ರಾಷ್ಟ್ರೀಯ

ಅನುಮತಿ ಪಡೆಯದೇ ಚುನಾವಣಾ ಪ್ರಚಾರದ ಭಿತ್ತಿಪತ್ರಗಳಲ್ಲಿ ತಮ್ಮ ಭಾವಚಿತ್ರ ಬಳಸಿದ್ದಕ್ಕೆ ಕೇಜ್ರಿವಾಲ್‌ಗೆ ಬೇಡಿ ನೋಟಿಸ್‌

Pinterest LinkedIn Tumblr

bedi

ನವದೆಹಲಿ: ಅನುಮತಿ ಪಡೆಯದೇ ಚುನಾವಣಾ ಪ್ರಚಾರದ ಭಿತ್ತಿಪತ್ರಗಳಲ್ಲಿ ತಮ್ಮ ಭಾವಚಿತ್ರ ಬಳಸಿದ್ದಕ್ಕೆ ದೆಹಲಿ ಬಿಜೆಪಿ  ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ­ ಕಿರಣ್‌ ಬೇಡಿ ಅವರು ಆಮ್ ಆದ್ಮಿ ಪಕ್ಷದ  ನಾಯಕ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಮಂಗಳವಾರ ನೋಟಿಸ್‌ ಕಳುಹಿಸಿದ್ದಾರೆ.

‘ಕಿರಣ್‌ ಬೇಡಿ ಅವರು ಕೇಜ್ರಿವಾಲ್‌ ಅವರಿಗೆ ನೋಟಿಸ್‌ ಕಳುಹಿಸಿದ್ದಾರೆ. ಭಿತ್ತಿಪತ್ರಗಳನ್ನು ತೆಗೆದು ಹಾಕುವು­ದಾಗಿ ಕೇಜ್ರಿವಾಲ್‌ ಖಚಿತಪಡಿಸಿ­ದ್ದಾರೆ’ ಎಂದು ಬಿಜೆಪಿ ಪಕ್ಷದ ಸಂಚಾ­ಲಕ ಪ್ರವೀಣ್‌ ಶಂಕರ್‌ ತಿಳಿಸಿದ್ದಾರೆ.

ಬಿಜೆಪಿ ಒತ್ತಾಯ: ನೀತಿ ಸಂಹಿತೆ­ಯನ್ನು ಉಲ್ಲಂಘಿಸಿರುವ ಎಎಪಿ ನಾಯಕ ಅರ­ವಿಂದ್‌ ಕೇಜ್ರಿವಾಲ್‌ ಅವರನ್ನು ಚುನಾವಣೆ ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಮತ್ತು ಪ್ರಚಾರ ಸಭೆಯಲ್ಲಿ ಭಾಗಿಯಾಗದಂತೆ ನಿಷೇಧ ಹೇರ­ಬೇಕು ಎಂದು ಇಲ್ಲಿನ ಬಿಜೆಪಿ ರಾಜ್ಯ ಘಟಕ ಮಂಗಳವಾರ ಚುನಾ­ವಣೆ ಆಯೋಗಕ್ಕೆ ಒತ್ತಾಯಿಸಿದೆ.

‘ಇತರ ಪಕ್ಷಗಳ ಮತ್ತು ಅಭ್ಯರ್ಥಿ­ಗಳ ಮೇಲೆ ಕ್ಷುಲ್ಲಕ ಆರೋಪ ಮಾಡು­ತ್ತಿದ್ದು,  ಆ ಮೂಲಕ ಜನರ ದಾರಿತಪ್ಪಿ­ಸು­­ತ್ತಿದ್ದಾರೆ. ಚುನಾವಣಾ ಆಯೋಗ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಸತೀಶ್‌ ಉಪಾಧ್ಯಾಯ ತಿಳಿಸಿದ್ದಾರೆ.

ಚುನಾವಣಾ ಆಯೋಗ ಎಚ್ಚರಿಕೆ: ‘ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಲಂಚ ತೆಗೆದುಕೊಳ್ಳಿ, ಆದರೆ ಎಎಪಿಗೆ ಮತ ನೀಡಿ’ ಎಂದಿರುವ ಅರವಿಂದ ಕೇಜ್ರಿವಾಲ್‌ ಅವರ ಹೇಳಿಕೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು,  ಭವಿಷ್ಯದಲ್ಲಿ ಇಂಥ ಹೇಳಿಕೆಗಳನ್ನು ನೀಡಿದರೆ ಕಠಿಣ ಕ್ರಮ­ಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಭಾಷಣದಲ್ಲಿ ಒಬಾಮ ಭೇಟಿ ಉಲ್ಲೇಖ: ಟೀಕೆ
ದೆಹಲಿ ಬಿಜೆಪಿ ಪಕ್ಷದ ಮುಖ್ಯ­ಮಂತ್ರಿ ಅಭ್ಯರ್ಥಿ ಕಿರಣ್‌ ಬೇಡಿ ಅವರು ತಮ್ಮ ಕೃಷ್ಣಾನಗರ ಕ್ಷೇತ್ರ­ದಲ್ಲಿ ಚುನಾವಣಾ ಪ್ರಚಾರದ ವೇಳೆ ಬರಾಕ್‌ ಒಬಾಮ ಅವರ ಭಾರತ ಭೇಟಿ ಬಗ್ಗೆ ಉಲ್ಲೇ­ಖಿಸಿ­ರುವುದನ್ನು ಆಮ್‌ ಆದ್ಮಿ ಪಕ್ಷ ಮಂಗಳ­ವಾರ ತೀವ್ರ ಟೀಕೆ ಮಾಡಿದೆ.

ಬೇಡಿ ಅವರು ಕ್ಷೇತ್ರ ಭೇಟಿ ಸಂದರ್ಭದಲ್ಲಿ ‘ಒಬಾಮ ಭೇಟಿ­ಯಿಂದ ಭಾರತದ ಗೌರವ ಹೆಚ್ಚಾ­ಗಿದೆ. ಭಾರತ ಈಗ ವಿಶ್ವದಲ್ಲೇ ನಂ.1 ರಾಷ್ಟ್ರವಾಗಿ ಗುರುತಿಸಿ­ಕೊಂಡಿದೆ’ ಎಂದು ಹೇಳಿದ್ದರು.

Write A Comment