ರಾಷ್ಟ್ರೀಯ

ನೆಸ್ಲೆ ಇಂಡಿಯಾ: ಗುಣಮಟ್ಟ ಪರೀಕ್ಷೆಗೆ 19 ಕೋಟಿ, ಜಾಹೀರಾತಿಗೆ 445 ಕೋಟಿ ರೂ.

Pinterest LinkedIn Tumblr

pvec5ju15rjmaggi

ಹೊಸದಿಲ್ಲಿ, ಜೂ.8: ಮ್ಯಾಗಿ ನೂಡಲ್ಸ್ ಉತ್ಪನ್ನಗಳ ಗುಣಮಟ್ಟದ ವಿಷಯದಲ್ಲಿ ವಿವಾದದ ಸುಳಿಗೆ ಸಿಲುಕಿರುವ ನೆಸ್ಲೆ ಇಂಡಿಯಾ ಕಂಪೆನಿಯು ಕಳೆದ ವರ್ಷ ಜಾಹೀರಾತು ಮತ್ತು ಮಾರಾಟ ಉತ್ತೇಜನಕ್ಕಾಗಿ 445 ಕೋಟಿ ರೂಪಾಯಿ ಖರ್ಚು ಮಾಡಿದ್ದರೆ, ಗುಣಮಟ್ಟ ಪರೀಕ್ಷೆಗಾಗಿ ಕೇವಲ 19 ಕೋಟಿ ರೂಪಾಯಿ ವೆಚ್ಚ ಮಾಡಿದೆ.

ಕಳೆದ ಐದು ವರ್ಷಗಳಿಂದಲೂ ಇದೇ ರೀತಿ 300-450 ಕೋಟಿ ರೂಪಾಯಿ ವ್ಯಾಪ್ತಿಯಲ್ಲಿ ಕಂಪೆನಿಯು ಖರ್ಚು ಮಾಡುತ್ತ ಬಂದಿದೆ. ಅದೇ ಹೊತ್ತಿಗೆ ಪ್ರಯೋಗಾಲಯ ಇಲ್ಲವೇ ಗುಣಮಟ್ಟ ಪರೀಕ್ಷೆಗಾಗಿ 12ರಿಂದ 20 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿರುವುದು ಕಂಪೆನಿಯ ವಾರ್ಷಿಕ ಹಣಕಾಸು ಲೆಕ್ಕಪತ್ರ ದಾಖಲೆಗಳಿಂದ ತಿಳಿದುಬರುತ್ತದೆ.

ಕಂಪೆನಿಯ ನೌಕರರ ವೇತನದ ಪ್ರಮಾಣವು ಕಳೆದ ಐದು ವರ್ಷಗಳಲ್ಲಿ ತೀವ್ರ ಏರಿಕೆಯಾಗಿರುವುದು (ಶೇ.75ರಷ್ಟು) ಕಂಡುಬಂದಿದೆ. 2010ರಲ್ಲಿ ನೌಕರರ ವೇತನಗಳಿಗಾಗಿ 433 ಕೋಟಿ ರೂಪಾಯಿ ಖರ್ಚಾಗಿದ್ದರೆ, 2014ರಲ್ಲಿ 755 ಕೋಟಿ ರೂಪಾಯಿಯಷ್ಟು ಖರ್ಚು ಮಾಡಲಾಗಿದೆ.

ಇದಕ್ಕೆ ಹೋಲಿಸಿದರೆ, ಜಾಹೀರಾತು ಮತ್ತು ಮಾರಾಟ ಉತ್ತೇಜನದ ವೆಚ್ಚದಲ್ಲಿ ಶೇ.47ರಷ್ಟು ಮಾತ್ರ ಏರಿಕೆ ಕಂಡುಬಂದಿದೆ. 2010ರಲ್ಲಿ ಜಾಹೀರಾತು ಮತ್ತು ಮಾರಾಟ ಉತ್ತೇಜನಕ್ಕಾಗಿ 302 ಕೋಟಿ ರೂಪಾಯಿ ಖರ್ಚಾಗಿದ್ದರೆ, 2014ರಲ್ಲಿ 445 ಕೋಟಿ ರೂಪಾಯಿ ವೆಚ್ಚವಾಗಿದೆ. ಇದೇ ಅವಧಿಯಲ್ಲಿ ಗುಣಮಟ್ಟ ಪರೀಕ್ಷೆಗಳ ವೆಚ್ಚದಲ್ಲಿ ಶೇ.45ರಷ್ಟು ಏರಿಕೆಯಾಗಿದೆ. ಅಂದರೆ, 13 ಕೋಟಿಯಿಂದ 19 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಈ ಬಗೆಯ ಉತ್ಪನ್ನಗಳನ್ನು ಹೊಂದಿರುವ ಇತರ ಕಂಪೆನಿಗಳಲ್ಲೂ ಇದೇ ಪ್ರವೃತ್ತಿಯನ್ನು ಕಾಣಬಹುದಾಗಿದೆ. ಇಂತಹ ಕಂಪೆನಿಗಳು ಬ್ರಾಂಡ್ ಉತ್ತೇಜನಕ್ಕಾಗಿ ಭಾರೀ ಮೊತ್ತವನ್ನು ಖರ್ಚು ಮಾಡುತ್ತವೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

Write A Comment