೀಗಾಗಿ ಅಂತಿಮವಾಗಿ ತಾವೇ ಸೇತುವೆ ನಿರ್ಮಾಣ ಮಾಡುವ ಕುರಿತು ದೃಢನಿಶ್ಚಯ ಮಾಡಿದ ಗ್ರಾಮಸ್ಥರು ಸರ್ಕಾರದಿಂದ ಒಂದು ನಯಾಪೈಸೆ ಕೂಡ ಪಡೆಯದೇ ತಾವೇ ಚಂದಾ ಎತ್ತಿ ಸುಮಾರು 1 ಕೋಟಿ ರು.ಗಳನ್ನು ಸಂಗ್ರಹಿಸಿ ಈ ಮೇಲ್ಸೇತುವೆಯನ್ನು ನಿರ್ಮಿಸಿದ್ದಾರೆ.

ಸೆಸಾರ್ ಜಿಲ್ಲೆಯ ನಿಹಾರಿ ಮತ್ತು ಅಲಿಕಾ ಗ್ರಾಮಗಳ ನಡುವೆ ನಿರ್ಮಾಣವಾಗಿರುವ ಈ ಸೇತುವೆ ಸುಮಾರು 30 ಗ್ರಾಮಗಳ ಜೀವನಾಧಾರವಾಗಿದೆ. ಈಗಾಗಲೇ ಸೇತುವೆಗಾಗಿ 90 ಲಕ್ಷ ರು.ಗಳು ಖರ್ಚಾಗಿದ್ದು, ಸೇತುವೆಯ ಅಂತಿಮ ಕಾರ್ಯಗಳು ಪ್ರಗತಿಯಲ್ಲಿವೆ.

ಯಾವುದೇ ಕಾರಣಕ್ಕೂ ರಾಜಕಾರಣಿಗಳಿಗೆ ಪ್ರವೇಶವಿಲ್ಲ
ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಗ್ರಾಮಸ್ಥರು, ಯಾವುದೇ ಕಾರಣಕ್ಕೂ ತಾವೂ ಈ ಮೇಲ್ಸೇತುವೆಯನ್ನು ರಾಜಕಾರಣಿಗಳ ಬಳಕೆಗೆ ಬಿಡುವುದಿಲ್ಲ. ದಶಕಗಳಿಂದ ನಾವು ಅವರ ಮನೆಬಾಗಿಲಿಗೆ ಅಲೆದರೂ ಖ್ಯಾರೆ ಅನ್ನದ ಅವರು ಈ ಸೇತುವೆ ಬಳಕೆಗೆ ಅರ್ಹರಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಸರ್ಕಾರ ಕೈಬಿಟ್ಟರೂ ಸ್ವಾಭಿಮಾನದಿಂದ ತಮಗೆ ಬೇಕಾದ ಮೇಲ್ಸೇತುವೆಯನ್ನು ತಾವೇ ನಿರ್ಮಿಸಿಕೊಂಡ ರೈತರು ಇಡೀ ದೇಶದ ಜನತೆಗೆ ಮಾದರಿಯಾಗಿದ್ದಾರೆ.

Write A Comment