ರಾಷ್ಟ್ರೀಯ

ಆರು ವರ್ಷದ ಬಾಲಕಿಯನ್ನು ತರಗತಿಯಲ್ಲಿ ಕೂಡಿ ಹಾಕಿ ಬೀಗ ಜಡಿದು ಮನೆಗೆ ತೆರಳಿದ್ದ ಶಿಕ್ಷಕಿ !

Pinterest LinkedIn Tumblr

st

ಕೇಂದ್ರಪರ(ಒಡಿಶಾ): ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರು ವರ್ಷದ ವಿದ್ಯಾರ್ಥಿನಿಯನ್ನು ತರಗತಿಯಲ್ಲಿ ಕೂಡಿ ಹಾಕಿ ಬೀಗ ಜಡಿದು ಮನೆಗೆ ತೆರಳಿದ್ದ ಶಿಕ್ಷಕಿಯನ್ನು ಅಮಾನತುಗೊಳಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಮಹಾಕಲ್ಪದ ಪೊಲೀಸ್‌ ಠಾಣೆ ವ್ಯಾಪ್ತಿಯ ಖಾರಿನಸಿ ಗ್ರಾಮ ಪಂಚಾಯತ್‌ಗೆ ಸೇರಿದ ಹರಿಬಂಕಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರು ವರ್ಷದ ಬಾಲೆ ಭಯಾನಕ ಶಿಕ್ಷೆಗೆ ಗುರಿಯಾದವಳು. ಶಿಕ್ಷಕಿಯ ಈ ಪ್ರಕರಣ ಪೋಷಕರನ್ನು ಕೆರಳಿಸಿದ್ದು, ಆ ಪ್ರದೇಶದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಈ ನಡುವೆ ತಪ್ಪು ಮಾಡಿದ ಶಾಲೆಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಶನಿವಾರ ಬೆಳಗ್ಗೆ ಶಾಲೆಗೆ ಹೋಗಿದ್ದ ಮಗಳು ಶಾಲೆ ಬಿಟ್ಟ ಮೇಲೂ ಮನೆಗೆ ಬರದಿರುವುದನ್ನು ಕಂಡು ಹೆತ್ತವರು ಆತಂಕಗೊಂಡಿದ್ದರು. ಎಲ್ಲೆಡೆ ಹುಡುಕಿದರೂ ಆಕೆ ಪತ್ತೆಯಾಗದಿದ್ದಾಗ ಗಾಬರಿಗೊಂಡಿದ್ದರು. ಹೆತ್ತವರ ಆತಂಕಕ್ಕೆ ಸ್ಪಂದಿಸಿದ ಗ್ರಾಮಸ್ಥರು ಆಕೆ ಬರುವ ದಾರಿಯುದ್ದಕ್ಕೂ ಹುಡುಕುತ್ತ ಕೊನೆಗೆ ಶಾಲೆಗೆ ತಲುಪಿದರು. ಅಲ್ಲಿ ಕೆಲ ವಿದ್ಯಾರ್ಥಿಗಳು ಕಬಡ್ಡಿ ಆಡುತ್ತಿರುವುದನ್ನು ಕಂಡ ಅವರಲ್ಲಿ ವಿಚಾರಿಸಿದರು. ಆಗ ಶಾಲೆಯ ಒಳಗಿಂದ ಯಾರೋ ಅಳುವಂಥ ಕ್ಷೀಣ ಸದ್ದು ಕೇಳಿಸಿದ್ದನ್ನು ಅವರು ತಿಳಿಸಿದರು. ಹೋಗಿ ಹುಡುಕಿದಾಗ ಬಾಲಕಿ ಕೊಠಡಿಯಲ್ಲಿ ಬಂಧಿಯಾಗಿದ್ದಳು. ಬಳಿಕ ಊರಿನ ಮಂದಿ ಬಾಗಿಲು ಮುರಿದು ಮಗುವನ್ನು ರಕ್ಷಿಸಿ ಮನೆಗೆ ಕರೆದೊಯ್ದರು.

ಆದರೆ ಈ ಪ್ರಕರಣದಿಂದ ಕೆರಳಿದ ಪೋಷಕರು ಪ್ರತಿಭಟನೆ ನಡೆಸಿದ್ದರಲ್ಲದೆ, ತಪ್ಪಿತಸ್ಥ ಶಿಕ್ಷಕಿಗೆ ಶಿಕ್ಷೆ ನೀಡುವಂತೆ ಸೋಮವಾರ ಪ್ರತಿಭಟನೆ ವೇಳೆ ಆಗ್ರಹಿಸಿದ್ದರು.

ಪರಿಸ್ಥಿತಿ ಬಿಗುವಾಗಿದ್ದನ್ನು ಗಮನಿಸಿದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ ಶಿಕ್ಷಕಿಯನ್ನು ಅಮಾನತು ಮಾಡಿದ್ದಾರೆ. ಅಲ್ಲದೆ ಮೂರು ಶಿಕ್ಷಕಿಯರ ಸಂಬಳವನ್ನು ತಡೆಹಿಡಿಯಲಾಗಿದೆ. ಅಲ್ಲದೆ ಅವಧಿಗೆ ಮುನ್ನವೇ ಶಾಲೆಗೆ ಬಾಗಿಲು ಹಾಕಿ ಮನೆಗೆ ತೆರಳಿದ್ದ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕೇಂದ್ರಪರ ಜಿಲ್ಲಾ ಶಿಕ್ಷಣಾಧಿಕಾರಿ ಸಂಗ್ರಾಮ್ ಕುಮಾರ್ ಸಾಹು ಹೇಳಿದ್ದಾರೆ.

Write A Comment