ಕನ್ನಡ ವಾರ್ತೆಗಳು

ಆಟಿಕೆಗಳ ಉದ್ಯಮ 8 ಸಾವಿರ ಕೋಟಿ ಅಂದಾಜು ವಹಿವಾಟು

Pinterest LinkedIn Tumblr

ma

ಆಟಿಕೆಯ ಉದ್ಯಮ ಕಳೆದ ಐದು ವರ್ಷಗಳ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಅಕ್ಷರಶಃ ದ್ವಿಗುಣಗೊಂಡಿದೆ. ಭಾರತದಲ್ಲಿಯೂ ವರ್ಷದಿಂದ ವರ್ಷಕ್ಕೆ ಶೇ 30ರಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಕಾಣುತ್ತಿದೆ. ಆದರೆ ಇದೇ ವೇಳೆ ಶೇ 40ರಷ್ಟು ಭಾರತೀಯ ಆಟಿಕೆ ತಯಾರಿಕೆ ಕಂಪೆನಿಗಳು ಬಾಗಿಲು ಮುಚ್ಚಿವೆ. ಇನ್ನೂ ಕೆಲವು ಕಂಪೆನಿಗಳು ವ್ಯಾಪಾರದ ಆಟವನ್ನೇ ನಿಲ್ಲಿಸಬೇಕಾದ ಅಪಾಯದ ಅಂಚಿಗೆ ಬಂದು ನಿಂತಿವೆ.

ಭಾರತದಲ್ಲಿ ಆಟಿಕೆಗಳಿಗೆ ಭಾರಿ ಪ್ರಮಾಣದಲ್ಲಿ ಬೇಡಿಕೆ ಇದ್ದರೂ, ತಯಾರಿಕೆ ವಲಯದಲ್ಲಿ ಮಾತ್ರ ವೃದ್ಧಿ ಕಾಣಲಾಗು ತ್ತಿಲ್ಲ. ಅಮೆರಿಕದಿಂದ ಆಟಿಕೆಗಳು ಆಮದಾಗುತ್ತಿವೆ. ಚೀನಾದಿಂದಲಂತೂ ಅಪಾರ ಪ್ರಮಾಣದಲ್ಲಿ ಕಡಿಮೆ ಗುಣಮಟ್ಟದ ಆಟಿಕೆಗಳ ರಾಶಿಯೇ ಹರಿದು ಬರುತ್ತಿದೆ. ಅಗ್ಗದ  ಈ ಸರಕುಗಳು ಭಾರತದ ಆಟಿಕೆ ಉದ್ಯಮ ಮೇಲೆ ಏಳಲಾಗ ದಂತಹ ಪೆಟ್ಟು ನೀಡುತ್ತಿವೆಯೇ ಎಂಬ ಆತಂಕ ಎದುರಾಗಿದೆ.

ಪ್ರಸ್ತುತ ರೂ. 8 ಸಾವಿರ ಕೋಟಿ ಅಂದಾಜು ವಹಿವಾಟು ಹೊಂದಿರುವ ಭಾರತೀಯ ಆಟಿಕೆ ಉದ್ಯಮ, 2015ರ ಅಂತ್ಯದ ವೇಳೆಗೆ ರೂ. 13 ಸಾವಿರ ಕೋಟಿ ಮುಟ್ಟುವ ಸಾಧ್ಯತೆ ಇದೆ ಎಂದು ಅಸೋಚಾಮ್ ವರದಿ ಹೇಳುತ್ತದೆ.

ಆದರೆ ಇದರಲ್ಲಿ ದೇಶದ ಆಟಿಕೆ ತಯಾರಿಕೆ ಪಾಲು ತೀರಾ ಕಡಿಮೆ. ಮಾರುಕಟ್ಟೆಯಲ್ಲಿ ವಿದೇಶಿ ಉತ್ಪನ್ನಗಳ ಪಾಲೇ ದೊಡ್ಡದಿದೆ. ಮುಂದಿನ ದಿನಗಳಲ್ಲಿಯೂ ಇದೇ ಸ್ಥಿತಿ ಮುಂದು ವರಿಯಲಿದೆ ಎನ್ನುವುದು ತಜ್ಞರ ವಿಶ್ಲೇಷಣೆ.

ಆಮದು ಪಾಲು ಶೇ 80ರಷ್ಟು ಇದೆ. ಕೇವಲ ಶೇ 20ರಷ್ಟು ಪಾಲು ಹೊಂದಿರುವ ಸ್ಥಳೀಯ ಉತ್ಪಾದಕರಲ್ಲಿ ಅಸಂಘಟಿತ ಸಣ್ಣ ವಲಯದ ಪಾತ್ರವೇ ಮುಖ್ಯವಾಗಿದೆ.

ಭಾರತದಲ್ಲಿ ಆಟಿಕೆ ತಯಾರಿಕೆ ಉದ್ಯಮ ತನ್ನ ಸಾಮರ್ಥ್ಯ ವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೇ‌ಉದ್ಯೋಗಾವಕಾಶ ವೃದ್ಧಿ, ದೇಶದ ಆರ್ಥಿಕತೆಯ ಸರ್ವತೋಮುಖ ಅಭಿವೃದ್ಧಿ ಹೊಂದುವ ಸಾಮರ್ಥ್ಯವನ್ನೂ ಹೊಂದಿದೆ. ಅಷ್ಟೇ ಅಲ್ಲ, ಆಟಿಕೆ ತಯಾರಿಕೆ ಮತ್ತು ಮಾರಾಟ ಉದ್ಯಮ, ರಫ್ತು ವಹಿವಾಟಿಗೂ ಸಹ ವಿಪುಲ ಅವಕಾಶಗಳನ್ನು ಹೊಂದಿದೆ.

ಇಲ್ಲಿ ಕಚ್ಚಾ ಸಾಮಗ್ರಿಗಳಿಗೂ ಕೊರತೆ ಏನಿಲ್ಲ. ಆದರೆ ತಾಂತ್ರಿಕ ವಿಚಾರ ದಲ್ಲಿ ಹಿನ್ನಡೆ, ನುರಿತ ಮಾನವ ಸಂಪನ್ಮೂಲಗಳ ಕೊರತೆ, ಆಧುನಿಕ ಯಂತ್ರೋಪಕರಣ ಗಳ ಕೊರತೆ, ಮುಖ್ಯವಾಗಿ ಬೃಹತ್ ಪ್ರಮಾಣದಲ್ಲಿ ಹೂಡಿಕೆ ಇಲ್ಲಿದಿರುವುದು ಮೊದಲಾದ ಕಾರಣಗಳು ಈ ಉದ್ಯಮವನ್ನು ಹಿಂದಕ್ಕೆ ಎಳೆಯುತ್ತಿವೆ ಎನ್ನುತ್ತದೆ ಅಖಿಲ ಭಾರತ ಆಟಿಕೆ ಉತ್ಪಾ ದಕರ ಸಂಘದ (TAITMA).

ರಾಜ್ಯದಲ್ಲಿನ ಆಟಿಕೆ ಉದ್ಯಮದ ಆಮೆ ವೇಗಕ್ಕೂ ಇದೇ ಕಾರಣಗಳು ಅನ್ವಯಿಸುತ್ತವೆ ಎನ್ನುತ್ತದೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ).

ಬೇರೆ ವಲಯದಲ್ಲಿ ಸಾಕಷ್ಟು ಹಣ ಹೂಡಲು ಸಿದ್ಧವಿರುವ ಉದ್ಯಮಿಗಳು, ಸೋಲಿನ ಭೀತಿ ಹಾಗೂ ಅಗತ್ಯ ಮಾನವ ಸಂಪ ನ್ಮೂಲ, ಮೂಲ ಸೌಕರ್ಯಗಳ ಕೊರತೆಯಿಂದ ಭಾರತದಲ್ಲಿ ಆಟಿಕೆ ಉದ್ಯಮದ ಮೇಲೆ ಬಂಡವಾಳ ಹೂಡಲು ಮುಂದಾಗುತ್ತಿಲ್ಲ ಎನ್ನುವುದು ಸಂಸ್ಥೆಯ ವಿವರಣೆ.

ಜಾಗತಿಕ ನೋಟ
ಜಾಗತಿಕ ಮಟ್ಟದಲ್ಲಿ ಆಟಿಕೆ ಉದ್ಯಮ ಒಂದು ಬೃಹತ್ ಮಾರುಕಟ್ಟೆಯನ್ನು ಹೊಂದಿರುವ ಹಾಗೂ ಆಯಾ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಗಮನಾರ್ಹ ಪಾತ್ರ ವಹಿಸಿರುವ ಒಂದು ದೊಡ್ಡ ವಲಯ.

ಸುಮಾರು 10 ಕೋಟಿ ಡಾಲರ್‌ಗಳಿಗಿಂತಲೂ  (ರೂ. 625 ಕೋಟಿಗಿಂತಲೂ) ದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಶೇ 29ರಷ್ಟು ಗಮನಾರ್ಹ ಪಾಲನ್ನು ಪಡೆಯುವ ಮೂಲಕ  ಅಮೆರಿಕ ಹಿರಿಯಣ್ಣನ ಜಾಗದಲ್ಲಿದೆ.  ಯುರೋಪ್ ಶೇ 22ರೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಚೈನಾ ಮೂರನೇ ಸ್ಥಾನದಲ್ಲಿದೆ (ಶೇ 11). ಉಳಿದಂತೆ ಇಟಲಿ, ಥೈವಾನ್ ಮೊದಲಾದ ರಾಷ್ಟ್ರಗಳು ನಂತರದ ಸ್ಥಾನದಲ್ಲಿ ನಿಲ್ಲುತ್ತವೆ. ಆದರೆ ಜಾಗತಿಕ ಆಟಿಕೆ ಉದ್ಯಮದಲ್ಲಿ ಭಾರತದ ಪಾಲು ಕೇವಲ ಶೇ 0.51ರಷ್ಟು. ಭಾರತದಲ್ಲಿ ಆಟಿಕೆ ಮಾರುಕಟ್ಟೆಯಲ್ಲಿ ಶೇ 70ರಷ್ಟು ಆಮದು ಉತ್ಪನ್ನಗಳ ಪ್ರಾಬಲ್ಯವೇ ನಡೆಯುತ್ತಿದೆ. ಇದರಲ್ಲಿ ಇಟಲಿ, ಅಮೆರಿಕ, ಚೀನಾ ಪ್ರಮುಖ ದೇಶಗಳಾಗಿವೆ.

ಚೀನಾದ ಯೆನ್‌ ಕರೆನ್ಸಿ ಎದುರು ಭಾರತದ ರೂಪಾಯಿ ಮೌಲ್ಯ ಕಡಿಮೆ ಇದೆ. ಇದು ಚೀನಾದೊಂದಿಗಿನ ಭಾರತದ ವಿದೇಶ ವ್ಯಾಪಾರಕ್ಕೆ ಹೆಚ್ಚು ಪೂರಕ ಅಂಶವೇ ಆಗಿದೆ ಎಂದು ಹೇಳಬಹುದು. ಅಲ್ಲದೇ, ಕಡಿಮೆ ಬೆಲೆಯಲ್ಲಿ, ಆಧುನಿಕ, ಆಕರ್ಷಕ ಉತ್ಪನ್ನಗಳ ಲಭ್ಯತೆಯೂ ಸಹ ಇದಕ್ಕೆ ಪೂರಕ ಅಂಶವೆಂದು ಹೇಳಬಹುದು.

ಭಾರತಕ್ಕೆ ಕಳಪೆ ಆಟಿಕೆ ರವಾನೆ
ಅಮೆರಿಕ, ಯುರೋಪ್ ಹಾಗೂ ಚೀನಾದಲ್ಲಿ ಆಟಿಕೆಗಳನ್ನು ಮುಖ್ಯವಾಗಿ ಮೂರು ಹಂತಗಳಲ್ಲಿ ಉತ್ಪಾದನೆ ಮಾಡುತ್ತಾರೆ.
*ಅತ್ಯುತ್ತಮ ಗುಣಮಟ್ಟ (1st quality)
*ಸಾಮಾನ್ಯ ಗುಣಮಟ್ಟ  (1nd quality)
*ಕಳಪೆ ಗುಣಮಟ್ಟ  (1rd quality)
ಅದರಲ್ಲಿ ಹೆಚ್ಚಾಗಿ ಕಳಪೆ ಆಟಿಕೆಗಳೇ ಭಾರತಕ್ಕೆ ಬರುವುದು. ಈ ಆಟಿಕೆಗಳು ಆಧುನಿಕ ಶೈಲಿ ಉತ್ಪನ್ನಗಳಾಗಿವೆ ಮತ್ತು ಕಡಿಮೆ ಬೆಲೆಯಲ್ಲಿ ಸಿಗುತ್ತವೆ ಮತ್ತು  ಎಂಬ ಕಾರಣದಿಂದಲೇ ಭಾರತದಲ್ಲಿ ಇಂತಹ ಆಟಿಕೆಗಳಿಗೆ ದೊಡ್ಡ ಮಾರುಕಟ್ಟೆ ನಿರ್ಮಾಣವಾಗಿದೆ ಎನ್ನುವುದು ತಜ್ಞರ ವಿಶ್ಲೇಷಣೆ.

ಅಮೆರಿಕ ಬಹು ದೊಡ್ಡ ಆಟಿಕೆ ಉತ್ಪಾದಕ ದೇಶವಾಗಿದ್ದರೂ ಸಹ ವೈವಿಧ್ಯತೆಗಾಗಿ ಹಾಗೂ ಬೇರೆ ಬೇರೆ ಕಾರಣಗಳಿಗಾಗಿ ಅದು ಚೀನಾದಿಂದಲೂ ಸಾಕಷ್ಟು ಆಟಿಕೆಗಳನ್ನು ಆಮದು ಮಾಡಿಕೊಳ್ಳುತ್ತದೆ. ಚೀನಾ ಸಹ ಇದೇ ಕಾರಣದಿಂದ ಅಮೆರಿಕದಿಂದ ಸಾಕಷ್ಟು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ.

ತಯಾರಿಕೆ ಕ್ಷೇತ್ರದ ಸಮಸ್ಯೆ
ದೇಶದ ತಯಾರಿಕೆ ಕ್ಷೇತ್ರದಲ್ಲಿ ಹೊಸ ಉದ್ಯಮ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಲು ಭಯ ಪಡುವುದು ಒಂದು ಪ್ರವೃತ್ತಿಯಾದರೆ, ಸಣ್ಣ ಕಂಪೆನಿಗಳಿಗೆ ವಿದೇಶದಿಂದ ಹರಿದು ಬರುವ ಉತ್ಪನ್ನಗಳೊಂದಿಗೆ (ಬೆಲೆ ಹಾಗೂ ಗುಣಮಟ್ಟದಲ್ಲಿ) ಪೈಪೋಟಿಕೆ ನಿಲ್ಲುವ ಚೈತನ್ಯ ಇಲ್ಲದಿರುವುದು ಇನ್ನೊಂದು ಕಾರಣ.

‘ಬೃಹತ್ ಪ್ರಮಾಣದ ಉತ್ಪಾದನೆಗೆ ಮುಂದಾದಾಗ ಮಾತ್ರ ಭಾರತದ ಉತ್ಪನ್ನಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೈಪೋಟಿಗಿಗೆ ಇಳಿಯಲು ಹಾಗೂ ಸ್ಥಳೀಯ ಮಾರುಕಟ್ಟೆ ಯಲ್ಲಿಯೂ ಕಾಲೂರಿ ನಿಲ್ಲಲು ಸಾಧ್ಯವಾಗುತ್ತದೆ. ಗುಡಿ ಕೈಗಾರಿಕೆ, ಗೃಹ ಕೈಗಾರಿಕೆಗಳ ಮೂಲಕ ಭಾರತ ಈ ವಲಯದಲ್ಲಿ ಎಂದೂ ಜಾಗತಿಕ ಮಟ್ಟದಲ್ಲಿ ಪ್ರಾಬಲ್ಯ ಹೊಂದಲು ಸಾಧ್ಯವಾಗದು’ ಎನ್ನುತ್ತಾರೆ ಎಫ್‌ಕೆಸಿಸಿಐ ಅಧ್ಯಕ್ಷ ಸಂಪತ್ ರಾಮನ್.

ಆಟಿಕೆ ಉದ್ಯಮ ಹಿಂದುಳಿಯಲು ಕಾರಣ
*ಸಣ್ಣ ಗಾತ್ರದ ಕಂಪೆನಿಗಳಿಗೆ ಹೊಸ ಹೊಸ ಅಟಿಕೆಗಳನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ
*ಹೆಚ್ಚಿನ ಉತ್ಪಾದಕರಿಗೆ ತಮ್ಮದೇ ಆದ ಪೂರ್ಣ ಪ್ರಮಾಣದ ಆಟಿಕೆಗಳ ವಿನ್ಯಾಸಕ್ಕೆ ಅಗತ್ಯವಾದ ಡಿಸೈನ್ ಸ್ಟುಡಿಯೊ ಇಲ್ಲ. ಜತೆಗೆ, ನುರಿತ ವಿನ್ಯಾಸಕರೂ ಸುಲಭದಲ್ಲಿ ಲಭ್ಯವಿಲ್ಲ
*ಆಟಿಕೆ ತಯಾರಿಕೆಉದ್ಯಮಕ್ಕೆ ಸಂಬಂಧಿಸಿದಂತೆ ವಿಶೇಷ ತರಬೇತಿ ಮತ್ತು ಶಿಕ್ಷಣ ನೀಡುವ ಸಂಸ್ಥೆಗಳೂ ದೇಶದಲ್ಲಿ ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ಇಲ್ಲ
*ಆಟಿಕೆ ತಯಾರಿಕೆ ಕ್ಷೇತ್ರದ ಶೇ 73ರಷ್ಟು ಉದ್ಯಮಿಗಳಿಗೆ ನವೀನ ರೀತಿಯ ಕಲ್ಪನೆಗಳು ಇದ್ದರೂ, ಹೊರಗಿನ ಅಥವಾ ಅರೆಕಾಲಿಕ, ಹವ್ಯಾಸಿ ವಿನ್ಯಾಸಕರ ಕೈಗೆ ಅವುಗಳನ್ನು ಕೊಟ್ಟು ಕೆಲಸ ಮಾಡಿಸುವ ಪರಿಸ್ಥಿತಿ ಇದೆ

*ಶೇ 15ರಷ್ಟು ಉತ್ಪಾದಕರು ಚೀನಾ ಸೇರಿದಂತೆ ಇತರೆ ಬ್ರಾಂಡ್‌ಗಳ ವಿನ್ಯಾಸಗಳನ್ನೇ ಅನುಕರಣೆ ಮಾಡುವುದಿದೆ
*ಬೃಹತ್ ಪ್ರಮಾಣದಲ್ಲಿ ಹೂಡಿಕೆ ಮಾಡಲು ಭಾರತೀಯ ಉತ್ಪಾದಕರು ಮುಂದೆ ಬರುತ್ತಿಲ್ಲ
*ಶೇ 90ರಷ್ಟು ಉತ್ಪಾದಕರು ಮಾದರಿ ಅಭಿವೃದ್ಧಿ ಸೌಲಭ್ಯಗಳನ್ನು ಹೊಂದಿಲ್ಲ. ಅವರು ಉತ್ಪನ್ನದ ಮೂಲಮಾದರಿಯ ಅಭಿವೃದ್ಧಿಗೆ ಹೊರ ಸಂಸ್ಥೆಗ ಳನ್ನು ಅವಲಂಬಿಸಿದ್ದಾರೆ
*ಉತ್ಪಾದನೆಯಾದ ಆಟಿಕೆಗಳ ಗುಣಮಟ್ಟವನ್ನು ಪರೀಕ್ಷಿಸಲು ಸುಸಜ್ಜಿತ ಲ್ಯಾಬ್‌ಗಳ ಕೊರತೆ ಇದೆ
*ಅಂತರರಾಷ್ಟ್ರೀಯ ಆಟಿಕೆ ಮೇಳಗಳಲ್ಲಿ, ಪ್ರದರ್ಶ ನಗಳಲ್ಲಿ ಭಾಗವಹಿಸುವುದು ಸಾಕಷ್ಟು ದುಬಾರಿ ಯಾಗಿದೆ ಮತ್ತು ಇದರಿಂದ ಭಾರತೀಯ ಉತ್ಪಾದಕರ ಸಹಭಾಗಿತ್ವ ಕಾಣುತ್ತಿಲ್ಲ
*ಇ–ವಾಣಿಜ್ಯದ ಉಪಯೋಗ ಪಡೆಯುವಲ್ಲಿ ರಾಜ್ಯದ ಆಟಿಕೆ ತಯಾರಿಕೆ ಸಂಸ್ಥೆಗಳು ಹಿಂದಿವೆ
ಕರ್ನಾಟಕದ ಪಾಲು
ಭಾರತದಲ್ಲಿ ಆಟಿಕೆ ಉದ್ಯಮ ಮುಖ್ಯವಾಗಿ ಸಣ್ಣ ಮತ್ತು ಗುಡಿ ಕ್ಷೇತ್ರಗಳಲ್ಲಿ ಕೇಂದ್ರೀಕೃತವಾಗಿದೆ. ಎಲ್ಲಾ ಸೇರಿ ಭಾರತದಲ್ಲಿ ಸುಮಾರು 4ರಿಂದ 6 ಸಾವಿರ ಉತ್ಪಾದಕರು ಇದ್ದಾರಷ್ಟೆ. ಅದರಲ್ಲಿ ಶೇ 50ರಷ್ಟು ಘಟಕಗಳು ದೆಹಲಿಯ ಸುತ್ತಮುತ್ತಲಿವೆ. 35ರಷ್ಟು ಉತ್ಪಾದಕರು ಮಹಾರಾಷ್ಟ್ರದಲ್ಲಿದ್ದಾರೆ. ಉಳಿದ ಶೇ 15ರಷ್ಟು ಉತ್ಪಾದಕರು ದೇಶದ ಇತರೆ ಭಾಗಗಳಲ್ಲಿ ಹಂಚಿ ಹೋಗಿದ್ದಾರೆ. ಆದರೆ ಇದರಲ್ಲಿ ಕರ್ನಾಟಕದ ಪಾಲು ನಗಣ್ಯ ಎನ್ನುವಷ್ಟು ತೀರಾ ಕಡಿಮೆ ಇದೆ.

ಚನ್ನಪಟ್ಟಣದ ಆಟಿಕೆ
ಆಟಿಕೆಗಳ ವಿಷಯಕ್ಕೆ ಬಂದಾಗ ಕರ್ನಾಟಕದಲ್ಲಿ ನೆನಪಿಗೆ ಬರುವುದು ಚನ್ನಪಟ್ಟಣದ ಆಟಿಕೆಗಳು. ಚನ್ನಪಟ್ಟಣದ ಆಟಿಕೆಗಳಿಗೂ ಒಂದು ಕಾಲವಿತ್ತು. ಶ್ರೀಮಂತರು, ಬಡವರು, ಹಿರಿಯರು, ಮಕ್ಕಳೆನ್ನದೇ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿತ್ತು. ಆದರೆ ಈಗ ಚನ್ನಪಟ್ಟಣದ ಆಟಿಕೆಗಳಿಗೆ ಬೇಡಿಕೆ ಕುಗ್ಗಿದೆ. ಬದಲಾದ ಗ್ರಾಹಕರ ಅಭಿರುಚಿ, ಆಸಕ್ತಿಗೆ ತಕ್ಕಂತೆ ಈ ವಲಯ ತನ್ನನ್ನು ತಾನು ಮಾರ್ಪಾಟು ಮಾಡಿಕೊಳ್ಳು ತ್ತಿಲ್ಲ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬದಲಾದ ಬೇಡಿಕೆಗಳನ್ನು ತಲುಪುವ ಪ್ರಯತ್ನ ಕಾಣುತ್ತಿಲ್ಲ.

ಜಾಗತಿಕ ವಲಯದಲ್ಲಿ ಆಟಿಕೆಗಳ ಜಗತ್ತು ಪೂರ್ಣ ವಾಗಿ ಬದಲಾಗಿದೆ. ಅತ್ಯಾಧುನಿಕ, ಎಲೆಕ್ಟ್ರಾನಿಕ್, ಅಟೊಮ್ಯಾಟಿಕ್ ಆಟಿಕೆಗಳತ್ತ ಆಕರ್ಷಣೆ ಹೆಚ್ಚುತ್ತಿದ್ದು, ದಶಕಗಳಿಂದ ಒಂದೇ ರೀತಿಯಲ್ಲಿ ಹೊರಬರು ತ್ತಿರುವ ಚನ್ನಪಟ್ಟಣದ ಆಟಿಕೆಗಳು ಮಹತ್ವ ಕಳೆದು ಕೊಳ್ಳುತ್ತಿವೆ.
ರೋಬೊ (ಯಂತ್ರ ಮಾನವ) ರೀತಿ ಆಟಿಕೆಗಳು, ದೂರದಿಂದಲೇ ನಿಯಂತ್ರಿಸಬಹುದಾದ ಆಟಿಕೆಗಳು, ವಿಡಿಯೊ ಗೇಮ್ಸ್, ಹೀಮ್ಯಾನ್, ಫ್ಯಾಂಟಮ್, ಇತ್ತೀ ಚೆಗೆ ಚೋಟಾಭೀಮ್‌ ಮಕ್ಕಳ ನೆಚ್ಚಿನ ಆಟಿಕೆಗಳಾ ಗಿವೆ. ಸಾಂಪ್ರದಾಯಿಕ ಮೌಲ್ಯ ಹಾಗೂ ಯಾವುದೇ ಅಪಾಯ, ಅಡ್ಡಪರಿಣಾಮಗಳು ಇಲ್ಲ ಎನ್ನುವುದು ಕರ್ನಾಟಕದ ಆಟಿಕೆಗಳ ಆಕರ್ಷಣೆ. ಇದಿಷ್ಟೇ ಕಾರಣದಿಂದ ಮಾರುಕಟ್ಟೆಯಲ್ಲಿ ಯಶಸ್ಸು ನಿರೀಕ್ಷಿಸು ವುದು ಕಷ್ಟ.

‘ವಿಶ್ವದ ಮಾರುಕಟ್ಟೆಯಲ್ಲಿ ಭಾರತ ಶೇ 0.50ರಷ್ಟು ಪಾಲು ಹೊಂದಿದರೆ, ಭಾರತದಲ್ಲಿ ಕರ್ನಾಟಕದ ಪಾಲೂ ಸಹ ತೀರಾ ಕಡಿಮೆ ಇದೆ. ವಾರ್ಷಿಕ 50ರಿಂದ 80 ಕೋಟಿಯಷ್ಟು ವಹಿವಾಟು ಸಾಧಿಸುವುದೇ ರಾಜ್ಯಕ್ಕೆ ಸಮಸ್ಯೆ ಆಗುತ್ತಿದೆ. ಆದರೆ ಇದಕ್ಕೆ ಯಾವುದೇ ಅಡ್ಡ ಮಾರ್ಗಗಳಿಲ್ಲ. ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡುವುದು, ಬೇಡಿಕೆಗೆ ತಕ್ಕಂತೆ ಆಟಿಕೆಗಳಲ್ಲಿ ವೈವಿದ್ಯತೆ ಮತ್ತು ಹೊಸತನ ತರಲು ನಿರಂತರ ಪ್ರಯತ್ನಿಸುವುದು, ಬದಲಾಗುವ ಗ್ರಾಹಕರ ಅಭಿರುಚಿ–ಆಸಕ್ತಿಗಳನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಹೊಸತನ ಅಳವಡಿಸಿಕೊಳ್ಳುವುದು ಮಾತ್ರ ಇದಕ್ಕೆ ಪರಿಹಾರ’ ಎನ್ನುತ್ತಾರೆ ಎಫ್‌ಕೆಸಿಸಿಐ ಅಧ್ಯಕ್ಷ  ಸಂಪತ್ ರಾಮನ್.

ಅದೇನೇ ಇರಲಿ, ಸಂಘಟಿತ ಮತ್ತು ಅಸಂಘಟಿತ ವಲಯ ಸೇರಿ ಪ್ರಸ್ತುತ 30–40 ಲಕ್ಷದಷ್ಟು ಜನರಿಗೆ ಈ ಉದ್ಯಮ ಜೀವನಾಧಾರ ಒದಗಿಸುತ್ತಿದೆ. 2015ರ ಅಂತ್ಯದ ವೇಳೆಗೆ ಸುಮಾರು 50 ಲಕ್ಷದಷ್ಟು ಜನರು ಈ ಉದ್ಯಮದಲ್ಲಿ ಬದುಕು ಕಟ್ಟಿಕೊಳ್ಳಲಿದ್ದಾರೆ ಎಂದು ಅಸೋಚಾಮ್ ವರದಿ ಹೇಳುತ್ತದೆ.

ಆನ್‌ಲೈನ್ ಆಟಿಕೆ ಮಾರುಕಟ್ಟೆ
ವ್ಯಾಪಕ ವಿಂಗಡಣೆ, ಸ್ಪರ್ಧಾತ್ಮಕ ಬೆಲೆ, ಮನೆ ಯಿಂದಲೇ ಖರೀದಿಸುವ ಸೌಕರ್ಯ ಮುಂತಾದ ಅನೇಕ ಕಾರಣಗಳಿಂದಾಗಿ ನವ ಯುಗದ ಮಕ್ಕಳ ಹಾಗೂ ಪಾಲಕರ ಅಚ್ಚುಮೆಚ್ಚಿನ ತಾಣವಾಗಿದೆ ಆನ್‌ಲೈನ್ ಮಾರುಕಟ್ಟೆ.
ಆಟಿಕೆಗಳ ಆನ್‌ಲೈನ್ ಮಾರಾಟ ಭಾರತದಲ್ಲಿ ಒಟ್ಟು ಶೇ18ರಷ್ಟು ಎಂದು ಅಂದಾಜಿಸಲಾಗಿದೆ.

RNCOS ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ ಆನ್‌ಲೈನ್ ಮಾರುಕಟ್ಟೆಯತ್ತ ಜನರನ್ನು ಸೆಳೆಯುತ್ತಿ ರುವ ಪ್ರಮುಖ ಸಂಗತಿ ಎಂದರೆ ಬೆಲೆ ಮತ್ತು ಗುಣಮಟ್ಟ.

ಯಾವುದೇ ಉತ್ಪನ್ನಗಳ ಆಯ್ಕೆಯ ಪ್ರಶ್ನೆ ಬಂದಾಗ ಭಾರತೀಯ ಗ್ರಾಹಕರು ಮುಖ್ಯವಾಗಿ ಇದೇ ಎರಡು ಸಂಗತಿಗಳತ್ತ ಹೆಚ್ಚು ಗಮನ ಹರಿಸುತ್ತಾರೆ. ಗ್ರಾಹಕರ ಈ ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು ಆನ್‌ ಲೈನ್ ವ್ಯಾಪಾರಿಗಳೂ ಈ ಎರಡು ಸಂಗತಿಗಳತ್ತ ಹೆಚ್ಚು ಒತ್ತು ಕೊಟ್ಟಿದ್ದಾರೆ.

ಆನ್‌ಲೈನ್ ಚಿಲ್ಲರೆ ಮಾರಾಟದಲ್ಲಿ ನೀಡಲಾಗುವ ರಿಯಾಯ್ತಿಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾ ಗಿದೆ. ಅಲ್ಲದೇ, ಪ್ರತಿಯೊಂದು ಉತ್ಪನ್ನದ ಚಿತ್ರದ ಜೊತೆಗೆ ಅದನ್ನು ತಯಾರಿಸಲು ಬಳಸಲಾದ ಸಾಮಗ್ರಿಗಳು, ಉಪಯೋಗಿಸುವ ವಿಧಾನವನ್ನು ಸವಿವರವಾಗಿ ಬರೆಯಲಾಗಿರುವುದರಿಂದ ಆನ್‌ಲೈನ್ ಖರೀದಿ ಇನ್ನೂ ಹೆಚ್ಚು ಸುಲಭವಾಗಿದೆ.

ಸವಾಲಿನ / ಸರಳ / ಶೈಕ್ಷಣಿಕ / ಸೃಜನಶೀಲ ಮತ್ತು ಕಲಾತ್ಮಕ ಹೀಗೆ ವಿವಿಧ ಶ್ರೇಣಿಗಳಲ್ಲಿ ಪ್ರತ್ಯೇಕವಾಗಿ ಜೋಡಿಸಿಟ್ಟ ಉತ್ಪನ್ನಗಳನ್ನು ತಂತಮ್ಮ ಆದ್ಯತೆಯ ಆಧಾರದ ಮೇಲೆ ಆಯ್ದುಕೊಳ್ಳಲು ಗ್ರಾಹಕರಿಗೆ ಇಲ್ಲಿ ಅನುಕೂಲವಾಗುತ್ತದೆ. l

Write A Comment