ಅಂತರಾಷ್ಟ್ರೀಯ

ವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ಭಾರತಕ್ಕೆ ಅವಕಾಶ

Pinterest LinkedIn Tumblr

222

ಢಾಕಾ, ಜೂ.8: ದ್ವಿಪಕ್ಷೀಯ ವ್ಯಾಪಾರವನ್ನು ವೃದ್ಧಿಸುವ ಉದ್ದೇಶದಿಂದ ರಾಷ್ಟ್ರದಲ್ಲಿ ಭಾರತೀಯ ಜೀವ ವಿಮಾ ನಿಗಮಕ್ಕೆ ಕಾರ್ಯಾಚರಿಸಲು ಅವಕಾಶ ನೀಡುವುದರ ಜೊತೆಗೆ ಭಾರತೀಯ ಕಂಪೆನಿಗಳು ವಿಶೇಷ ಆರ್ಥಿಕ ವಲಯ(ಎಸ್‌ಇಝಡ್)ಗಳನ್ನು ನಿರ್ಮಿಸುವುದಕ್ಕೂ ಅವಕಾಶ ನೀಡುವುದಾಗಿ ಬಾಂಗ್ಲಾದೇಶ ರವಿವಾರ ಹೇಳಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ನಡುವೆ ಮಾತುಕತೆ ನಡೆದ ಬಳಿಕ ಉಭಯ ಪಕ್ಷಗಳು ಹಲವು ಒಪ್ಪಂದಗಳಿಗೆ ಸಹಿ ಹಾಕಿವೆ.

ಈಶಾನ್ಯ ಪ್ರಾಂತವು ದಕ್ಷಿಣ ಏಶ್ಯದ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸಲು ಅನುಕೂಲವಾಗುವಂತೆ ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸಲು ಹಾಗೂ ಸಂಪರ್ಕವನ್ನು ಬಲಪಡಿಸುವ ಉದ್ದೇಶದ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಆರ್ಥಿಕ ವಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೋಂಗ್ಲಾ ಹಾಗೂ ಭೆರೆಮರಾದಲ್ಲಿ ವಿಶೇಷ ಆರ್ಥಿಕ ವಲಯ(ಎಸ್‌ಇಝಡ್)ಗಳನ್ನು ಸ್ಥಾಪಿಸಲು ಭಾರತೀಯ ಕಂಪೆನಿಗಳಿಗೆ ಬಾಂಗ್ಲಾ ಸರಕಾರ ಅವಕಾಶ ನೀಡಲಿದೆ. ಉಭಯ ರಾಷ್ಟ್ರಗಳು ತಮ್ಮ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ನವೀಕರಿಸಿರುವುದಲ್ಲದೆ, ಭಾರತೀಯ ನೌಕೆಗಳು ಬಾಂಗ್ಲಾದೇಶದ ಬಂದರುಗಳಿಗೆ ನೇರವಾಗಿ ಹಾಗೂ ನಿಯಮಿತವಾಗಿ ಚಲಿಸುವುದಕ್ಕೆ ಅವಕಾಶ ಕಲ್ಪಿಸುವ ಕರಾವಳಿ ನೌಕಾಯಾನ ಒಪ್ಪಂದಕ್ಕೂ ಸಹಿ ಹಾಕಲಾಯಿತು.

ಈ ಒಪ್ಪಂದವು ಸರಕುಗಳ ಸಾಗಾಟಕ್ಕೆ ಅನುಕೂಲ ಕಲ್ಪಿಸುವುದಲ್ಲದೆ, ಬಾಂಗ್ಲಾದೇಶದ ನೌಕಾಯಾನ ಉದ್ಯಮಕ್ಕೆ ಉತ್ತೇಜನ ನೀಡಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ತಿಳಿಸಿದ್ದಾರೆ.

ವಿಮಾ ವಲಯವನ್ನು ತೆರೆಯುವ ಮೂಲಕ ಬಾಂಗ್ಲಾದೇಶವು ‘ಇನ್ಶೂರೆನ್ಸ್ ಡೆವಲಪ್‌ಮೆಂಟ್ ಆ್ಯಂಡ್ ರೆಗ್ಯುಲೇಟರಿ ಅಥಾರಿಟಿ’(ಐಡಿಆರ್‌ಎ)ಯಿಂದ ಒಪ್ಪಿಗೆ ಪತ್ರವನ್ನು ‘ಲೈಫ್ ಇನ್ಶೂರೆನ್ಸ್ ಕಾರ್ಪೊರೇಶನ್’(ಎಲ್‌ಐಸಿ)ಗೆ ಹಸ್ತಾಂತರಿಸಿದೆ. ಇದರಿಂದ ಎಲ್‌ಐಸಿ ಬಾಂಗ್ಲಾದೇಶದಲ್ಲಿ ಕಾರ್ಯಾಚರಿಸುವುದನ್ನು ಪ್ರಾರಂಭಿಸಲು ಹಾದಿ ಸುಗಮವಾಗಿದೆ.

ಬಾಂಗ್ಲಾ ಹಾಗೂ ಭಾರತ ನಡುವಿನ ಒಟ್ಟು ವಾರ್ಷಿಕ ವಹಿವಾಟು 6.5 ಶತಕೋಟಿ ಡಾಲರ್‌ಗಳಷ್ಟಾಗಿದೆ. ಇದರಲ್ಲಿ ಭಾರತದ ರಫ್ತಿನ ವೌಲ್ಯ 6 ಶಕತೋಟಿ ಡಾಲರ್‌ಗಳಾಗಿದ್ದರೆ, ಬಾಂಗ್ಲಾದಿಂದ ಭಾರತಕ್ಕೆ ಆಗುವ ರಫ್ತಿನ ಪ್ರಮಾಣವು 0.5 ಶತಕೋಟಿ ಡಾಲರ್‌ಗಳಷ್ಟಾಗಿದೆ.

ಉಭಯ ರಾಷ್ಟ್ರಗಳ ನಡುವಿನ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಬಂಗಾಳ ಕೊಲ್ಲಿ ಹಾಗೂ ಹಿಂದೂ ಮಹಾಸಾಗರದಲ್ಲಿ ‘ ಬ್ಲೂ ಇಕಾನಮಿ’ ಹಾಗೂ ಮಾರಿಟೈಮ್ ಕಾರ್ಪೊರೇಶನ್’ ಬಗ್ಗೆಯೂ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ.

ಸರಕುಗಳ ಉತ್ತಮ ಸಾಗಾಟವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಭಾರತೀಯ ನೌಕೆಗಳು ಚಿತ್ತಗಾಂಗ್ ಹಾಗೂ ಮೋಂಗ್ಲಾ ಬಂದರುಗಳನ್ನು ಬಳಸುವ ಸಂಬಂಧ ಪ್ರತ್ಯೇಕ ತಿಳುವಳಿಕೆ ಪತ್ರವೊಂದಕ್ಕೂ ಸಹಿ ಹಾಕಲಾಯಿತು.
ಗುಣಮಟ್ಟ ಮಾಪನ ಕ್ಷೇತ್ರದಲ್ಲಿನ ಸಹಕಾರಕ್ಕೆ ಸಂಬಂಧಿಸಿ ‘ಬಾಂಗ್ಲಾದೇಶ್ ಸ್ಟಾಂಡರ್ಡ್ಸ್ ಆ್ಯಂಡ್ ಟೆಸ್ಟಿಂಗ್ ಇನ್‌ಸ್ಟಿಟ್ಯೂಶನ್’(ಬಿಎಸ್‌ಟಿಐ) ಹಾಗೂ ‘ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್’(ಬಿಎಸ್‌ಐ) ನಡುವಿನ ಒಪ್ಪಂದವೊಂದಕ್ಕೂ ಸಹಿ ಹಾಕಲಾಗಿದೆ.

Write A Comment