ರಾಷ್ಟ್ರೀಯ

ಬಾಬಾ ರಾಮ್‌ದೇವ್‌ರಿಂದ ಪತಂಜಲಿ ನೂಡಲ್ಸ್!

Pinterest LinkedIn Tumblr

ramdev

ಹೊಸದಿಲ್ಲಿ, ಜೂ.8: ನೆಸ್ಲೆ ಇಂಡಿಯಾದ ಮ್ಯಾಗಿ ನೂಡಲ್ಸ್ ಉತ್ಪನ್ನಗಳು ಗುಣಮಟ್ಟದ ವಿಚಾರದಲ್ಲಿ ವಿವಾದದಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ಬಾಬಾ ರಾಮ್‌ದೇವ್ ಈ ಅವಕಾಶವನ್ನು ತನ್ನ ಲಾಭಕ್ಕಾಗಿ ಬಳಿಸಿಕೊಳ್ಳಲು ಹೊರ ಟಿದ್ದು, ಸದ್ಯದಲ್ಲೇ ಪತಂಜಲಿಯಿಂದ ಆರೋಗ್ಯಕರ ನೂಡಲ್ಸ್ ಮಾರುಕಟ್ಟೆಗೆ ಬರಲಿವೆ ಎಂದಿದ್ದಾರೆ. ಈಗಾಗಲೇ ಆಯುರ್ವೇದ ಔಷಧಗಳಲ್ಲಿ ಕಲಬೆರಕೆಯ ಕಾರಣದಿಂದ ಸುದ್ದಿಯಲ್ಲಿರುವ ಪತಂಜಲಿ ಸಂಸ್ಥೆ, ತಾನು ಆರೋಗ್ಯಕರ ನೂಡಲ್ಸ್‌ನ್ನು ಮಾರುಕಟ್ಟೆಗೆ ಇಳಿಸುತ್ತೇನೆ ಎಂದಿರುವುದು ಕುತೂ ಹಲಕರವಾಗಿದೆ.

‘ನಮ್ಮ ನೂಡಲ್ಸ್ ಉತ್ಪನ್ನಗಳಲ್ಲಿ ಮೈದಾ ಇರುವುದಿಲ್ಲ. ಮಕ್ಕಳಿಗೆ ಆರೋಗ್ಯಕರವಾದ ಹಾಗೂ ಮ್ಯಾಗಿಗೆ ಬದಲಿಯಾಗಿರುವ ತಿಂಡಿ ಪದಾರ್ಥವನ್ನು ನಾವು ಸದ್ಯದಲ್ಲೇ ಒದಗಿಸಲಿದ್ದೇವೆ. ಇದರಲ್ಲಿ ಹಾನಿಕಾರಕ ಅಂಶಗಳು ಮತ್ತು ವ್ಯಸನಕ್ಕೆ ಕಾರಣವಾಗುವ ವಸ್ತುಗಳು ಇರುವುದಿಲ್ಲ’ ಎಂದು ಅವರು ರವಿವಾರ ವರದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

‘ಮ್ಯಾಗಿಯವರು (ನೆಸ್ಲೆ ಕಂಪೆನಿ) ಕ್ಷಮೆ ಕೋರಬೇಕು. ಸರಕಾರವು ಕಂಪೆನಿಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾದಲ್ಲಿ, ಸಾಮಾನು-ಸರಕುಗಳನ್ನು ಕಟ್ಟಿಕೊಂಡು ದೇಶ ಬಿಟ್ಟು ಹೊರಡುವಂತೆ ಕಂಪೆನಿಗೆ ಸೂಚಿಸಬೇಕು. ವಿಷ ಹರಡುವ ಕಂಪೆನಿಗಳು ನಮಗೆ ಬೇಕಿಲ್ಲ. ಮ್ಯಾಗಿಯಲ್ಲಿ ಸೀಸದ ಅಂಶಗಳಿವೆ. ಮಕ್ಕಳು ಮ್ಯಾಗಿ ತಿಂದರೆ, ಹೃದಯ, ಕಿಡ್ನಿ, ಲಿವರ್ ವೈಫಲ್ಯ ಹಾಗೂ ಕ್ಯಾನ್ಸರ್‌ನಂತಹ ಕಾಯಿಲೆಗೂ ಕಾರಣವಾಗಬಹುದು’ ಎಂದು ಅವರು ಎಚ್ಚರಿಸಿದರು.

ಸದ್ಯ ಮಾರುಕಟ್ಟೆಯಲ್ಲಿ ಪತಂಜಲಿಯ ನೂಡಲ್ಸ್ ಇಲ್ಲ. ಮ್ಯಾಗಿ ಮಾದರಿಯಲ್ಲೇ ನ್ಯೂಡಲ್ಸ್ ಉತ್ಪನ್ನವನ್ನು ಬಿಡುಗಡೆಗೊಳಿಸುವ ಉದ್ದೇಶವನ್ನು ಅವರು ಪ್ರಕಟಿಸಿದರು. ಜೊತೆಗೆ ಹೇರ್‌ಡೈ ಮತ್ತು ಜೆಲ್ ಬಿಡುಗಡೆ ಮಾಡಲಾಗುವುದು ಎಂದರು. ಪತಂಜಲಿಯ ಪವರ್‌ವೀಟಾ ಉತ್ಪನ್ನವು ಕಾಂಪ್ಲಾನ್, ಹಾರ್ಲಿಕ್ಸ್ ಮತ್ತು ಬೋರ್ನ್‌ವೀಟಾಗಳಂತಹ ಮಕ್ಕಳ ಪೇಯಗಳೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ ಎಂದು ಅವರು ತಿಳಿಸಿದರು.

Write A Comment