ಕರ್ನಾಟಕ

ನಗರದಲ್ಲಿ ಆರ್ಯವೇದ ಹಾಗೂ ನಾಟಿ ವೈದ್ಯಕೀಯ ಸೌಲಭ್ಯ

Pinterest LinkedIn Tumblr

Bowring Hospital  Bangalore_ 3-6-1970

ಹಿಂದಿನಿಂದಲೂ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿನ ಜನರಿಗೆ ಆರ್ಯವೇದ ಹಾಗೂ ನಾಟಿ (ನಾಡು) ವೈದ್ಯಕೀಯ ಸೌಲಭ್ಯಗಳು ದೊರೆಯುತ್ತಿದ್ದಿರಬೇಕು. ನೇಯ್ಗೆಗೆ ಪ್ರಸಿದ್ಧವಾಗಿದ್ದ ಬೆಂಗಳೂರಿಗೆ ಬಂದವರು ಇಲ್ಲಿನ ವಾತಾವರಣಕ್ಕೆ ಮನಸೋತು ಇಲ್ಲಿಯೇ ನೆಲೆಯೂರಿ ಬಿಡುತ್ತಿದ್ದರು. ಮುಸ್ಲಿಮರ ಆಗಮನದಿಂದ ಯುನಾನಿ ಹಾಗೂ ಬ್ರಿಟಿಷರ ಆಗಮನದಿಂದ ಆಧುನಿಕ ವೈದ್ಯ ವಿಜ್ಞಾನವೂ ಇಲ್ಲಿ ಬೇರು ಬಿಟ್ಟಿತು. ಆಗ ನಗರದಲ್ಲಿ ‘ಫಿರಂಗಿ ವೈದ್ಯ ಪದ್ಧತಿ’ಯ ಚಿಕಿತ್ಸಾಲಯಗಳು ಆರಂಭವಾದವು ಎಂದು ಲಭ್ಯವಿರುವ ದಾಖಲೆಗಳು ಪುಷ್ಟೀಕರಿಸುತ್ತವೆ.

ನಗರದ ಟಿಪ್ಪು ಅರಮನೆಯ ಕೋಟೆಯಲ್ಲಿದ್ದ ಕಮಿಷನರ್‌ ಅವರ ಕಚೇರಿಯ ಒಂದು ಕೋಣೆಯಲ್ಲಿ 1833ರಲ್ಲಿ ಬೆಂಗಳೂರಿನ ಮೊಟ್ಟಮೊದಲ ಆಧುನಿಕ ವೈದ್ಯ ಪದ್ಧತಿಯ ಡಿಸ್ಪೆನ್ಸರಿ ಪ್ರಾರಂಭವಾಯಿತು. ನಂತರ 1834ರಲ್ಲಿ ಮತ್ತೊಂದು ಡಿಸ್ಪೆನ್ಸರಿ ಕಂಟೋನ್ಮೆಂಟ್‌ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿತು. 1849ರಲ್ಲಿ ಕಮಿಷನರ್‌ ಕಚೇರಿಯ ಕೋಣೆಯಲ್ಲಿ ನಡೆಯುತ್ತಿದ್ದ ಡಿಸ್ಪೆನ್ಸರಿಗೂ ಪ್ರತ್ಯೇಕ ಸುಸಜ್ಜಿತ ಕಟ್ಟಡ ದೊರೆಯಿತು.

ನಗರದ ‘ಪೇಟೆ’ಯಲ್ಲಿ (ಹಳೆ ನಗರ) 1839ರಲ್ಲಿ ಮೊಟ್ಟ ಮೊದಲ ಆಧುನಿಕ ವೈದ್ಯಕೀಯ ಆಸ್ಪತ್ರೆ ಪ್ರಾರಂಭವಾಯಿತು. ಇದು 1852, 1865 ಹಾಗೂ 1866ರಲ್ಲಿ ಕ್ರಮವಾಗಿ ವಿಸ್ತೀರ್ಣಗೊಂಡಿತು. 1852ರ ವೇಳೆಗೆ ಕಂಟೋನ್ಮೆಂಟ್‌ ಬಜಾರಿನಲ್ಲಿ 70 ಒಳ ರೋಗಿಗಳ ಆಸ್ಪತ್ರೆ ಆರಂಭವಾಯಿತು.

1845ರಲ್ಲಿ ಕುಷ್ಟ ರೋಗಿಗಳ ವಸತಿ ಕೇಂದ್ರ, 1850ರಲ್ಲಿ ಮನೋರೋಗಿಗಳ ವಸತಿಧಾಮ ಆರಂಭವಾಯಿತು. ಇಂದಿನ ನೃಪತುಂಗ ರಸ್ತೆಯನ್ನು ಅಂದು ಸೆನಟಾಫ್‌ ರಸ್ತೆ ಎಂದು ಕರೆಯಲಾಗುತ್ತಿತ್ತು. ಇಲ್ಲಿ  ರಾವ್‌ ಬಹದ್ದೂರ್‌ ಎಲೆ ಮಲ್ಲಪ್ಪಶೆಟ್ಟಿ ಅವರು ನೀಡಿದ ದಾನದಿಂದ ಬೆಂಗಳೂರಿನ ಮೊದಲ ಹೆರಿಗೆ ಆಸ್ಪತ್ರೆ ಆರಂಭಗೊಂಡಿತು. ಇದು 1883ರಲ್ಲಿ ಬೆಂಗಳೂರು ಮುನಿಸಿಪಾಲಿಟಿಯ ಸ್ವಾಧೀನಕ್ಕೆ ಬಂತು. 1884ರ ನಂತರ ಇಲ್ಲಿ ಹೆರಿಗೆ ಅಲ್ಲದೆ ಇತರೆ ರೋಗಿಗಳ ಚಿಕಿತ್ಸೆಗೂ ಅವಕಾಶ ಕಲ್ಪಿಸಲಾಯಿತು. ನಗರದಲ್ಲಿ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆ ಆರಂಭವಾಗುವವರೆಗೂ ಇದೊಂದೇ ಹೆರಿಗೆ ಆಸ್ಪತ್ರೆ ಇತ್ತು.

ಬೌರಿಂಗ್‌ ಇತಿಹಾಸ
ಬ್ರಿಟಿಷರು ಹೆಚ್ಚಾಗಿ ವಾಸಿಸುತ್ತಿದ್ದ ಶಿವಾಜಿನಗರ ಪ್ರದೇಶದಲ್ಲಿ 1866ರಲ್ಲಿ ಇಂದು ಬೌರಿಂಗ್‌ ಎಂದು ಪ್ರಸಿದ್ಧಿಯಾಗಿರುವ ಆಸ್ಪತ್ರೆಯ ನಿರ್ಮಾಣ ಕಾರ್ಯ  ಶುರುವಾಯಿತು. ಪ್ಯಾರಿಸ್‌ನಲ್ಲಿದ್ದ ಲಾ ರಿಬೋಸಿ ಕಟ್ಟಡದ ನಕ್ಷೆಯನ್ನು ಆಧಾರವಾಗಿಟ್ಟುಕೊಂಡು ಈ ಆಸ್ಪತ್ರೆಯನ್ನು ಕಟ್ಟಲಾಯಿತು. ಇದು ಅಂದು ನಗರದ ದೊಡ್ಡ ಪ್ರಪ್ರಥಮ ಆಸ್ಪತ್ರೆಯಾಗಿತ್ತು. 1868ರಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡು  ಕಾರ್ಯ ಆರಂಭಿಸಿತು. ಅಂದಿನ ಮೈಸೂರು ರಾಜ್ಯದ ಕಮಿಷನರ್ ಆಗಿದ್ದ ಬೌರಿಂಗ್ ಅವರ ಹೆಸರನ್ನೇ ಈ ಆಸ್ಪತ್ರೆಗೆ ಇಡಲಾಯಿತು.

1900ರವರೆಗೆ ಆಸ್ಪತ್ರೆಯ ಖರ್ಚುವೆಚ್ಚ ಹಾಗೂ ಆಡಳಿತ ಮುನಿಸಿಪಲ್‌ ಕಮಿಷನ್‌ ನಿಯಂತ್ರಣದಲ್ಲಿತ್ತು. ಏಪ್ರಿಲ್‌ 1900ರ ನಂತರ ಆಸ್ಪತ್ರೆಯ ಜವಾಬ್ದಾರಿಯನ್ನು ಅಂದಿನ ಬ್ರಿಟಿಷ್‌ ಸರ್ಕಾರ ಹೊತ್ತಿತ್ತು. 1900ರಲ್ಲಿ ಹಳೇ ಕಟ್ಟಡಕ್ಕೆ ಹೊಸ ಕೊಠಡಿಗಳನ್ನು ಸೇರಿಸಿ ನವೀಕರಿಸಲಾಯಿತು. ಇದನ್ನು ಲೇಡಿ ಕರ್ಜನ್‌ ಅವರು ಡಿಸೆಂಬರ್‌ 10ರಂದು ಉದ್ಘಾಟಿಸಿದರು. ಅದಕ್ಕಾಗಿ ಈ ಭಾಗವನ್ನು ಲೇಡಿ ಕರ್ಜನ್‌ ಮಹಿಳೆಯರ ಹಾಗೂ ಮಕ್ಕಳ ಆಸ್ಪತ್ರೆ ಎಂದು ಕರೆಯಲಾಯಿತು. ಇಲ್ಲಿ ಇಂಗ್ಲೆಂಡ್‌ನಲ್ಲಿ ಓದಿ ಬಂದಿದ್ದ ವಿಶೇಷ ತಜ್ಞರು ಆಗಲೇ ಕೆಲಸ ಮಾಡುತ್ತಿದ್ದದ್ದು ವಿಶೇಷ.

ವಿಕ್ಟೋರಿಯಾ ಆಸ್ಪತ್ರೆ
ಮೈಸೂರು ಮಹಾರಾಣಿಯಾಗಿದ್ದ ಕೆಂಪನಂಜಮ್ಮಣ್ಣಿ ಅವರು ವಿಕ್ಟೋರಿಯಾ ಆಸ್ಪತ್ರೆಗೆ 1877ರಲ್ಲಿ ಆಸ್ತಿಭಾರ ಹಾಕಿದರು. ಇದು ವಿಕ್ಟೋರಿಯಾ ಸಾಮ್ರಾಜ್ಞಿಯ ಆಳ್ವಿಕೆಯ 60 ವರ್ಷಗಳು ತುಂಬುವ ಸಂದರ್ಭದ ಕೊಡುಗೆಯಾಗಿದ್ದ ಕಾರಣಕ್ಕೆ ಇದಕ್ಕೆ ವಿಕ್ಟೋರಿಯಾ ಎಂದು ನಾಮಕರಣ ಮಾಡಲಾಯಿತು.

ಆರಂಭದಲ್ಲಿ 100 ಹಾಸಿಗೆಗಳನ್ನು ಹೊಂದಿದ್ದು, 8 ವಿಭಾಗಗಳಿಂದ ಕೂಡಿದ್ದು, ಒಂದು ಶಸ್ತ್ರ ಚಿಕಿತ್ಸಾ ವಿಭಾಗ ಮತ್ತು ಒಂದು ಸಣ್ಣ ಪ್ರಯೋಗಾಯಲಯವನ್ನು ಮಾತ್ರ ಹೊಂದಿತ್ತು. ಆದರೆ ಇಂದು ಸಾವಿರಕ್ಕೂ ಹೆಚ್ಚು ಒಳ ರೋಗಿಗಳಿಗೆ ಸೇವೆ ಸಲ್ಲಿಸುವ ಅತ್ಯಂತ ಹಿರಿಯ ಆಸ್ಪತ್ರೆಯಾಗಿದೆ.

ಇದು ಸ್ನಾತಕ, ಸ್ನಾತಕೋತ್ತರ ಮತ್ತು ಅರೆ ವೈದ್ಯಕೀಯ ವಿದ್ಯಾರ್ಥಿಗಳ ಜ್ಞಾನ ದೇಗುಲವಾಗಿದೆ. ಪ್ರಸೂತಿ ಶಾಸ್ತ್ರ, ನೇತ್ರ ಶಾಸ್ತ್ರ, ಮತ್ತು ಮಕ್ಕಳ ರೋಗಗಳ ಚಿಕಿತ್ಸೆಯ ಆಸ್ಪತ್ರೆಗಳು ಇದಕ್ಕೆ ಹೊಂದಿಕೊಂಡಿವೆ.

ಮಿಂಟೋ ನೇತ್ರ ಚಿಕಿತ್ಸಾ ಪ್ರಾದೇಶಿಕ ಸಂಸ್ಥೆ
ನಗರದ ಸಂತೆಪೇಟೆಯ ರಸ್ತೆಯಲ್ಲಿ ಒಂದು ಸಣ್ಣ ನೇತ್ರ ಚಿಕಿತ್ಸೆಯ ಕ್ಲಿನಿಕ್‌ ಪ್ರಾರಂಭವಾಯಿತು. ಇದೇ ಮುಂದೆ ಮಿಂಟೋ ಆಗಿ ಬೆಳೆಯಿತು. ಈ ಸಂಸ್ಥೆಯು ಸ್ಥಾಪಿತವಾಗಿರುವ ಹಾಲಿ ಕಟ್ಟಡವನ್ನು 1913ರಲ್ಲಿ ಕಟ್ಟಲಾಯಿತು. 1913ರಲ್ಲಿ ಮಿಂಟೋ ಕಣ್ಣಾಸ್ಪತ್ರೆಯನ್ನು ಸ್ಥಾಪಿಸಲಾಯಿತು. ನಂತರ 1982ರ ಜನವರಿಯಲ್ಲಿ ಮಿಂಟೋ ನೇತ್ರ ಚಿಕಿತ್ಸಾ ಪ್ರಾದೇಶಿಕ ಸಂಸ್ಥೆಯಾಗಿ ಬೆಳೆಯಿತು. ವೈಸ್‌ರಾಯ್‌ ಮಿಂಟೋ ಅವರ ನೆನಪಿಗಾಗಿ ಇದಕ್ಕೆ ಮಿಂಟೋ ಎಂದು ನಾಮಕರಣ ಮಾಡಲಾಯಿತು. ಇಲ್ಲಿ 300 ಒಳ ರೋಗಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳ್ನು ಕಲ್ಪಿಸಲಾಗಿದೆ.

ವಾಣಿವಿಲಾಸ ಆಸ್ಪತ್ರೆ
ಅಂತರರಾಷ್ಟ್ರೀಯ ಮಹಿಳಾ ದಿನದಂದು 1935ರಲ್ಲಿ ಕೃಷ್ಣರಾಜ ಒಡೆಯರ್‌ ಅವರು ಇದನ್ನು ಉದ್ಘಾಟಿಸಿದರು. ಇದಕ್ಕೆ ಅವರ ತಾಯಿಯ ಹೆಸರನ್ನೇ ಇಡಲಾಗಿದೆ. ಆರಂಭದಲ್ಲಿ ಸ್ತ್ರೀಯರಿಗೆ 150 ಮತ್ತು ಮಕ್ಕಳಿಗೆ 100 ಹಾಸಿಗೆಗಳ ಸೌಲಭ್ಯ ಇತ್ತು. ಈಗ ಮಹಿಳೆಯರಿಗೆ 400, ಮಕ್ಕಳಿಗೆ 80, ಮಕ್ಕಳ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ 36 ಹಾಗೂ ಕುಟುಂಬ ನಿಯಂತ್ರಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ 20 ಹಾಸಿಗೆಗಳು ಲಭ್ಯವಿದೆ.

ಇಷ್ಟೇ ಅಲ್ಲದೆ ಎಸ್‌.ಡಿ.ಎಸ್‌. ಕ್ಷಯ ಮತ್ತು ರಾಜೀವ್‌ಗಾಂಧಿ ಎದೆ ರೋಗಗಳ ಚಿಕಿತ್ಸಾ ಸಂಸ್ಥೆ, ವೆಂಕಟೇಶ್ವರ ಕಿವಿ, ಮೂಗು ಮತ್ತು ಗಂಟಲು ರೋಗಗಳ ಚಿಕಿತ್ಸಾ ಸಂಸ್ಥೆ, ಮಾನಸಿಕ ರೋಗಿಗಳ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ, ಕೆ.ಸಿ. ಸಾರ್ವಜನಿಕ ಆಸ್ಪತ್ರೆ. ಜಯನಗರ ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಘಟಕಗಳು, ಕಾರ್ಪೋರೇಷನ್‌ ಆಸ್ಪತ್ರೆಗಳು ಹಾಗೂ ಡಿಸ್ಪೆನ್ಸರಿಗಳು, ವಿಮಾ ಆಸ್ಪತ್ರೆಗಳು ನಗರದಲ್ಲಿ ತಲೆ ಎತ್ತಿದವು.

Write A Comment